ಸಾರಾಂಶ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಅಗತ್ಯ ವಸ್ತುಗಳ ಬೆಲೆ ಇಳಿಕೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಒನಕೆ ಓಬವ್ವ ವೃತ್ತದಲ್ಲಿ ಸಭೆ ಸೇರಿ, ಅಗತ್ಯ ವಸ್ತುಗಳ ಬೆಲೆ ಏರಿಸಿ ಜನ ವಿರೋಧಿ ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿದರು. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೆ ಹಾಲಿನ ಬೆಲೆ ಹೆಚ್ಚಿಸಿ ಜನ ಸಾಮಾನ್ಯರ ಬದುಕಿನ ಮೇಲೆ ಸರ್ಕಾರ ಹೆಚ್ಚು ಹೊರೆ ಮಾಡಿದೆ ಎಂದು ದೂರಿದರು.
ಆಡಳಿತದ ಅನುಕೂಲಕ್ಕಾಗಿ ಬೇಕಾ ಬಿಟ್ಟಿ ಬೆಲೆ ಏರಿಸಿ ಜನರ ಬದುಕಿನ ಜೊತೆ ಆಟವಾಡುವ ಕೆಲಸ ಸರ್ಕಾರ ಮಾಡುತ್ತಿದೆ. ವಿದ್ಯಾರ್ಥಿ, ರೈತ ಕಾರ್ಮಿಕ ಸೇರಿ ಮಧ್ಯಮ ವರ್ಗದ ಬಡಜನರಿಗೆ ಸರ್ಕಾರದ ಈ ನಡೆ ಆಘಾತವನ್ನುಂಟು ಮಾಡಿದೆ ಎಂದರು.ಮುಂಬರುವ ದಿನಗಳಲ್ಲಿ ಬಸ್ ದರ ಹೆಚ್ಚಿಸುವ ಪ್ರಸ್ತಾವನೆಯನ್ನು ಸಾರಿಗೆ ಸಚಿವರು ಮಾಡಲಿದ್ದಾರೆ ಎನ್ನುವ ಮಾಹಿತಿ ಇದೆ. ಆರ್ಥಿಕ ಸಂಪನ್ಮೂಲಗಳ ಕ್ರೂಡೀಕರಣಕ್ಕೆ ಸರ್ಕಾರಕ್ಕೆ ಸಾಕಷ್ಟು ದಾರಿಗಳಿವೆ. ಆದರೆ, ಜನ ಸಾಮಾನ್ಯರ ಜೇಬಿಗೆ ಕತ್ತರಿ ಹಾಕಿ ಆ ಹಣದಿಂದಲೇ ಆಡಳಿತ ಯಂತ್ರ ನಡೆಸುತ್ತಿರುವುದು ನಿಜಕ್ಕೂ ನಾಚಿಕೆಗೇಡು. ಬೆಲೆ ಏರಿಕೆ ದುಷ್ಪರಿಣಾಮದ ಮಾಹಿತಿ ಸರ್ಕಾರಕ್ಕೆ ಸ್ಪಷ್ಟವಾಗಿಲ್ಲ. ಈ ಕೂಡಲೇ ತನ್ನ ನಿರ್ಧಾರದಿಂದ ಹಿಂದೆ ಸರಿದು ಅಗತ್ಯ ವಸ್ತುಗಳ ಬೆಲೆ ಇಳಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಸೇನೆ ಜಿಲ್ಲಾಧ್ಯಕ್ಷ ಎಂ.ತಿಪ್ಪೇಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ತ್ಯಾಗರಾಜ್, ಉಪಾಧ್ಯಕ್ಷ ಶರೀಫ್, ಶಿವಣ್ಣ, ಕಾರ್ಮಿಕ ಘಟಕದ ಅಧ್ಯಕ್ಷ ಫೈಜುಲ್ಲಾ, ಹಿರಿಯೂರು ತಾಲೂಕು ಅಧ್ಯಕ್ಷ ಲಕ್ಷ್ಮೀಕಾಂತ್, ನಗರಾಧ್ಯಕ್ಷ ರಾಮು, ಯುವ ಘಟಕದ ಅಧ್ಯಕ್ಷ ಅನಿಲ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ನಂದಕುಮಾರ್, ಗ್ರಾಮ ಘಟಕದ ಅಧ್ಯಕ್ಷ ಶಿವರಾಜ್, ಸದಸ್ಯ ಮಲ್ಲಿಕಾರ್ಜನ್ ಭಾಗವಹಿಸಿದ್ದರು.