ಬೆಳೆ ನಷ್ಟ ಪರಿಹಾರ ರೈತರ ಖಾತೆಗೆ ಶೀಘ್ರ ಜಮೆ ಮಾಡಲು ಆಗ್ರಹ

| Published : Jun 11 2024, 01:34 AM IST

ಬೆಳೆ ನಷ್ಟ ಪರಿಹಾರ ರೈತರ ಖಾತೆಗೆ ಶೀಘ್ರ ಜಮೆ ಮಾಡಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಗಾರು ಬೆಳೆ ವಿಮೆ ನೀಡಿಕೆಯಲ್ಲಿ ಆಗಿರುವ ತಾರತಮ್ಯ ಸರಿಪಡಿಸಬೇಕು. ೨೦೨೩-೨೪ರಲ್ಲಿ ಭೀಕರ ಬರಗಾಲದಿಂದ ಬೆಳೆ ನಷ್ಟವಾಗಿದ್ದು, ಬೆಳೆ ಪರಿಹಾರವನ್ನು ರಾಜ್ಯ ಸರ್ಕಾರ ಶೀಘ್ರವೇ ರೈತರ ಖಾತೆಗೆ ಜಮಾ ಮಾಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕದಿಂದ ಸೋಮವಾರ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಹಾವೇರಿ: ಮುಂಗಾರು ಬೆಳೆ ವಿಮೆ ನೀಡಿಕೆಯಲ್ಲಿ ಆಗಿರುವ ತಾರತಮ್ಯ ಸರಿಪಡಿಸಬೇಕು. ೨೦೨೩-೨೪ರಲ್ಲಿ ಭೀಕರ ಬರಗಾಲದಿಂದ ಬೆಳೆ ನಷ್ಟವಾಗಿದ್ದು, ಬೆಳೆ ಪರಿಹಾರವನ್ನು ರಾಜ್ಯ ಸರ್ಕಾರ ಶೀಘ್ರವೇ ರೈತರ ಖಾತೆಗೆ ಜಮಾ ಮಾಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕದಿಂದ ಸೋಮವಾರ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ರೈತ ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಬರಗಾಲದಿಂದ ಬೆಳೆ ನಷ್ಟ ಹೊಂದಿದ ರೈತರಿಗೆ ಸಮರ್ಪಕವಾಗಿ ಬೆಳೆ ಹಾನಿ ಪರಿಹಾರ ಕೊಟ್ಟಿಲ್ಲ, ರಾಜ್ಯ ಸರ್ಕಾರದ ಎಸ್.ಡಿ.ಆರ್.ಎಫ್. ಪ್ರಕಾರ ಪ್ರತಿ ಹೆಕ್ಟೇರ್‌ಗೆ ೮೫೦೦ ರು. ಬರ ಪರಿಹಾರ ಕೊಡಬೇಕು. ಬಿತ್ತನೆ ಬೀಜದ ಬೆಲೆ ದುಪ್ಪಟ್ಟಾಗಿದ್ದು, ಕೃಷಿ ಇಲಾಖೆ ಅದಕ್ಕೆ ಕಡಿವಾಣ ಹಾಕಿ, ರಸಗೊಬ್ಬರ ಡಿ.ಎ.ಪಿ. ಮತ್ತು ಯೂರಿಯಾ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕು. ರೈತ ವಿಮಾ ಹಂಚಿಕೆ ವೇಳೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈಗಾಗಲೇ ಮಧ್ಯಂತರ ಪರಿಹಾರದ ಬಾಕಿ ಶೇ.೭೫ರಷ್ಟು ವಿಮಾ ಪರಿಹಾರ ಹಂಚಿಕೆ ಮಾಡಿದ್ದು, ಹಾವೇರಿ ಜಿಲ್ಲೆಯಲ್ಲಿ ಮಾತ್ರವೇ ಬಾಕಿ ಉಳಿಸಿಕೊಂಡಿದ್ದೇಕೆ? ಪಾರದರ್ಶಕವಾಗಿ ಸಮೀಕ್ಷೆ ನಡೆಸದೇ, ರೈತರಿಗೆ ಅನ್ಯಾಯವಾಗಿದ್ದು ಮರು ಪರಿಶೀಲನೆ ಮಾಡಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.ರಸಗೊಬ್ಬರವನ್ನು ವ್ಯವಸಾಯ ಸಹಕಾರಿ ಸಂಘ ಹಾಗೂ ರೈತ ಉತ್ಪಾದಕ ಕಂಪನಿಗಳಿಂದ ಪೂರೈಸಬೇಕು. ಜಿಲ್ಲೆಗೆ ಪ್ರತ್ಯೇಕ ಡಿ.ಸಿ.ಸಿ. ಬ್ಯಾಂಕ್ ಮಂಜೂರು ಮಾಡಿ, ಅಲ್ಲಿ ಐದು ಲಕ್ಷ ರು.ಗಳವರೆಗೆ ಬಡ್ಡಿ ರಹಿತ ಸಾಲ ಪಡೆಯಲು ಅನುಕೂಲ ಮಾಡಿಕೊಡಬೇಕು. ಅಕ್ರಮ -ಸಕ್ರಮ ಯೋಜನೆ ಅಡಿ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಮತ್ತು ಟಿಸಿ ಅಳವಡಿಸಿ ಕೊಡಬೇಕು. ಬ್ಯಾಂಕುಗಳಲ್ಲಿ ಸಾಲ ಮರುಪಾವತಿ ನೊಟೀಸ್ ನೀಡುತ್ತಿದ್ದು ಅದನ್ನು ತಡೆಯುವ ಜತೆಗೆ ಆಸಕ್ತ ರೈತರಿಂದ ಓ.ಟಿ.ಎಸ್. (ಒನ್‌ಟೈಮ್ ಸೆಟ್ಲಮೆಂಟ್)ನಲ್ಲಿ ಸಾಲ ಮರುಪಾವತಿ ಮಾಡಿಕೊಳ್ಳಬೇಕು. ಕೃಷಿ ಸಾಲಕ್ಕೆ ಸರ್ಕರದ ಪರಿಹಾರ ಮತ್ತು ಸಹಾಯಧನವನ್ನು ಕಟಾಯಿಸಿಕೊಳ್ಳಬಾರದು. ಜಿಲ್ಲೆಯ ರೈತರಿಗೆ ಕೆ.ಎಂ.ಎಫ್. ಸಹಾಯ ಧನ ಕಳೆದ ೮-೯ತಿಂಗಳಿನಿಂದ ರೈತರ ಖಾತೆಗೆ ಜಮಾ ಆಗಿಲ್ಲ. ರೈತರು ಸಂಕಷ್ಟ್ಟದಲ್ಲಿರುವುದರಿಂದ ಈ ಕೂಡಲೇ ಸಹಾಯ ಧನವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಅಣ್ಣಯ್ಯ, ಉಪವಿಭಾಗಾಧಿಕಾರಿ ಚನ್ನಪ್ಪ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಆಗಮಿಸಿ ರೈತರ ಅಹವಾಲು ಸ್ವೀಕರಿಸಿದರು.ಮನವಿ ಸ್ವೀಕರಿಸಿದ ನಂತರ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಮಾತನಾಡಿ, ಜಿಲ್ಲೆಯ ಎಲ್ಲಾ ಎಕ್ಸಪೆರಿಮೆಂಟ್‌ಗಳ ಬಗ್ಗೆ ರೈತರು ಆಕ್ಷೇಪಣೆ ಸಲ್ಲಿಸಿದಲ್ಲಿ ಅವುಗಳ ಮರು ಸರ್ವೆಗೆ ಸೂಚನೆ ನೀಡಲಾಗುವುದು. ಲಿಂಕ್ ಇಲ್ಲದಂತೆ ಗೊಬ್ಬರ ಕೊಡಿ ಎಂದು ಈಗಾಗಲೇ ಸೂಚನೆ ನೀಡಲಾಗಿದೆ. ಪ್ರಸಕ್ತ ರೈತರಿಗೆ ಅಗತ್ಯದಷ್ಟು ಗೊಬ್ಬರ ನಮ್ಮ ಬಳಿ ಸಂಗ್ರಹವಿದೆ. ಅಗತ್ಯವಿದ್ದಲ್ಲಿ ಹೆಚ್ಚಿನ ಗೊಬ್ಬರವನ್ನು ತರಿಸಿ ಪೂರೈಸಲಾಗುವುದು. ಇನ್ನು ರೈತ ಸಹಕಾರಿ ಸೊಸೈಟಿಗಳು ಗೊಬ್ಬರ ಮಾರಾಟಕ್ಕೆ ಆಸಕ್ತಿ ತೋರಿದಲ್ಲಿ ಅವರಿಗೆ ಗೊಬ್ಬರ ಸರಬರಾಜು ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಶಿವಬಸಪ್ಪ ಗೋವಿ, ಅಡಿವೆಪ್ಪ ಆಲದಕಟ್ಟಿ, ಪ್ರಭುಗೌಡ ಪ್ಯಾಟಿ, ಶಿವಯೋಗಿ ಹೊಸಗೌಡ್ರ, ಬಸನಗೌಡ ಗಂಗಪ್ಪನವರ, ಸುರೇಶ ಛಲವಾದಿ, ಮಹಮದ್‌ಗೌಸ್ ಪಾಟೀಲ, ಎಚ್.ಎಚ್.ಮುಲ್ಲಾ, ಮಂಜು ಕದಂ, ಮುತ್ತು ಗುಡಗೇರಿ, ಚಿನ್ನಪ್ಪ ಮರಡೂರ, ಮಾಲತೇಶ ಪರಸಪ್ಪನವರ ಸೇರಿದಂತೆ ಹತ್ತಾರು ಮಹಿಳಾ ಮುಖಂಡರೂ, ರೈತರು ಪಾಲ್ಗೊಂಡಿದ್ದರು.