ಆಲಮಟ್ಟಿ ಜಲಾಶಯದ ನೀರು ಮರು ಹಂಚಿಕೆಗೆ ಒತ್ತಾಯ

| Published : Sep 24 2024, 01:45 AM IST

ಆಲಮಟ್ಟಿ ಜಲಾಶಯದ ನೀರು ಮರು ಹಂಚಿಕೆಗೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಆಲಮಟ್ಟಿ ಜಲಾಶಯದ ನೀರಿನ ಮರು ಹಂಚಿಕೆಯ ವಿಷಯವಾಗಿ ಕರ್ನಾಟಕ ರೈತ ಸಂಘ - ಹಸಿರು ಸೇನೆ, ಅಖಂಡ ಕರ್ನಾಟಕ ರೈತ ಸಂಘ, ಅವಳಿ ಜಲಾಶಯಗಳ ನೀರು ಮರು ಹಂಚಿಕೆ ಹೋರಾಟ ಸಮಿತಿಯ ಜಿಲ್ಲಾ ಘಟಕ ಸೇರಿ ವಿವಿಧ ರೈತಪರ ಸಂಘಟನೆಗಳ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಆಲಮಟ್ಟಿ ಜಲಾಶಯದ ನೀರಿನ ಮರು ಹಂಚಿಕೆಯ ವಿಷಯವಾಗಿ ಕರ್ನಾಟಕ ರೈತ ಸಂಘ - ಹಸಿರು ಸೇನೆ, ಅಖಂಡ ಕರ್ನಾಟಕ ರೈತ ಸಂಘ, ಅವಳಿ ಜಲಾಶಯಗಳ ನೀರು ಮರು ಹಂಚಿಕೆ ಹೋರಾಟ ಸಮಿತಿಯ ಜಿಲ್ಲಾ ಘಟಕ ಸೇರಿ ವಿವಿಧ ರೈತಪರ ಸಂಘಟನೆಗಳ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಆಲಮಟ್ಟಿ ಜಲಾಶಯದ ನಿರ್ಮಾಣಕ್ಕೆ ಫಲವತ್ತಾದ ಭೂಮಿಯನ್ನು ಕಳೆದುಕೊಂಡು ದಿಕ್ಕು ತೋಚದಂತಾಗಿದ್ದಾರೆ. ನಮ್ಮ ಜಿಲ್ಲೆಯವರು ಭೂಮಿ ಕಳೆದುಕೊಂಡಿದ್ದು, ಫಲ ಉಣ್ಣುತ್ತಿರುವವರು ನೆರೆಯ ಬಸವ ಸಾಗರ ಆಣೆಕಟ್ಟು ಹಾಗೂ ಆಂಧ್ರದ ಜನ. ಆದ್ದರಿಂದ ಈ ನೀರು ಹಂಚಿಕೆಯ ತಾರತಮ್ಯವನ್ನು ಕೂಡಲೇ ಇತ್ಯರ್ಥಪಡಿಸಿ ೨ ಆಲಮಟ್ಟಿ ಹಾಗೂ ಬಸವಸಾಗರ ಜಲಾಶಯಗಳ ನೀರನ್ನು ಮರು ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.ರೈತ ನಿಯೋಗ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಬಳಿ ಸಭೆಗೆ ಸಮಯ ನಿಗದಿಪಡಿಸಬೇಕು ಎಂದು ಮನವಿ ಮಾಡಿದರು. ಈ ವೇಳೆ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಆಲಮಟ್ಟಿ ಲಾಲ್ ಬಹದ್ದೂರ ಶಾಸ್ತ್ರಿ ಜಲಾಶಯ ಮತ್ತು ನಾರಾಯಣಪುರದ ಬಸವ ಸಾಗರ ನಿರ್ಮಾಣಕ್ಕೆ ಅಖಂಡ ವಿಜಯಪುರ ಜಿಲ್ಲೆಯ ಸುಮಾರು ೨೦೧ ಗ್ರಾಮಗಳು ಬಾಧಿತವಾಗಿ ೧೩೬ ಗ್ರಾಮಗಳು ಸಂಪೂರ್ಣ ಮುಳುಗಡೆಯಾಗುತ್ತವೆ. ಅಂದಾಜು ೪ ಲಕ್ಷ ಕುಟುಂಬಗಳು ನಿರಾಶ್ರಿತರಾಗಿದ್ದಾರೆ. ಆದರೆ, ಜಿಲ್ಲೆಯ ರೈತರ ಜಮೀನುಗಳಿಗೆ ನೀರು ದೊರೆಯುತ್ತಿಲ್ಲ.

ಕೃಷ್ಣಾ ಮೇಲ್ದಂಡೆ ಯೋಜನೆಯ ಸಾಕಾರಕ್ಕಾಗಿ ಜಿಲ್ಲೆಯ ರೈತರು ಹಾಗೂ ಕುಟುಂಬಗಳು ಪೂರ್ವಜರಿಂದ ವಾಸವಾಗಿರುವ ಮನೆ, ಜಮೀನುಗಳನ್ನು ತ್ಯಾಗ ಮಾಡಿ ಸರ್ಕಾರ ಕೊಟ್ಟ ಜಾಗದಲ್ಲಿ ವಾಸವಾಗಿದ್ದರೆ, ಇನ್ನು ಕೆಲವರು ದಿಕ್ಕು ದೆಸೆ ಇಲ್ಲದಂತೆ ಸರ್ಕಾರ ನೀಡಿದ ಪರಿಹಾರ ಪಡೆದು ಬೇರೆಕಡೆಗಳಲ್ಲಿ ಹೋಗಿದ್ದಾರೆ.

ತ್ಯಾಗ ಮಾಡಿದ ಜಿಲ್ಲೆಯ ರೈತರಿಗೆ ಸ್ಕೀಮ್ ಎ ಮತ್ತು ಸ್ಕೀಂ ಬಿ ಹೆಸರಿನಲ್ಲಿ ನೀರಿನಿಂದ ವಂಚಿಸಲಾಗುತ್ತಿದೆ. ಇದನ್ನು ಬಗೆಹರಿಸಿ ಈ ಭಾಗದ ರೈತರಿಗೆ ಎನಿ ಟೈಮ್ ವಾಟರ್ ಎನ್ನುವಂತೆ ರೈತರಿಗೆ ಅಗತ್ಯವಿರುವ ಸಂದರ್ಭದಲ್ಲಿ ನೀರು ಒದಗಿಸಬೇಕೆಂದು ಮನವಿ ಮಾಡಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ಲಾಲ್ ಬಹದ್ದೂರ ಶಾಸ್ತ್ರಿ ಜಲಾಶಯದ ವ್ಯಾಪ್ತಿಯ ಚಾಲ್ತಿಯಲ್ಲಿರು ಎಲ್ಲ ಕಾಲುವೆಗಳಿಗೆ ನೀರು ಹರಿಸಿದರು ಒಂದು ದಿನಕ್ಕೆ ಕೇವಲ ೦.೧ ಟಿಎಂಸಿ ಅಡಿ ನೀರು ಬೇಕಾಗುತ್ತದೆ. ನಾರಾಯಣಪುರ ಜಲಾಶಯ ವ್ಯಾಪ್ತಿಯ ಕಾಲುವೆಗಳಿಗೆ ಪ್ರತಿ ದಿನ ೧ ಟಿಎಂಸಿ ನೀರು ಬೇಕಾಗುತ್ತದೆ. ಒಟ್ಟಿನಲ್ಲಿ ಅವಳಿ ಜಲಾಶಯಗಳಲ್ಲಿ ಸಂಗ್ರಹವಾಗುವ ೧೫೬ ಟಿಎಂಸಿ ನೀರಿನಲ್ಲಿ ಮುಂಗಾರು ಬೆಳೆಗಳಿಗೆ ಅವಳಿ ಜಲಾಶಯಗಳ ವ್ಯಾಪ್ತಿಯ ರೈತರ ಜಮೀನುಗಳಿಗೆ ನೀರು ಹರಿಸಲಾಗುತ್ತದೆ. ಆದರೆ ಸಪ್ಟೆಂಬರ್ ತಿಂಗಳಿನಲ್ಲಿ ಅವಳಿ ಜಲಾಶಯಗಳಲ್ಲಿ ಗರಿಷ್ಟ ನೀರಿನ ಸಂಗ್ರಹವಿರದಿದ್ದರೆ ಹಿಂಗಾರು ಬೆಳೆಗಳಿಗೆ ನೀರಿಲ್ಲ ಎಂಬುದು ವಾಡಿಕೆಯಾಗಿದೆ. ಹೀಗಾದರೆ ಕಡಿಮೆ ನೀರು ಮತ್ತು ಹೆಚ್ಚು ನೀರು ಬೇಕಾದವರಿಗೂ ಒಂದೇ ಮಾನದಂಡವಾದರೆ ಹೇಗೆ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿಗಳ ಜೊತೆ ಚರ್ಚೆ

ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಈ ವಿಷಯ ಕುರಿತು ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರಾದ ಆರ.ಬಿ.ತಿಮ್ಮಾಪುರ ಅವರನ್ನು ಭೇಟಿ ಮಾಡಿ ಮಾತನಾಡಿ. ಇಲ್ಲಿ ಬಗೆಹರೆಯದಿದ್ದರೆ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರ ಬಳಿ ಚರ್ಚಿಸಲು ಸಮಯಾವಕಾಶ ತೆಗೆದುಕೊಳ್ಳೋಣ ಎಂಬ ಭರವಸೆ ನೀಡಿದರು.

ಈ ವೇಳೆ ರಾಮನಗೌಡ ಪಾಟೀಲ, ಮಹಾದೇವಪ್ಪ ತೇಲಿ, ಸಾತಲಿಂಗಯ್ಯ ಸಾಲಿಮಠ, ಮಹಾದೇವ ಕದಂ, ಮಹಾಂತೇಶ ಮಮದಾಪುರ, ಸಂಗಪ್ಪ ಟಕ್ಕೆ, ತಿಪ್ಪರಾಯ ಭೈರೋಡಗಿ, ವಿಠ್ಠಲ ಬಿರಾದಾರ, ಸೋಮನಗೌಡ ಪಾಟೀಲ, ಪ್ರಲ್ಹಾದ ನಾಗರಾಳ, ಸಿದ್ದಪ್ಪ ಕೊಟ್ಟಲಗಿ, ಹೊನ್ನಕೆರಪ್ಪ ತೇಲಗಿ, ಸದಾಶಿವ ಬರಟಗಿ ಇತರರು ಇದ್ದರು.