ಮುಸ್ಲಿಂ ಸಮುದಾಯಕ್ಕೆ 2ಬಿ ಮೀಸಲಾತಿ ಮರುಜಾರಿಗೆ ಒತ್ತಾಯ

| Published : Dec 22 2024, 01:34 AM IST

ಮುಸ್ಲಿಂ ಸಮುದಾಯಕ್ಕೆ 2ಬಿ ಮೀಸಲಾತಿ ಮರುಜಾರಿಗೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದಿನ ಬಿಜೆಪಿ ಸರ್ಕಾರ ರದ್ದು ಮಾಡಿರುವ ಶೇ. 4ರ 2ಬಿ ಮೀಸಲಾತಿಯನ್ನು ಮುಂದಿನ ಅಧಿವೇಶನದೊಳಗಾಗಿ ಮರು ಜಾರಿ ಮಾಡಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ಮುಸ್ಲಿಂ ಸಮಾಜದ ಮುಖಂಡ ಎಂ.ಎ. ಕಾಲೇಭಾಗ್ ಹೇಳಿದ್ದಾರೆ.

ಹಾವೇರಿ: ಮುಸ್ಲಿಂ ಸಮುದಾಯದ ಯುವ ಪೀಳಿಗೆಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕವಾಗಿ ಶೇ. 4ರ 2ಬಿ ಮೀಸಲಾತಿ ಅತಿ ಅವಶ್ಯವಿದ್ದು, ಹಿಂದಿನ ಬಿಜೆಪಿ ಸರ್ಕಾರ ರದ್ದು ಮಾಡಿರುವ ಮೀಸಲಾತಿಯನ್ನು ಮುಂದಿನ ಅಧಿವೇಶನದೊಳಗಾಗಿ ಮರು ಜಾರಿ ಮಾಡಬೇಕು ಎಂದು ಮುಸ್ಲಿಂ ಸಮಾಜದ ಮುಖಂಡ ಎಂ.ಎ. ಕಾಲೇಭಾಗ್ ಒತ್ತಾಯಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಮುಸ್ಲಿಮರಿಗೆ ಇದ್ದ ಶೇ. 4ರಷ್ಟು ಮೀಸಲಾತಿ ರದ್ದುಗೊಳಿಸಿ ಆದೇಶಿಸಿತ್ತು. ಕೇವಲ ಒಂದು ಸಮುದಾಯದ ಮೀಸಲಾತಿಯನ್ನು ಇನ್ನೊಂದು ಸಮುದಾಯಕ್ಕೆ ಹಂಚಿಕೆ ಮಾಡಿರುವುದು ಅಸಂವಿಧಾನಿಕವಾಗಿದೆ. ಮೀಸಲಾತಿ ರದ್ದು ಮಾಡಿದ್ದರಿಂದ ಮುಸ್ಲಿಂ ಸಮುದಾಯವು ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ವಂಚಿತರಾಗಿದೆ ಎಂದರು.

ಆನಂತರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಮುಸ್ಲಿಂ ಸಮಾಜಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ಸಾಮಾಜಿಕ ನ್ಯಾಯ ಒದಗಿಸಿಕೊಡುತ್ತೇವೆ ಎಂದು ವಾಗ್ದಾನ ಮಾಡಿದ್ದರು. ಜತೆಗೆ ರದ್ದು ಮಾಡಿರುವ ಶೇ. 4ರಷ್ಟು ಮೀಸಲಾತಿಯನ್ನು ನೀಡುತ್ತೇವೆ ಎಂದು ಭರವಸೆ ನೀಡಿದ್ದರು. ಮೊನ್ನೆ ತಾನೆ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಮುಸ್ಲಿಂ ಸಮಾಜದ ಮೀಸಲಾತಿ ರದ್ದತಿ ಬಗ್ಗೆ ಧ್ವನಿ ಎತ್ತುತ್ತಾರೆಂಬ ನಿರೀಕ್ಷೆ ಇತ್ತು. ಆದರೆ ಯಾವ ಶಾಸಕರು, ಸಚಿವರು ಧ್ವನಿ ಎತ್ತಿಲ್ಲ, ನಿರೀಕ್ಷೆ ಹುಸಿಯಾಗಿದೆ ಎಂದರು.

ಮೀಸಲಾತಿ ರದ್ದತಿಯಿಂದಾಗಿ ಪ್ರತಿವರ್ಷ ಮೆಡಿಕಲ್ ಸೀಟ್ ಪಡೆಯುವಲ್ಲಿ ಸುಮಾರು 300 ವಿದ್ಯಾರ್ಥಿಗಳು ವಂಚಿತರಾಗುತ್ತಾರೆ. ಡೆಂಟಲ್‌ನಲ್ಲಿ 50 ಮಕ್ಕಳು, ಎಂಜಿನಿಯರಿಂಗ್‌ ವಿಭಾಗದಲ್ಲಿ 1700, ಪದವಿ ಓದುವ 600ರಿಂದ 2000 ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ಮುಂದಿನ ಅಧಿವೇಶನದ ಒಳಗಾಗಿ ರದ್ದು ಮಾಡಿರುವ ಮೀಸಲಾತಿಯನ್ನು ಸಮಾಜದ ಮಕ್ಕಳ ಶೈಕ್ಷಣಿಕ ಹಾಗೂ ಔದ್ಯೋಗಿಕ ಭವಿಷ್ಯದ ಹಿತದೃಷ್ಟಿಯಿಂದ ಸಾಮಾಜಿಕ ನ್ಯಾಯದಡಿ ಮರು ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಮುಖಂಡ ಎ.ಎಂ. ಪಟವೇಗಾರ ಇದ್ದರು.