ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ತಾಲೂಕಿನ ಎಲ್ಲ ಗ್ರಾಮದ ರೈತ ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ನೀಡಬೇಕಾದ 2ನೇ ಬಿಲ್ ರೈತರ ಖಾತೆಗೆ ಕೂಡಲೇ ಜಮಾ ಮಾಡಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘದ ತಾಲೂಕ ಅಧ್ಯಕ್ಷ ಮಹಾದೇವ ಮಡಿವಾಳ ನೇತೃತ್ವದಲ್ಲಿ ಶುಕ್ರವಾರ ತಹಸೀಲ್ದಾರ್ ಕಾರ್ಯಾಲಯದಲ್ಲಿ ನೂರಾರು ರೈತರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ತಾಲೂಕಾಧ್ಯಕ್ಷ ಮಹಾದೇವ ಮಡಿವಾಳ, ಕಾರ್ಖಾನೆಯ ಮಾಲೀಕರು ಕಬ್ಬು ಬೆಳೆಗಾರರಿಗೆ ಸರಿಯಾಗಿ ಬಿಲ್ ನೀಡುತ್ತಿಲ್ಲ. ಕಳೆದ ವರ್ಷದ ಬಾಕಿ ಬಿಲ್ ರೈತರ ಖಾತೆಗೆ ಜಮಾ ಮಾಡಿದ ನಂತರ ಪ್ರಸಕ್ತ ವರ್ಷದ ಹಂಗಾಮಿನ ಕಬ್ಬು ಕಟಾವು ಆರಂಭಿಸಬೇಕು. ಕೃಷ್ಣಾ ಕಾರ್ಖಾನೆ ಉಳಿಸಿಕೊಂಡಿರುವ 2017-18ನೇ ಸಾಲಿನಲ್ಲಿ ₹200 ಬಾಕಿ ಬಿಲ್ ಕೂಡಲೇ ರೈತರ ಖಾತೆಗೆ ಜಮಾ ಮಾಡಿಸಬೇಕು. ಇಲ್ಲಿನ ಕಾರ್ಖಾನೆಯ ಮಾಲೀಕರು ಕಟಾವು ಮತ್ತು ಸಾಗಾಣಿಕೆ ವೆಚ್ಚವನ್ನು ರೈತರಿಂದ ಪಡೆದುಕೊಳ್ಳುತ್ತಿದ್ದು, ಕೇಂದ್ರ ಸರ್ಕಾರ ನಿಗದಿ ಮಾಡಿದ ಎಫ್‌ಆರ್‌ಪಿ ದರ ನೀಡುವುದರ ಜೊತೆಗೆ ಸಾಗಾಣಿಕೆ ವೆಚ್ಚವನ್ನು ಕಾರ್ಖಾನೆಯವರೇ ಭರಿಸಬೇಕು ಎಂದು ಆಗ್ರಹಿಸಿದರು.
ನನೆಗುದಿಗೆ ಬಿದ್ದ ನೀರಾವರಿ ಯೋಜನೆ ಪುನರಾರಂಭಿಸಿ: ರಾಜ್ಯದಲ್ಲಿ ಮೂರು ಜನ ಮುಖ್ಯಮಂತ್ರಿಗಳು ಬದಲಾವಣೆಯಾದರೂ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ರಾಜಕೀಯ ಪ್ರತಿಷ್ಠೆಯಿಂದ ಈ ಯೋಜನೆಯನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗುತ್ತಿದ್ದು, ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ರೈತರು ಬೀದಿಗಿಳಿದು ಹೋರಾಟ ಮಾಡುವ ಮುನ್ನ ರಾಜ್ಯ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಯೋಜನೆ ಸಾಕಾರಗೊಳಿಸಲು ಇಚ್ಛಾಶಕ್ತಿ ತೋರಬೇಕು ಎಂದು ಒತ್ತಾಯಿಸಿದರು.ಪಡಿತರ ವ್ಯವಸ್ಥೆಗೆ ಸರ್ವರ್ ಸಮಸ್ಯೆ : ರಾಜ್ಯ ಸರ್ಕಾರ ಬಡ ಕುಟುಂಬಗಳಿಗೆ ನೀಡುತ್ತಿರುವ ಪಡಿತರ ಆಹಾರ ಧಾನ್ಯಗಳು ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. ಅಂಗಡಿಯವರು ಸರ್ವರ್ ಸಮಸ್ಯೆ ಎಂದು ಜನರನ್ನು ಎಡತಾಕಿಸುತ್ತಿದ್ದಾರೆ. ಸರ್ವರ್ ಸಮಸ್ಯೆ ಕೂಡಲೇ ಬಗೆಹರಿಸಿ ಕೂಡಲೇ ಪಡಿತರ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಮುಳುಗಡೆ ಪ್ರದೇಶದ ಜನರಿಗೆ ಶಾಶ್ವತ ಪರಿಹಾರ ಕಲ್ಪಿಸಿ:ಅಥಣಿ ಮತ್ತು ಕಾಗವಾಡ ತಾಲೂಕಿನ ಕೃಷ್ಣಾ ನದಿ ತೀರದ ಗ್ರಾಮಗಳ ನೆರೆ ಸಂತ್ರಸ್ತರಿಗೆ ಅನೇಕ ವರ್ಷಗಳಿಂದ ಸೂಕ್ತ ಪರಿಹಾರ ಮತ್ತು ಶಾಶ್ವತ ನೆಲೆ ದೊರಕುತ್ತಿಲ್ಲ. ನೆರೆ ಸಂತ್ರಸ್ತರ ಬೇಡಿಕೆಗೆ ತಕ್ಕಂತೆ ಕೂಡಲೇ ಪುನರ್ವಸತಿ ಕೇಂದ್ರ ಸ್ಥಾಪಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತಪರ ಹೋರಾಟಗಾರರಾದ ಸಂಗಪ್ಪ ಕರಿಗಾರ, ಸಿದ್ದು ಮಿಸಳ, ಪಿಂಟು ಕಬಾಡಗಿ, ಪಾರಿಸ್ ಗಳಗೂಡು, ದಗಡು ಮಿಸ್ಸಾಳ, ರಮೇಶ ಕುಂಬಾರ, ಪ್ರಕಾಶ ಜೋಶಿ, ಮಹಾದೇವ ಕುಚನೂರ, ಬರಮು ಕೌಜಲಗಿ, ಸದಾಶಿವ ಬಾಡಗಿ, ಕುಮಾರ ಮಹೇಶವಾಡಗಿ ಇತರರು ಇದ್ದರು.