ದಾವಣಗೆರೆ: ಮಧ್ಯ ಪ್ರಾಚ್ಯದಲ್ಲಿ ಯುದ್ಧದ ಹಿನ್ನೆಲೆಯಲ್ಲಿ ದುಬೈನಲ್ಲಿ ಸಿಲುಕಿದ ದಾವಣಗೆರೆ, ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳ 50 ಕನ್ನಡಿಗರು ಸೇರಿದಂತೆ ಭಾರತೀಯರನ್ನು ಸುರಕ್ಷಿತವಾಗಿ ಕರೆ ತರಲು ತುರ್ತಾಗಿ ಕ್ರಮ ಕೈಗೊಳ್ಳುವಂತೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಸಂಸದೆ ಡಾ,ಪ್ರಭಾ ಮಲ್ಲಿಕಾರ್ಜುನ ಮನವಿ ಮಾಡಿದ್ದಾರೆ.
ಸಂಸದರ ಮನವಿಗೆ ಸ್ಪಂದಿಸಿದ ಇಲಾಖೆಯು ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವರೆಂಬ ಭರವಸೆಯನ್ನು ನೀಡಿದೆ.ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಫೆ.23ರಂದು ದಾವಣಗೆರೆ, ಬಳ್ಳಾರಿ, ಚಿತ್ರದುರ್ಗ ಇತರೆ ಜಿಲ್ಲೆಗಳ 50 ಮಂದಿ ಪ್ರಯಾಣ ಬೆಳೆಸಿದ್ದರು. ಫೆ.28ರಂದು ರಾತ್ರಿ 9.30ಕ್ಕೆ ಭಾರತಕ್ಕೆ ಮರಳಲು ದುಬೈನಿಂದ ವಿಮಾನದ ಟಿಕೆಟ್ ಸಹ ಬುಕ್ ಆಗಿದ್ದು, ಅಷ್ಟರದಲ್ಲಿ ಮಧ್ಯ ಪ್ರಾಚ್ಯದಲ್ಲಿ ಯುದ್ಧ ಶುರುವಾಗಿದೆ. ದುಬೈನ ಮೇಲೂ ದಾಳಿಯಾದ ಹಿನ್ನೆಲೆ ವಿಮಾನ ಸಂಚಾರ ಸ್ಥಗಿತಗೊಂಡು ಕನ್ನಡಿಗರ ಕುಟುಂಬಗಳು ಆತಂಕಕ್ಕೆ ಸಿಲುಕಿವೆ ಎಂದು ಕೇಂದ್ರ ಸರ್ಕಾರಕ್ಕೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.
ಒಟ್ಟು 50 ಪ್ರವಾಸಿಗರಲ್ಲಿ 15 ಜನ ಜಗಳೂರು ತಾಲೂಕು ತೋರಣಘಟ್ಟ ಗ್ರಾಮದವರಾಗಿದ್ದಾರೆ. ಉಳಿದ 35 ಜನ ಬಳ್ಳಾರಿ-ಚಿತ್ರದುರ್ಗ ಇತರೆ ಜಿಲ್ಲೆಗಳವರು. ಇದರಲ್ಲಿ 24 ಜನ ಮಹಿಳೆಯರಿದ್ದಾರೆ. ಯುಎಇ ಪ್ರವಾಸಕ್ಕೆ ಹೋಗಿದ್ದ ಮೂರು ಜಿಲ್ಲೆಗಳ ಪ್ರವಾಸಿಗರು 60 ವರ್ಷ ಮೇಲ್ವಟ್ಟು, 83 ವರ್ಷದ ಒಳಗಿನವರು. ಪ್ರವಾಸಿಗರ ಸುರಕ್ಷತೆ ಹಾಗೂ ಅಲ್ಲಿಂದ ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಕರೆ ತರಲು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಲಿ ಎಂದು ಸಂಸದರು ಆಗ್ರಹಿಸಿದ್ದಾರೆ.ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳೊಂದಿಗೆ ಸಂಪರ್ಕಿಸಿ, ಅಲ್ಲಿ ಅಪಾರ್ಟ್‌ಮೆಂಟ್ ವೊಂದರಲ್ಲಿ ಸಿಲುಕಿರುವ 50 ಪ್ರವಾಸಿಗರನ್ನು ವಾಪಸ್ ಕರೆ ತರಲು ಕ್ರಮ ಕೈಗೊಳ್ಳಬೇಕು. ಪ್ರವಾಸಿಗರ ವಿವರಗಳನ್ನು ಸಹ ಸಂಬಂಧಿಸಿದ ಅಧಿಕಾರಿಗಳಿಗೆ ಸಲ್ಲಿಸಿದ್ದು, ಸಮಸ್ಯೆ ಶೀಘ್ರವೇ ಪರಿಹರಿಸುವ ನಿರೀಕ್ಷೆ ಹೊಂದಿದ್ದೇವೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಪತ್ರ ಬರೆದು, ಮನವಿ ಮಾಡಿದ್ದರು.
- - -
-1ಕೆಡಿವಿಜಿ2: ಡಾ.ಪ್ರಭಾ ಮಲ್ಲಿಕಾರ್ಜುನ