ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ನೈಋತ್ಯ, ಕೊಂಕಣ ಹಾಗೂ ದಕ್ಷಿಣ ರೈಲ್ವೆ ವ್ಯಾಪ್ತಿ ಹೊಂದಿರುವ ಮಂಗಳೂರನ್ನು ಪ್ರತ್ಯೇಕ ರೈಲ್ವೆ ವಲಯವಾಗಿ ಘೋಷಿಸಬೇಕು ಎಂಬ ದಶಕಗಳ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ.ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸೋಮಣ್ಣ ಅವರು ಜು.17ರಂದು ಮಂಗಳೂರಿಗೆ ಭೇಟಿ ನೀಡಿ ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ರೈಲು ನಿಲ್ದಾಣಗಳ ಪರಿಶೀಲನೆ ನಡೆಸಲಿದ್ದಾರೆ. ಬಳಿಕ ಮಂಗಳೂರಿನಲ್ಲಿ ಈ ಮೂರು ವಿಭಾಗಗಳ ರೈಲ್ವೆ ಹಿರಿಯ ಅಧಿಕಾರಿಗಳು, ಸಂಸದರು ಹಾಗೂ ಶಾಸಕರ ಜೊತೆ ಮಹತ್ವದ ಸಭೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರು ಪ್ರತ್ಯೇಕ ರೈಲ್ವೆ ವಿಭಾಗ ಬೇಡಿಕೆ ಚರ್ಚೆಗೆ ಬರಲಿದೆ. ಈ ಕುರಿತಂತೆ ಬೇಡಿಕೆಗಳ ಪಟ್ಟಿಯನ್ನು ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿ ಈಗಾಗಲೇ ಸಂಸದರಿಗೆ ನೀಡಿದೆ. ಕೊಂಕಣ ರೈಲ್ವೆ ವಿಲೀನಕ್ಕೆ ಒತ್ತಾಯ:
ಕಳೆದ 25 ವರ್ಷಗಳಿಂದ ಕೊಂಕಣ ರೈಲ್ವೆ ಪ್ರತ್ಯೇಕ ನಿಗಮವಾಗಿ ಕಾರ್ಯಾಚರಿಸುತ್ತಿದೆ. ಅಂದಿನಿಂದ ಇಂದಿನ ವರೆಗೆ ಈ ವಿಭಾಗ ಸುಮಾರು ಆರೇಳು ಸಾವಿರ ಕೋಟಿ ರು. ನಷ್ಟದಲ್ಲಿದೆ ಈ ನಷ್ಟವನ್ನು ಭರ್ತಿಗೊಳಿಸಲು ಕೊಂಕಣ ಮಾರ್ಗದಲ್ಲಿ ಸಂಚರಿಸುವ ರೈಲುಗಳಿಗೆ ಶೇ.40ರಷ್ಟು ಪ್ರಯಾಣ ದರವನ್ನು ಹೆಚ್ಚುವರಿಯಾಗಿ ವಸೂಲಿ ಮಾಡುತ್ತಿದೆ. ಕೊಂಕಣ ರೈಲ್ವೆ ಹೀಗೆಯೇ ಮುಂದುವರಿದರೆ, ಹೆಚ್ಚುವರಿ ಪ್ರಯಾಣ ದರ ವಸೂಲಿ ಹೊರತುಪಡಿಸಿದರೆ ಲಾಭದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಮುನ್ನಡೆಯುವುದು ಕಷ್ಟಕರ. ಈ ಹಿನ್ನೆಲೆಯಲ್ಲಿ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆ ಜೊತೆ ವಿಲೀನಗೊಳಿಸಬೇಕು. ಹೀಗೆ ವಿಲೀನಗೊಳಿಸಿದರೆ ಬಜೆಟ್‌ನಲ್ಲಿ ಕೂಡ ಅವಶ್ಯಕ ಅನುದಾನ ಸಿಗಲು ಸಾಧ್ಯವಿದೆ. ಮಾತ್ರವಲ್ಲ ಹೆಚ್ಚುವರಿ ರೈಲುಗಳ ಓಡಾಟಕ್ಕೂ ಅನುಕೂಲವಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಈಗಾಗಲೇ ಕರಾವಳಿ, ಗೋವಾ ಹಾಗೂ ಮಹಾರಾಷ್ಟ್ರಗಳ ಸಂಸದರು ಕೊಂಕಣ ರೈಲ್ವೆಯನ್ನು ವಿಲೀನಗೊಳಿಸುವ ಅಗತ್ಯತೆಯನ್ನು ಕೇಂದ್ರ ರೈಲ್ವೆ ಇಲಾಖೆಗೆ ಮನದಟ್ಟು ಮಾಡಿದ್ದಾರೆ.ಮಂಗಳೂರು-ಶಿವಮೊಗ್ಗ ರೈಲು ಸಂಪರ್ಕ:
ಮಂಗಳೂರು ಮತ್ತು ಶಿವಮೊಗ್ಗ ನಡುವೆ ರೈಲ್ವೆ ಸಂಪರ್ಕಕ್ಕೆ ಹೊನ್ನಾವರ-ತಾಳಗುಪ್ಪ ರೈಲು ಹಳಿ ರಚನೆಗೆ ಕಾರ್ಯಸಾಧ್ಯತಾ ವರದಿಯನ್ನು ನೈಋತ್ಯ ರೈಲ್ವೆ ವಲಯ ಸಿದ್ಧಪಡಿಸಿದೆ. ಆದರೆ ಕೇಂದ್ರ ರೈಲ್ವೆ ಸಚಿವಾಲಯ ಇದಕ್ಕೆ ಇನ್ನೂ ಅನುಮೋದನೆ ನೀಡಿಲ್ಲ. ಈ ಯೋಜನೆ ಕಾರ್ಯರೂಪಕ್ಕೆ ಬಂದರೆ, ಉತ್ತರ ಕನ್ನಡ ಜನತೆ ಬೆಂಗಳೂರು ತಲುಪಲು ನೇರ ಮಾರ್ಗ ಲಭಿಸಿದಂತಾಗುತ್ತದೆ. ಅಲ್ಲದೆ ಮಂಗಳೂರಿನಿಂದ ಉತ್ತರ ಕರ್ನಾಟಕ ಭಾಗಗಳಿಗೆ ವಯಾ ಶಿವಮೊಗ್ಗ ಮೂಲಕ ರೈಲು ಸಂಪರ್ಕ ಏರ್ಪಡಿಸಬಹುದು. ಪ್ರಸಕ್ತ ಉತ್ತರ ಕರ್ನಾಟಕ ಸಂಪರ್ಕಿಸುವ ಏಕೈಕ ವಿಜಯಪುರ ಎಕ್ಸ್‌ಪ್ರೆಸ್ ರೈಲು ವಯಾ ಹಾಸನ ಮೂಲಕ ಸಂಚರಿಸುತ್ತದೆ. ಅಲ್ಲದೆ ಅನಿವಾರ್ಯ ಸಂದರ್ಭಗಳಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಎರಡನೇ ಪರ್ಯಾಯ ಸಂಚಾರ ಮಾರ್ಗ ಲಭಿಸಿದಂತಾಗುತ್ತದೆ.ಸೆಂಟ್ರಲ್‌ಗೆ ವಿಸ್ತರಣೆ ಬಾಕಿ:
ಯಶವಂತಪುರ-ಮಂಗಳೂರು ಜಂಕ್ಷನ್ ನಡುವಿನ ಗೊಮಟೇಶ್ವರ ಎಕ್ಸ್‌ಪ್ರೆಸ್ ರೈಲನ್ನು ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಫೆಬ್ರವರಿಯಲ್ಲಿ ನಡೆದ ಫಾಲ್ಘಾಟ್ ಮತ್ತು ದಕ್ಷಿಣ ರೈಲ್ವೆ ವೇಳಾಪಟ್ಟಿ ಸಭೆಯಲ್ಲಿ ಸಮ್ಮತಿಸಿವೆ. ಆದರೆ ರೈಲ್ವೆ ಇಲಾಖೆ ಇದುವರೆಗೂ ಸೆಂಟ್ರಲ್‌ಗೆ ವಿಸ್ತರಿಸಿಲ್ಲ.ಮಂಗಳೂರು-ಭಾವನಗರ(ಗುಜರಾತ್) ಸಾಪ್ತಾಹಿಕ ರೈಲು ಆರಂಭಕ್ಕೆ 2022ರಲ್ಲೇ ನಾಲ್ಕು ರೈಲ್ವೆ ವಿಭಾಗಗಳ ವೇಳಾಪಟ್ಟಿ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಆದರೆ ಕೇಂದ್ರ ರೈಲ್ವೆ ಇನ್ನೂ ಅನುಷ್ಠಾನಗೊಳಿಸಿಲ್ಲ.
ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್ ರೈಲನ್ನು ಕೋಯಿಕ್ಕೋಡ್‌ಗೆ ವಿಸ್ತರಿಸಲಾಗಿದೆ. ಇದರಿಂದಾಗಿ ಮುಂಗಡ ಕಾಯ್ದಿರಿಸುವಿಕೆಯಲ್ಲಿ ಮಂಗಳೂರಿಗರಿಗೆ ಸೀಮಿತ ಕೋಟಾ ಸಿಗುತ್ತಿದೆ. ಹಾಗಾಗಿ ಈ ರೈಲಿನ ಕೋಯಿಕ್ಕೋಡ್ ವಿಸ್ತರಣೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಲಾಗಿದೆ.ಮಂಗಳೂರು-ವಿಜಯಪುರ ಎಕ್ಸ್‌ಪ್ರೆಸ್ ಈಗಲೂ ಸ್ಪೆಷಲ್ ರೈಲು ಆಗಿ ಓಡಾಟ ನಡೆಸುತ್ತಿದೆ. ಕೋವಿಡ್ ಬಳಿಕ 2022ರಲ್ಲೇ ಇದನ್ನು ನಿತ್ಯ ರೈಲಾಗಿ ಪರಿವರ್ತಿಸುವಂತೆ ನೈಋತ್ಯ ರೈಲ್ವೆಯು ಕೇಂದ್ರ ರೈಲ್ವೆ ಬೋರ್ಡ್‌ಗೆ ಪ್ರಸ್ತಾವನೆ ಕಳುಹಿಸಿದರೂ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಇದರಿಂದಾಗಿ ಉತ್ತರ ಕರ್ನಾಟಕದ ಜನತೆ ಶೇ.30ರಷ್ಟು ಹೆಚ್ಚುವರಿ ಮೊತ್ತ ಪಾವತಿಸಿ ಈ ರೈಲಿನಲ್ಲಿ ಸಂಚರಿಸುವಂತಾಗಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ ಎಂದು ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿ ತಾಂತ್ರಿಕ ಸಲಹೆಗಾರ ಅನಿಲ್ ಹೆಗ್ಡೆ ತಿಳಿಸಿದ್ದಾರೆ.
ಪ್ರತ್ಯೇಕ ವೇಳಾಪಟ್ಟಿ ಬೇಡ:ಕೊಂಕಣ ಮಾರ್ಗದಲ್ಲಿ ಸಂಚರಿಸುವ ರೈಲುಗಳಿಗೆ ಮಳೆಗಾಲದಲ್ಲಿ ಪ್ರತ್ಯೇಕ ವೇಳಾಪಟ್ಟಿ ರದ್ದುಪಡಿಸಿ ಕಡಿಮೆ ವೇಗದ ಮಿತಿ ವಿಧಿಸಿದರೆ ಸಾಕು. ದೂರದ ಊರುಗಳಿಗೆ ತೆರಳುವ ರೈಲುಗಳಿಗೆ ಸ್ಪೀಪರ್ ಕೋಚ್ ಬದಲು ಸಾಮಾನ್ಯರಿಗೆ ಪ್ರಯಾಣಿಸುವಂತಾಗಲು ಸಾಮಾನ್ಯ ಕೋಚ್ ಹೆಚ್ಚುವರಿ ಅಳವಡಿಸಬೇಕು. ಮಂಗಳೂರು ಸೆಂಟ್ರಲ್ ಮತ್ತು ಜಂಕ್ಷನ್ ನಿಲ್ದಾಣದಲ್ಲಿರುವ ಮುಂಗಡ ಪಾವತಿ ಅಟೋ ಕೌಂಟರ್‌ನ್ನು ರೈಲ್ವೆ ಬದಲು ಪೊಲೀಸ್ ಇಲಾಖೆಗೆ ವಹಿಸಬೇಕು. ಪಾಂಡೇಶ್ವರ ಲೆವೆಲ್ ಕ್ರಾಸಿಂಗ್‌ನಲ್ಲಿ ಮೇಲ್ಸೆತುವೆ ರಚನೆ, ಬೆಂಗಳೂರು-ಮೈಸೂರು-ಮುರುಡೇಶ್ವರ ರೈಲಿಗೆ ಮಂಗಳಾದೇವಿ ಎಕ್ಸ್‌ಪ್ರೆಸ್, ಬೆಂಗಳೂರು-ಮಂಗಳೂರು-ಕಣ್ಣೂರು ರೈಲಿಗೆ ರಾಣಿ ಅಬ್ಬಕ್ಕ ಎಕ್ಸ್‌ಪ್ರೆಸ್ ಎಂದು ನಾಮಕರಣ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಗೋಪಾಲಕೃಷ್ಣ ಭಟ್ ಮನವಿಯಲ್ಲಿ ಒತ್ತಾಯಿಸಿದ್ದಾರೆ.