ಅಂಗಡಿ ನಡೆಸಲು ಅಗತ್ಯ ಅನುಮತಿ ಪಡೆದಿರುವ ಕುರಿತು ಸ್ಪಷ್ಟತೆ ಇಲ್ಲ. ಈ ಹಿಂದೆ ಹಲವು ಬಾರಿ ಸ್ಥಳವನ್ನು ಸ್ವಚ್ಛಗೊಳಿಸುವಂತೆ ಅಂಗಡಿ ಮಾಲೀಕರಿಗೆ ಸೂಚನೆ ನೀಡಿದ್ದರೂ ಯಾವುದೇ ರೀತಿಯ ಸ್ಪಂದನೆ ದೊರಕಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದೆ .
ಅರಸೀಕೆರೆ: ನಗರದ ಆದಿದ್ರಾವಿಡ ಸಮಾಜದ ಪರಿಶಿಷ್ಟ ಜಾತಿ- ಪರಿಶಿಷ್ಟ ವರ್ಗ ಮುಕ್ತಿಧಾಮದ ಸಮೀಪದಲ್ಲಿ ಕಾರ್ಯನಿರ್ವಹಿಸುತ್ತಿರುವ ಗುಜರಿ ಅಂಗಡಿಯಿಂದ ಉಂಟಾಗುತ್ತಿರುವ ಅಸ್ವಚ್ಛತೆ ಮತ್ತು ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆಗಳನ್ನು ಉಲ್ಲೇಖಿಸಿ, ಬಿಜೆಪಿ ಮುಖಂಡ ಶಿವನ್ ರಾಜ್ ಅವರು ಪೌರಾಯುಕ್ತ ಕೃಷ್ಣಮೂರ್ತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ನಂತರ ಮಾತನಾಡಿದ ಅವರು, ಅಂಗಡಿ ಬಳಿ ಕಸ, ಒಡೆದ ಬಾಟಲಿ ಚೂರುಗಳು, ಹಳೆಯ ಲೋಹ ವಸ್ತುಗಳು, ಬಿಯರ್ ಬಾಟಲಿಗಳು ಮುಂತಾದವುಗಳನ್ನು ಅಸಮರ್ಪಕವಾಗಿ ಸಂಗ್ರಹ ಮಾಡಲಾಗುತ್ತಿದ್ದು, ಇದರಿಂದ ಪರಿಸರ ಮಾಲಿನ್ಯ ಹೆಚ್ಚುತ್ತಿರುವುದಲ್ಲದೆ ಸಾರ್ವಜನಿಕರ ಆರೋಗ್ಯಕ್ಕೂ ಅಪಾಯ ಉಂಟಾಗುತ್ತಿದೆ ,ವಿಶೇಷವಾಗಿ ಮುಕ್ತಿಧಾಮದಂತಹ ಸಂವೇದನಾಶೀಲ ಪ್ರದೇಶದ ಪಕ್ಕದಲ್ಲೇ ಈ ರೀತಿಯ ಅಸ್ವಚ್ಛ ಪರಿಸ್ಥಿತಿ ಇರುವುದರಿಂದ ಸ್ಥಳೀಯರಲ್ಲಿ ಅಸಮಾಧಾನ ಹೆಚ್ಚಾಗಿದೆ ಎಂದು ಆರೋಪಿಸಿದರು.ಅಂಗಡಿ ನಡೆಸಲು ಅಗತ್ಯ ಅನುಮತಿ ಪಡೆದಿರುವ ಕುರಿತು ಸ್ಪಷ್ಟತೆ ಇಲ್ಲ. ಈ ಹಿಂದೆ ಹಲವು ಬಾರಿ ಸ್ಥಳವನ್ನು ಸ್ವಚ್ಛಗೊಳಿಸುವಂತೆ ಅಂಗಡಿ ಮಾಲೀಕರಿಗೆ ಸೂಚನೆ ನೀಡಿದ್ದರೂ ಯಾವುದೇ ರೀತಿಯ ಸ್ಪಂದನೆ ದೊರಕಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದೆ ಎಂದು ಆರೋಪಿಸಿದರು.
ಕಸ ಮತ್ತು ಬಾಟಲಿ ಚೂರುಗಳಿಂದ ಸುತ್ತಮುತ್ತಲಿನ ಜನರಿಗೆ ಅಪಾಯ ಉಂಟಾಗುತ್ತಿದೆ. ವಿಶೇಷವಾಗಿ ಮಕ್ಕಳು ಮತ್ತು ಪಾದಚಾರಿಗಳು ಗಾಯಗೊಳ್ಳುವ ಸಂಭವವಿದೆ. ಜೊತೆಗೆ ದುರ್ವಾಸನೆ, ಕೀಟಗಳ ಸಮಸ್ಯೆ ಹೆಚ್ಚಾಗಿ ಸಾರ್ವಜನಿಕ ಆರೋಗ್ಯಕ್ಕೂ ಧಕ್ಕೆಯಾಗುತ್ತಿದೆ. ತಕ್ಷಣ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಂಡು ಅಂಗಡಿಯನ್ನು ನಿಯಮಾನುಸಾರ ನಡೆಸುವಂತೆ ಸೂಚನೆ ನೀಡಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಪ್ರಶಾಂತ್, ಕಾರ್ತಿಕ್ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದು, ಸಮಸ್ಯೆಯನ್ನು ಶೀಘ್ರದಲ್ಲಿ ಬಗೆಹರಿಸುವಂತೆ ಆಗ್ರಹಿಸಿದರು.