ಪಿಎಸ್‌ಎಸ್‌ಕೆ ಬಹುಕೋಟಿ ಆಸ್ತಿ ಉಳಿವಿಗೆ ಆಗ್ರಹ

| Published : May 29 2024, 01:02 AM IST

ಸಾರಾಂಶ

ಸರ್ಕಾರ ಈಗಾಗಲೇ ಮುರುಗೇಶ್ ನಿರಾಣಿ ಒಡೆತನದ ಎಂಆರ್‌ಎನ್ ಶುಗರ್ಸ್‌ ಕಂಪನಿಗೆ ೪೦ ವರ್ಷಗಳ ಅವಧಿಗೆ ಕಾರ್ಖಾನೆಯನ್ನು ಗುತ್ತಿಗೆಗೆ ನೀಡಿದೆ. ನಮ್ಮ ಮಕ್ಕಳ ಕಾಲಕ್ಕೂ ಕಾರ್ಖಾನೆ ಮರಳಿ ಸಹಕಾರಿ ವ್ಯಾಪ್ತಿಗೆ ಬರುವುದಿಲ್ಲ. ಆದರೆ, ಸಾವಿರಾರು ರೈತರ ಪರಿಶ್ರಮದಿಂದ ಕಟ್ಟಲಾಗಿರುವ ಪಿಎಸ್‌ಎಸ್‌ಕೆ ಕಾರ್ಖಾನೆ ಆಸ್ತಿಯನ್ನು ರಕ್ಷಿಸಿಕೊಳ್ಳಬೇಕಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಪರಿಸ್ಥಿತಿ ಟೈಟಾನಿಕ್ ಹಡಗಿನಂತೆ ಮುಳುಗುವಂತಾಗಿದ್ದು, ಸರ್ಕಾರ ಕಾರ್ಖಾನೆಗೆ ಸೇರಿದ ಬಹುಕೋಟಿ ಆಸ್ತಿಯನ್ನಾದರೂ ಉಳಿಸಲು ಕ್ರಮವಹಿಸಬೇಕು. ಇಲ್ಲವಾದರೆ ರೈತರೊಂದಿಗೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಸರ್ವೋದಯ ಕರ್ನಾಟಕ ಪಕ್ಷದ ತಾಲೂಕು ಅಧ್ಯಕ್ಷ ಎಸ್.ದಯಾನಂದ್ ಎಚ್ಚರಿಕೆ ನೀಡಿದರು.

ಸರ್ಕಾರ ಈಗಾಗಲೇ ಮುರುಗೇಶ್ ನಿರಾಣಿ ಒಡೆತನದ ಎಂಆರ್‌ಎನ್ ಶುಗರ್ಸ್‌ ಕಂಪನಿಗೆ ೪೦ ವರ್ಷಗಳ ಅವಧಿಗೆ ಕಾರ್ಖಾನೆಯನ್ನು ಗುತ್ತಿಗೆಗೆ ನೀಡಿದೆ. ನಮ್ಮ ಮಕ್ಕಳ ಕಾಲಕ್ಕೂ ಕಾರ್ಖಾನೆ ಮರಳಿ ಸಹಕಾರಿ ವ್ಯಾಪ್ತಿಗೆ ಬರುವುದಿಲ್ಲ. ಆದರೆ, ಸಾವಿರಾರು ರೈತರ ಪರಿಶ್ರಮದಿಂದ ಕಟ್ಟಲಾಗಿರುವ ಪಿಎಸ್‌ಎಸ್‌ಕೆ ಕಾರ್ಖಾನೆ ಆಸ್ತಿಯನ್ನು ರಕ್ಷಿಸಿಕೊಳ್ಳಬೇಕಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಪಿಎಸ್‌ಎಸ್‌ಕೆ ಶಾಲೆ, ವಿಶ್ವೇಶ್ವರಯ್ಯ ನಗರದಲ್ಲಿರುವ ಕಲ್ಯಾಣ ಮಂಟಪ, ಕಾರ್ಮಿಕರ ವಸತಿ ಗೃಹ, ಅತಿಥಿ ಗೃಹ, ಕಚೇರಿ ಹೀಗೆ ನೂರಾರು ಎಕರೆಯ ಬಹುಕೋಟಿ ರು. ಮೌಲ್ಯದ ಆಸ್ತಿ ಕಾರ್ಖಾನೆಗೆ ಸೇರಿದ್ದಾಗಿದೆ. ಇದರ ರಕ್ಷಣೆ ಮಾಡುವವರು ಯಾರು ಎಂಬ ಪ್ರಶ್ನೆ ಉದ್ಬವಿಸಿದೆ. ಈಗಾಗಲೇ ಕಾರ್ಖಾನೆಗೆ ಸೇರಿದ ಅನೇಕ ಕಟ್ಟಡಗಳು ಶಿಥಿಲಗೊಂಡು ಬೀಳುವ ಪರಿಸ್ಥಿತಿಯಲ್ಲಿದೆ. ಕಲ್ಯಾಣ ಮಂಟಪ ಕುಸಿದಿರುವ ಕಾರಣ ಯಾವ ಶುಭ ಸಮಾರಂಭಗಳು ನಡೆಯುತ್ತಿಲ್ಲ. ಜಿಲ್ಲಾಧಿಕಾರಿಗಳು ಮತ್ತು ಡಿಆರ್ ಈ ಬಗ್ಗೆ ಗಮನ ಹರಿಸಿ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸರ್ಕಾರದಿಂದ ಕಾರ್ಖಾನೆಗೆ ಬಿಡುಗಡೆ ಮಾಡಿರುವ ಅನುದಾನ ಏನಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ. ಈವರೆಗೂ ಜಿಲ್ಲಾಧಿಕಾರಿ ಮತ್ತು ಡಿಆರ್ ಅವರು ಕಾರ್ಖಾನೆಗೆ ಸೇರಿದ ಹಣಕಾಸು ವಹಿವಾಟು ಬಗ್ಗೆ ಆಡಿಟ್ ಮಾಡಿಸುವ ಕೆಲಸ ಮಾಡಿಲ್ಲ. ನಾವು ಈಗಾಗಲೇ ಕಾರ್ಖಾನೆ ಕಳೆದುಕೊಂಡಿದ್ದೇವೆ. ಈಗ ಅದಕ್ಕೆ ಸೇರಿದ ಆಸ್ತಿಯನ್ನು ಕಳೆದುಕೊಳ್ಳುತ್ತೇವೆ ಎಂಬ ಭಯ ಕಾಡುತ್ತಿದೆ. ಸಹಕಾರಿ ಕ್ಷೇತ್ರದಲ್ಲಿದ್ದಾಗ ಕಾಂಗ್ರೆಸ್, ಜೆಡಿಎಸ್ ರೈತಸಂಘ ಸೇರಿದಂತೆ ಮೂರು ಪಕ್ಷಗಳು ಆಡಳಿತ ನಡೆಸಿದೆ. ಹಿಂದೆಲ್ಲ ಕಾರ್ಖಾನೆ ವಾರ್ಷಿಕ ಮಹಾಸಭೆ ತಡರಾತ್ರಿವರೆಗೂ ನಡೆದು ಷೇರುದಾರರು ವಹವಾಟಿನ ಬಗ್ಗೆ ಪ್ರಶ್ನೆ ಮಾಡುತ್ತಿದ್ದರು. ಈಗ ಹೇಳುವವರು, ಕೇಳುವವರ್ಯಾರು ಇಲ್ಲದಂತಾಗಿದೆ. ಮೂರು ಪಕ್ಷಗಳ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಯಾವೊಬ್ಬ ನಿರ್ದೇಶಕರು ಆಸ್ತಿ ರಕ್ಷಣೆ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಬೇಸರಿಸಿದರು.

ಮೇಲುಕೋಟೆ, ಶ್ರೀರಂಗಪಟ್ಟಣ ಮತ್ತು ಕೆ.ಆರ್.ಪೇಟೆ ಕ್ಷೇತ್ರದ ಶಾಸಕರು ಈ ಬಗ್ಗೆ ಗಮನಹರಿಸಿ ಆಸ್ತಿ ರಕ್ಷಣೆಗೆ ಅಗತ್ಯ ಕ್ರಮಕ್ಕೆ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಅದರಲ್ಲೂ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಈ ಭಾಗದ ರೈತರ ಸಭೆ ಕರೆದು ಚರ್ಚೆಸಬೇಕು. ಜತೆಗೆ ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಿ ಯಾವ ರೀತಿ ಆಸ್ತಿ ಉಳಿಸಿಕೊಳ್ಳಬೇಕು ಎಂಬುದರ ಬಗ್ಗೆ ಕಾಳಜಿ ತೋರಿಸಬೇಕು. ಪಿಎಸ್‌ಎಸ್‌ಕೆಗೆ ಸೇರಿದ ಶಾಲೆ ಮುಚ್ಚುವ ಹಂತ ತಲುಪಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಚಿಕ್ಕದಾಗಿ ಪ್ರಾರಂಭವಾಗಿ ಮೆಡಿಕಲ್, ಎಂಜಿನಿಯರಿಂಗ್ ಕಾಲೇಜುಗಳನ್ನು ತೆರೆಯುತ್ತಿವೆ. ಆದರೆ, ಲಕ್ಷಾಂತರ ಮಕ್ಕಳಿಗೆ ವಿದ್ಯೆ ನೀಡಿದ ಶಾಲೆ ಮುಚ್ಚುವ ಹಂತ ತಲುಪುತ್ತಿರುದು ಬೇಸರ. ಆಸ್ತಿ ಉಳಿಸುವ ಜತೆಗೆ ಶಾಲೆಗೆ ಕಾಯಕಲ್ಪ ನೀಡಬೇಕಿದೆ ಎಂದರು.

ರೈತಸಂಘ ಮುಖಂಡರಾದ ಚಿಕ್ಕಾಡೆ ವಿಜೇಂದ್ರ, ಬೆಳಾಳ್ಳೆ ಯೋಗೇಶ್, ಹಾರೋಹಳ್ಳಿ ಲಕ್ಷ್ಮೇಗೌಡ, ಪೆಟ್ರೋಲ್ ಬಂಕ್ ಉಮಾಶಂಕರ್, ದೊಡ್ಡಬ್ಯಾಡರಹಳ್ಳಿ ಪ್ರೇಮ್‌ಕುಮಾರ್, ನಲ್ಲೇಗೌಡ ಇತರರು ಇದ್ದರು.