ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆಗೆ ಒತ್ತಾಯ

| Published : Feb 19 2025, 12:47 AM IST

ಸಾರಾಂಶ

ಹನೂರು ಪಟ್ಟಣದ ಲೋಕೋಪಯೋಗಿ ವಸತಿಗೃಹದಲ್ಲಿ ರೈತ ನಾಯಕ ಹಾಗೂ ಮಾಜಿ ಶಾಸಕ ಕೆ ಎಸ್ ಪುಟ್ಟಣ್ಣಯ್ಯ ಅವರ 7ನೇ ವರ್ಷದ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಹನೂರು

ಮಲೆಮಹದೇಶ್ವರ ಬೆಟ್ಟದಲ್ಲಿ ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆ ನಡೆಸುವ ಹಾಗೆ ಕಾಣುತ್ತಿಲ್ಲ. ಆದ್ದರಿಂದ ಮುಂದಿನ ಬಜೆಟ್‌ನಲ್ಲಿ ಚಾಮರಾಜನಗರ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ಒತ್ತಾಯಿಸಿದರು.

ಹನೂರು ಲೋಕೋಪಯೋಗಿ ವಸತಿಗೃಹದಲ್ಲಿ ಹಮ್ಮಿಕೊಳ್ಳಲಾಗಿದ್ದ ರೈತ ನಾಯಕ ಹಾಗೂ ಮಾಜಿ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ 7 ನೇ ವರ್ಷದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. ಹನೂರು ತಾಲೂಕು ಕೇಂದ್ರವಾಗಿ 6 ವರ್ಷ ಕಳೆಯುತ್ತಿದ್ದರೂ ಸಮರ್ಪಕ ಅಭಿವೃದ್ಧಿಯಾಗಿಲ್ಲ, ಕ್ಷೇತ್ರವು ಭೌಗೋಳಿಕವಾಗಿ ಇರುವುದರಿಂದ ಇಲ್ಲಿನ ನಿವಾಸಿಗಳಿಗೆ ಸಮರ್ಪಕ ಆರೋಗ್ಯ ವ್ಯವಸ್ಥೆ ಇಲ್ಲದೆ ಇರುವುದರಿಂದ ತಾಲೂಕು ಕೇಂದ್ರ ಸ್ಥಾನದಲ್ಲಿ 100 ಹಾಸಿಗೆಗಳ ಆಸ್ಪತ್ರೆ, ಮಿನಿ ವಿಧಾನಸೌಧ ನಿರ್ಮಾಣ ಪ್ರಾರಂಭಿಸಬೇಕು. ಡಿಪೋ ವ್ಯವಸ್ಥೆ ಇಲ್ಲದೆ ಇರುವುದರಿಂದ ಕಾಡಂಚಿನ ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆ ಇಲ್ಲದಂತಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಂದು ಗ್ರಾಮಗಳಿಗೂ ಬಸ್ ವ್ಯವಸ್ಥೆ ಮಾಡಬೇಕು. ಪಶು ಆಸ್ಪತ್ರೆಗಳಿಗೆ ವೈದ್ಯರನ್ನು ನೇಮಕ ಮಾಡಬೇಕು. ಹೋಬಳಿ ಮಟ್ಟದಲ್ಲಿರುವ ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿದ್ದು ಸಮಸ್ಯೆ ಬಗೆಹರಿಸಬೇಕು. ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗಿದ್ದು ಕಾಡುಪ್ರಾಣಿಗಳ ಹಾವಳಿ ತಡೆಗಟ್ಟಲು ರೈಲ್ವೆ ಕಂಬಿ ಅಳವಡಿಸಬೇಕು ಎಂದರು.

ಮಲೆಮಹದೇಶ್ವರ ಬೆಟ್ಟದಲ್ಲಿ ಪ್ರಾಧಿಕಾರದ ವತಿಯಿಂದ ಪ್ಲಾಸ್ಟಿಕ್ ಮುಕ್ತ ಪ್ರದೇಶವನ್ನಾಗಿ ಮಾಡಲು ಪಣತೊಟ್ಟಿರುವುದು ಸ್ವಾಗತಾರ್ಹ, ಈ ಹಿಂದೆ ರಾಜ್ಯ ರೈತ ಸಂಘದ ವತಿಯಿಂದಲೂ ಹಲವು ದಿನಗಳ ಕಾಲ ತಾಳು ಬೆಟ್ಟದಿಂದ ಮಲೆಮಹದೇಶ್ವರ ಬೆಟ್ಟದ ವರೆಗೂ ಪ್ಲಾಸ್ಟಿಕ್ ಸಂಗ್ರಹ ಮಾಡುವ ಕಾರ್ಯದಲ್ಲಿ ನಾವು ಸಹ ಕೈಜೋಡಿಸಿದ್ದೆವು. ಇದೇ ನಿಟ್ಟಿನಲ್ಲಿ ಭಕ್ತಾದಿಗಳು ಸಹ ವನ್ಯಪ್ರಾಣಿಗಳಿಗೆ ಮಾರಕವಾಗಿರುವ ಪ್ಲಾಸ್ಟಿಕ್ ಪದಾರ್ಥಗಳ ಬಳಕೆ ಮಾಡದೆ ಇಲಾಖೆಗೆ ಸಹಕರಿಸಬೇಕು ಎಂದರು.

ಮಲೆಮಹದೇಶ್ವರ ಬೆಟ್ಟದ ರಂಗಮಂದಿರದ ಸಮೀಪ ಅನಧಿಕೃತವಾಗಿ ಮಳಿಗೆಗಳನ್ನು ನಡೆಸುತ್ತಾ ಪ್ರಾಧಿಕಾರಕ್ಕೆ ಕೋಟ್ಯಂತರ ರುಪಾಯಿ ನಷ್ಟ ಮಾಡುತ್ತಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದೆ. ಈ ಕೂಡಲೇ ಪ್ರಾಧಿಕಾರದವರು ಅನಧಿಕೃತ ಮಳಿಗೆಗಳನ್ನು ತೆರವುಗೊಳಿಸಿ ಟೆಂಡರ್ ಮಾಡಬೇಕು ಇಲ್ಲದಿದ್ದರೆ ರೈತ ಸಂಘಟನೆ ವತಿಯಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಾಲೂಕು ಅಧ್ಯಕ್ಷ ಅಮ್ಜದ್ ಖಾನ್ ಮಾತನಾಡಿ, ಹನೂರು ಕ್ಷೇತ್ರದ ಸಮಗ್ರದ ಅಭಿವೃದ್ಧಿ ವಿಚಾರವಾಗಿ ನಾವು ಈಗಾಗಲೇ ಕ್ಯಾಬಿನೆಟ್ ಸಭೆಯ ಹಿಂದಿನ ದಿನ ಪಾದಯಾತ್ರೆ ಮಾಡಲು ಯೋಜನೆ ರೂಪಿಸಿದ್ದೇವೆ. ಅದರಂತೆ ಕ್ಯಾಬಿನೆಟ್ ಸಭೆ ನಿಗದಿಯಾದ ದಿನ ಪಾದಯಾತ್ರೆ ಮಾಡಲು ಬದ್ಧರಾಗಿದ್ದೇವೆ. ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದರು.

ಶ್ರದ್ಧಾಂಜಲಿ:

ಸದಾ ರೈತರ ಸಮಸ್ಯೆಗಳು ಹಾಗೂ ರೈತರು ಬೆಳೆದ ಪದಾರ್ಥಗಳಿಗೆ ಬೆಂಬಲ ಬೆಲೆ ಕೊಡಿಸುವ ನಿಟ್ಟಿನಲ್ಲಿ ವಿಧಾನಸಭೆಯಲ್ಲಿ ಹೋರಾಟ ಮಾಡುತ್ತಿದ್ದ ಕೆಎಸ್ ಪುಟ್ಟಣ್ಣಯ್ಯನವರು ನಮ್ಮನ್ನಗಲಿ 7 ವರ್ಷ ಕಳೆದಿದೆ. ಅವರು ಕಬ್ಬಿಗೆ ಬೆಂಬಲ ಬೆಲೆ ನೀಡದಿದ್ದಾಗ ಸರ್ಕಾರಕ್ಕೆ ಹಾಸ್ಯ ಭರಿತವಾಗಿ ಚಾಟಿ ಬೀಸುತ್ತಿದ್ದರು, ಅವರ ಆದರ್ಶ ಮಾರ್ಗದರ್ಶನದಲ್ಲಿ ನಾವು ಸಹ ಹೋರಾಟ ಮಾಡುತ್ತಿದ್ದೇವೆ ಎಂದರು. ಉಪಾಧ್ಯಕ್ಷ ಪಳನಿಸ್ವಾಮಿ, ರೈತ ಮುಖಂಡರಾದಂತಹ ಶಿವಣ್ಣ ಶಿವಲಿಂಗ, ಕೂಡ್ಲೂರು ವೆಂಕಟೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.