ಆದಿಕರ್ನಾಟಕದ ಆಸ್ತಿ ವಂಚಿಸಿದ್ದವರ ಬಂಧನಕ್ಕೆ ಆಗ್ರಹ

| Published : Mar 24 2024, 01:32 AM IST

ಆದಿಕರ್ನಾಟಕದ ಆಸ್ತಿ ವಂಚಿಸಿದ್ದವರ ಬಂಧನಕ್ಕೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಆದಿ ಕರ್ನಾಟಕ ಅಭಿವೃದ್ದಿ ಸಂಘದ ಆಸ್ತಿಯನ್ನು ಸಂರಕ್ಷಣೆ ಮಾಡಿ, ಸಂಘವನ್ನು ವಜಾಗೊಳಿಸಲು ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.

ಕನ್ನಡಪ್ರಭ ವಾರ್ತೆ ಚಾಮರಾಜನಗರ ಆದಿ ಕರ್ನಾಟಕ ಅಭಿವೃದ್ದಿ ಸಂಘದ ಆಸ್ತಿಯನ್ನು ಸಂರಕ್ಷಣೆ ಮಾಡಿ, ಸಂಘವನ್ನು ವಜಾಗೊಳಿಸಲು ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಈಗಾಗಲೇ ಸಮಿತಿ ವರದಿಯಂತೆ ಅಕ್ರಮ ಖಾತೆಯಲ್ಲಿ ಭಾಗಿಯಾಗಿರುವ ಸಂಘ ಅಧ್ಯಕ್ಷ, ಕಾರ್ಯದರ್ಶಿ ಸೇರಿದಂತೆ ೧೪ ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಇವರನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಅಸ್ತಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅಯ್ಯನಪುರ ಶಿವಕುಮಾರ್ ಒತ್ತಾಯಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ಆದಿ ಕರ್ನಾಟಕ ಸಮಾಜದ ಆಸ್ತಿಯು ೮ ಪೋಡುಗಳಾಗಿ ಅನ್ಯರ ಪಾಲಾಗುತ್ತಿದ್ದು, ಇದರಲ್ಲಿ ಸಂಘ ಅಧ್ಯಕ್ಷ ನಂಜುಂಡಸ್ವಾಮಿ, ಹಾಗೂ ಆಡಳಿತ ಮಂಡಲಿ ಶಾಮೀಲಾಗಿದೆ. ಅಧ್ಯಕ್ಷರು ತಮ್ಮ ಸಹೋದರರ ಮಕ್ಕಳಿಗೆ ಈ ಆಸ್ತಿಯನ್ನು ಅಕ್ರಮ ಖಾತೆಯಾಗಿದ್ದರು ಸಹ ಮೌನವಹಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಅಲ್ಲದೇ ಕಳೆದ ೧೩ ವರ್ಷಗಳಿಂದ ಸಂಘದ ಅಧ್ಯಕ್ಷರಾಗಿ ಆಸ್ತಿ ಸಂರಕ್ಷಣೆಯಲ್ಲಿ ವಿಫಲರಾಗಿರುವ ಜೊತೆಗೆ ಸಂಘದಲ್ಲಿ ಭ್ರಷ್ಟಾಚಾರ. ಅವ್ಯವಹಾರ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರ ಜನಸ್ಪಂದನ ಕಾರ್ಯಕ್ರಮದಲ್ಲಿ ದೂರು ನೀಡಿದ್ದೇವು. ಜೊತೆಗೆ ತಾಲೂಕಿನ ಆದಿ ಕರ್ನಾಟಕ ಸಮಾಜದಿಂದ ಬೃಹತ್ ಪ್ರತಿಭಟನೆ ಮಾಡಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಕುಲಂಕೂಷ ತನಿಖೆಯಾಗಬೇಕೆಂಬು ಒತ್ತಾಯ ಮಾಡಿದ್ದೇವು.

ಇದರನ್ವಯ ಎಸಿ ನೇತೃತ್ವದಲ್ಲಿ ಸಮಿತಿಯಲ್ಲಿ ತಹಸೀಲ್ದಾರ್ ಕಾರ್ಯದರ್ಶಿಯಾಗಿ, ಸಹಕಾರ ಸಂಘಗಳ ಉಪ ನಿಬಂಧಕರು, ನಗರಸಭೆ ಪೌರಾಯುಕ್ತರು, ತಾಪಂ ಇಒ ಸದಸ್ಯರನ್ನಾಗಿ ಮಾಡಿ, ತನಿಖೆಗೆ ಡಿಸಿ ಸೂಚನೆ ನೀಡಿದ್ದರು. ಅದರಂತೆ ಸಮಿತಿಯವರು ಎಲ್ಲಾ ರೀತಿಯ ದಾಖಲಾತಿಗಳು ಹಾಗೂ ಹೇಳಿಕೆಗಳನ್ನು ಪಡೆದು, ಅಂತಿಮವಾಗಿ ಆಸ್ತಿಯು ಅಕ್ರಮವಾಗಿ ಕ್ರಯವಾಗಿದ್ದು, ಈ ಪ್ರಕರಣದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಶಾಮೀಲಾಗಿರುವುದು ಸೇರಿದಂತೆ ೧೬ ಅಂಶಗಳ ಸುಮಾರು ೪೦ ಪುಟಗಳ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿದ್ದಾರೆ. ಈ ವರದಿಯು ಸತ್ಯವಾಗಿದ್ದು, ೧೯೪೨ ರಿಂದ ಆದಿ ಕರ್ನಾಟಕ ಸಮಾಜಕ್ಕೆ ಬಂದ ಆಸ್ತಿಯಿಂದ ಆರಂಭಗೊಂಡು ಇಲ್ಲಿಯ ತನಕ ನಡೆದಿರುವ ಎಲ್ಲಾ ರೀತಿಯ ಅಕ್ರಮಗಳನ್ನು ಬಯಲಿಗೆ ತರುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಜಿಲ್ಲಾಧಿಕಾರಿಗಳು ಕೂಡಲೇ ಸಂಘವನ್ನು ಸೂಪರ್‌ಸೀಟ್ ಮಾಡಿ, ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕು. ಅಲ್ಲದೇ ಸಂಪೂರ್ಣ ಆಸ್ತಿಯನ್ನು ಸಮಾಜ ಕಲ್ಯಾಣ ಇಲಾಖೆಗೆ ಪರಾಭಾರೆ ಮಾಡಿ, ಸಂಘ ಸಂಪೂರ್ಣವಾಗಿ ಸಕ್ರಿಯವಾದ ನಂತರ ತಾಲೂಕಿನ ಸಮಾಜದ ಬಂಧುಗಳ ಒಪ್ಪಿಗೆಯಂತೆ ಸಂಘಕ್ಕೆ ವಹಿಸಬೇಕು ಎಂದು ಶಿವಕುಮಾರ್ ಒತ್ತಾಯಿಸಿದರು.

೧೯೪೨ ರಿಂದ ೨೦೧೯ ರವರೆಗೆ ಸಂಘದ ಯಾವುದೇ ವಹಿವಾಟುಗಳು ನಡೆದಿಲ್ಲ. ಸಂಘದ ವಿದ್ಯಾರ್ಥಿ ನಿಲಯ ಕಟ್ಟಡ ಇದ್ದರು ಸಹ ಕಂದಾಯ ಇಲಾಖೆಯ ಪ್ರಭಾರದಲ್ಲಿದ್ದ ಗ್ರಾಮಲೆಕ್ಕಾಧಿಕಾರಿ ಉಲ್ಲಾಸ್, ರಾಜಸ್ವ ನಿರೀಕ್ಷಕ ಆನಂದ್ ದೋಳಪ್ಪ ಅಕ್ರಮ ಖಾತೆ ವರ್ಗಾವಣೆಯಲ್ಲಿ ಭಾಗಿಯಾಗಿದ್ದು, ಯಾವುದೇ ಅಕ್ಷೇಪಣೆ ಸಲ್ಲಿಸದೇ ನೇರವಾಗಿ ಖಾತೆಯನ್ನು ಅಂಗೀಕರಿಸಿರುವುದು ಎಂಆರ್ ನಲ್ಲಿ ದಾಖಲಾಗಿದೆ. ಈ ನೌಕರರ ವಿರುದ್ದ ಶಿಸ್ತು ಕ್ರಮವಾಗಬೇಕು. ಈ ಸಂದರ್ಭದಲ್ಲಿದ್ದ ತಹಸೀಲ್ದಾರ್ ವಿರುದ್ಧವು ಸಹ ಕ್ರಮವಾಗಬೇಕೆಂದು ಶಿವಕುಮಾರ್ ಡೀಸಿ ಅವರನ್ನು ಒತ್ತಾಯಿಸಿದರು.

ಸರ್ವೇ ನಂಬರ್ ೨೯೫/೪ಸಿ, ೨೯೫/೪ಡಿ, ೨೯೫/೪ಎಫ್ ಗಳಲ್ಲಿ ಅಕ್ರಮವಾಗಿ ನೋಂದಾಣಿ ಮತ್ತು ಖಾತೆಗಳ ವಹಿವಾಟುಗಳಲ್ಲಿ ಭಾಗಿಯಾಗಿರುವ ಚಾ.ನಗರ ತಾಲೂಕಿನ ಕುದೇರಿನ ಕೆ.ಬಿ. ಹರೀಶ್, ಯಳಂದೂರು ತಾಲೂಕಿನ ಗುಂಬಳ್ಳಿಯ ಮಹೇಶ್‌ಕುಮಾರ್, ನಾಗವಳ್ಳಿಯ ಶಿವರಾಜು, ಅಂಭೇಡ್ಕರ್ ಬಡಾವಣೆಯ ನಿವಾಸಿಗಳಾದ ಸಿ.ಕೆ. ದಿಲೀಪ್‌ಕುಮಾರ್, ಶ್ರೀನಿಧಿ ಕುದರ್, ಶಂಕರಪುರ ಬಡಾವಣೆಯ ಸಿ.ಎಸ್. ಗೋವಿಂದರಾಜು, ಹೌಸಿಂಗ್ ಬೋರ್ಡ್‌ನ ನಿವಾಸಿ ಡೈಝಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಬೇಕೆಂದು ಶಿಫಾರಸ್ಸು ಮಾಡಿದ್ದು, ಅದರಂತೆ ಸಮಾಜ ಕಲ್ಯಾಣಾಧಿಕಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದು ತಕ್ಷಣ ಕ್ರಮವಾಗಬೇಕೆಂದು ಶಿವಕುಮಾರ್ ಒತ್ತಾಯಿಸಿದರು.

ಸಮಿತಿಯ ವರದಿ ಹೇಳಿರುವಂತೆ ಇವರೆಲ್ಲರು ಪ್ರಭಾವಿಗಳಾಗಿದ್ದು, ಸಾಕ್ಷ್ಯ ನಾಶ ಮಾಡುವ ಸಾಧ್ಯತೆಗಳು ಹೆಚ್ಚಿದೆ. ಅಲ್ಲದೇ ಇವರ ವಿರುದ್ದ ಹೋರಾಟ ಮಾಡುತ್ತಿರುವ ನಮ್ಮ ಸಮಿತಿಯ ಸದಸ್ಯರಿಗೆ ಪೊಲೀಸ್ ಇಲಾಖೆ ರಕ್ಷಣೆ ನೀಡಬೇಕು. ನಮಗೆ ಯಾವುದೇ ರೀತಿ ತೊಂದರೆಯಾದರು ಸಹ ಆದಿ ಕರ್ನಾಟಕದ ಸಂಘದ ಅಧ್ಯಕ್ಷರು ಹಾಗೂ ಸಮಿತಿಯ ಸದಸ್ಯರು ಮತ್ತು ಅವರ ಬೆಂಬಲಿಗರು ಕಾರಣರು. ಈ ಹಿಂದೆ ಅನೇಕ ಪ್ರಯತ್ನಗಳು ನಡೆದಿವೆ. ಹೀಗಾಗಿ ಎಸ್ಪಿ ಅವರು ಇವರನ್ನು ಕರೆಸಿ ಬುದ್ದಿವಾದ ಹೇಳಬೇಕು ಎಂದು ಶಿವಕುಮಾರ್ ಮನವಿ ಮಾಡಿದರು.

ಗೋಷ್ಠಿಯಲ್ಲಿ ಸಮಿತಿಯ ತಾ.ಪಂ. ಮಾಜಿ ಅಧ್ಯಕ್ಷ ಆರ್. ಮಹದೇವ್, ಮುಖಂಡರಾದ ನಾಗವಳ್ಳಿ ನಾಗಯ್ಯ, ಹೆಬ್ಬಸೂರು ರಂಗಸ್ವಾಮಿ, ಕಾಗಲವಾಡಿ ಶಿವಸ್ವಾಮಿ, ನಲ್ಲೂರು ಮಹದೇವಸ್ವಾಮಿ, ಉಮೇಶ್,ನಾಗರಾಜು ಇದ್ದರು.