ಸಾರಾಂಶ
ಕುಮಟಾ: ತಾಲೂಕಿನ ಹಳಕಾರದಲ್ಲಿರುವ ಅಂಚೆ ಇಲಾಖೆಯ ಶಾಖಾ ಕಚೇರಿಯ ಅಧಿಕಾರಿಯು ಗ್ರಾಹಕರೊಂದಿಗೆ ಸರಿಯಾಗಿ ಸ್ಪಂದಿಸದೇ ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಿರುವ ಗ್ರಾಮಸ್ಥರು ಕೂಡಲೇ ಸೂಕ್ತ ತನಿಖೆ ನಡೆಸುವ ಜತೆಗೆ ಅಲ್ಲಿನ ಶಾಖಾಧಿಕಾರಿಯನ್ನು ವರ್ಗಾಯಿಸುವಂತೆ ಆಗ್ರಹಿಸಿದ್ದಾರೆ.
ಭಾನುವಾರ ಹಳಕಾರದಲ್ಲಿ ಜಮಾಯಿಸಿದ ಗ್ರಾಮಸ್ಥರು ಅಂಚೆ ಶಾಖಾಧಿಕಾರಿ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂಚೆ ಕಚೇರಿ ಎದುರು ನ್ಯಾಯಕ್ಕಾಗಿ ಘೋಷಣೆಗಳನ್ನು ಕೂಗಿ, ಇಲ್ಲಿನ ಅವ್ಯವಹಾರದ ಕುರಿತು ಪರಿಶೀಲನೆ ಮತ್ತು ಸೂಕ್ತ ಕ್ರಮವಾಗಬೇಕು ಎಂದು ಒತ್ತಾಯಿಸಿದ್ದಾರೆ.ಹಳಕಾರದ ಅಂಚೆ ಶಾಖಾಧಿಕಾರಿ ತಮ್ಮ ಮನೆಯ ಚಾವಣಿಯಲ್ಲಿ ಅಂಚೆ ಕಚೇರಿ ತೆರೆದಿದ್ದು, ಅಪಾಯಕಾರಿಯಾದ ಏಣಿಯ ಮೇಲೆ ವೃದ್ಧರು, ಅಶಕ್ತರು, ಅಂಗವಿಕಲರು ಹತ್ತಲಾಗದೇ ಸಮಸ್ಯೆಯಾಗುತ್ತಿದೆ. ಅಂಚೆ ಗ್ರಾಹಕರಿಗೆ ಸರಿಯಾದ ಮಾಹಿತಿ ನೀಡದೇ ಪಾಸ್ ಬುಕ್‌ಗಳನ್ನು ೩ ತಿಂಗಳಿಗೂ ಹೆಚ್ಚು ತಮ್ಮ ಬಳಿಯೇ ಇಟ್ಟುಕೊಂಡು, ಬಡ್ಡಿ ಸೇರಿಸಲು ಮುಖ್ಯ ಬ್ರಾಂಚಿಗೆ ಪಾಸ್ ಪುಸ್ತಕ ಹೋಗಿದೆ ಎನ್ನುತ್ತಾರೆ.
ಕೆಲವರಿಗೆ ಠೇವಣಿ ಇಡುತ್ತೇನೆ ಎಂದು ಹೇಳಿ ವಿತ್ ಡ್ರಾ ಫಾರ್ಮ್‌ಗೆ ಸಹಿ ಪಡೆದು ಅವ್ಯವಹಾರ ಮಾಡಿದ್ದಾರೆ. ಬಳಿಕ ಎಫ್‌ಡಿ ಪ್ರಮಾಣಪತ್ರ ಕೇಳಿದರೆ ನೀಡದೇ ಹಣವನ್ನು ನೀವು ನಗದಾಗಿ ಪಡೆದುಕೊಂಡಿರುವುದಾಗಿ ಹೇಳುತ್ತಾರೆ. ಮನೆ ಮಂದಿ ಹೋಗಿ ವಿಚಾರಿಸಿದರೆ ವಿಡಿಯೋ ರೆಕಾರ್ಡ್ ಮಾಡಿಕೊಂಡು ಇಲ್ಲಸಲ್ಲದ ಆರೋಪ ಹೊರಿಸುತ್ತಾರೆ.ಸರ್ಕಾರದ ಯೋಜನೆಗಳಾದ ವೃದ್ಧಾಪ್ಯ ವೇತನ, ಗೃಹಲಕ್ಷ್ಮೀ, ವಿಧವಾವೇತನ ಮುಂತಾದವುಗಳನ್ನು ಸರಿಯಾಗಿ ನೀಡದೇ ಅವ್ಯವಹಾರ ಮಾಡಿದ್ದಾರೆ. ಹೀಗೆ ಜನರ ವಿಶ್ವಾಸ ದ್ರೋಹವೆಸಗಿ ಲಕ್ಷಾಂತರ ಅವ್ಯವಹಾರ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಸಾವಿರಾರು ಖಾತೆ ಹೊಂದಿರುವ ಹಳಕಾರದ ಅಂಚೆ ಕಚೇರಿಯ ಗ್ರಾಹಕರು ನಂಬಿಕೆ ಕಳೆದುಕೊಳ್ಳುವಂತಾಗಿದ್ದು, ಅಂಚೆ ಖಾತೆ ವಾಪಸ್ ಪಡೆಯಲು ನಿರ್ಧರಿಸಿದ್ದಾರೆ. ಆದ್ದರಿಂದ ಸೂಕ್ತ ತನಿಖೆ ನಡೆಸಿ ಇಲಾಖಾ ನಿಯಮದಂತೆ ಕ್ರಮ ಕೈಗೊಳ್ಳಬೇಕು. ಶಾಖಾಧಿಕಾರಿಯನ್ನು ವರ್ಗಾಯಿಸಬೇಕು.ನಡೆದಿರುವ ಅನ್ಯಾಯಕ್ಕೆ ಯೋಗ್ಯ ನ್ಯಾಯ ಕೊಡಿಸಬೇಕು ಎಂದು ಮನವಿಯಲ್ಲಿ ಬೇಬಿ ಸುರೇಶ ಹರಿಕಂತ್ರ, ಕುಸುಮಾ ಶಾಂತಾರಾಮ ಹರಿಕಂತ್ರ, ಲಕ್ಷ್ಮೀ ರಾಮ ಪಟಗಾರ, ರಾಜೇಶ್ವರಿ ಡಿ. ಪಟಗಾರ, ಕೃಷ್ಣ ಪಟಗಾರ, ಸುಕ್ರಿ ನಾರಾಯಣ ಮುಕ್ರಿ, ಗಂಗೆ ಬೊಮ್ಮ ಪಟಗಾರ, ಮೂಕಾಂಬಿಕಾ ಹರಿಕಂತ್ರ ಇನ್ನಿತರರು ಒತ್ತಾಯಿಸಿದ್ದಾರೆ. ಸ್ಥಳೀಯ ಪ್ರಮುಖರಾದ ಜಿ.ಎಸ್. ಗುನಗಾ, ಶಾಂತಾರಾಮ ಹರಿಕಂತ್ರ ಇತರರು ಇದ್ದರು. ಏಣಿ ಹತ್ತದಂತೆ ಸೂಚನೆ
ಹಳಕಾರ ಅಂಚೆ ಕಚೇರಿಯ ಏಣಿಗೆ ಸೂಚನಾ ಫಲಕವೊಂದನ್ನು ಅಳವಡಿಸಲಾಗಿದ್ದು ವಯಸ್ಸಾದವರು ಮತ್ತು ಅಂಗವಿಕಲರು ಏಣಿ ಹತ್ತಬೇಡಿ, ನಿಮ್ಮ ಜತೆಯಲ್ಲಿ ಏಣಿಯನ್ನು ಹತ್ತಬಲ್ಲ ವ್ಯಕ್ತಿಯನ್ನು ಕರೆತನ್ನಿ ಮತ್ತು ಅವರನ್ನು ಮೇಲೆ ಕಳುಹಿಸಿ ಎಂದು ಬರೆಯಲಾಗಿದೆ. ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ವೃದ್ಧರಾದ ವಿಷ್ಣು ಎಸ್. ಪಟಗಾರ, ಹುಲಿಯಪ್ಪ ಹರಿಕಂತ್ರ ಇತರರು ಅಂಚೆಯ ಇಕ್ಕಟ್ಟಾದ ಮತ್ತು ಕಡಿದಾದ ಏಣಿಯಿಂದ ಈಗಾಗಲೇ ಹಲವರು ಬಿದ್ದಿದ್ದಾರೆ. ನಮಗಂತೂ ಏರಲಾಗುವುದಿಲ್ಲ. ಸಮಸ್ಯೆಯಾಗಿದೆ ಎಂದಿದ್ದಾರೆ. ತಮಗೆ ಇಬ್ಬರು ಅಂಗವಿಕಲ ಮಕ್ಕಳಿದ್ದು, ಅವರ ಪಿಂಚಣಿ ಸಂಬಂಧಿಸಿದ ವ್ಯವಹಾರಕ್ಕೆ ಏಣಿಯಿಂದಾಗಿ ಸಾಧ್ಯವಾಗುತ್ತಿಲ್ಲ ಎಂದು ವೃದ್ಧೆ ಲಕ್ಷ್ಮೀ ಮಂಜುನಾಥ ಪಟಗಾರ ಹೇಳುತ್ತಾರೆ.