ಸಾರಾಂಶ
ಶಿಕ್ಷಕರ ಸದನದಲ್ಲಿ ಎಬಿವಿಪಿ (ಕರ್ನಾಟಕ ದಕ್ಷಿಣ) ಶೈಕ್ಷಣಿಕ ದುಂಡು ಮೇಜಿನ ಸಭೆ ನಡೆಯಿತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಮಾತ್ರ ಏಕರೂಪ ಶೈಕ್ಷಣಿಕ ವೇಳಾಪಟ್ಟಿ ಜಾರಿಗೊಳಿಸದೆ ಖಾಸಗಿ ಹಾಗೂ ಡೀಮ್ಡ್ ವಿಶ್ವವಿದ್ಯಾಲಯಗಳಿಗೂ ಅನ್ವಯಿಸಿ ಜಾರಿಗೊಳಿಸಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.ಭಾನುವಾರ ಶಿಕ್ಷಕರ ಸದನದಲ್ಲಿ ಎಬಿವಿಪಿ (ಕರ್ನಾಟಕ ದಕ್ಷಿಣ) ಶೈಕ್ಷಣಿಕ ದುಂಡು ಮೇಜಿನ ಸಭೆಯಲ್ಲಿ ಈ ಸಂಬಂಧ ನಿರ್ಣಯ ತೆಗೆದುಕೊಳ್ಳಲಾಗಿದೆ.
ಸಭೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿ ಮುಖಂಡರು, ಎಲ್ಲ ವಿಶ್ವವಿದ್ಯಾಲಯಗಳು ವಿಭಿನ್ನ ವೇಳಾಪಟ್ಟಿ ಅನುಸರಿಸುವುದರಿಂದ ವಿದ್ಯಾರ್ಥಿಗಳಿಗೆ ಪ್ರವೇಶ ಪಡೆಯಲು ಕಷ್ಟವಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ತಾವು ಬಯಸಿದ ಕಾಲೇಜು, ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಸಾಧ್ಯವಾಗುತ್ತಿಲ್ಲ. ಆದರೆ, ಈಗ ಸರ್ಕಾರಿ ವಿಶ್ವವಿದ್ಯಾಲಯಗಳಿಗೆ ಮಾತ್ರ ಏಕರೂಪ ಶೈಕ್ಷಣಿಕ ವೇಳಾಪಟ್ಟಿ ತಂದರೆ ಅದು ಖಾಸಗಿ ವಿವಿಗಳಿಗೆ ಅನುಕೂಲವಾಗಲಿದೆ. ಖಾಸಗಿ ವಿವಿಗಳಲ್ಲಿ ಯಾವಾಗ ಬೇಕಾದರೂ ಪ್ರವೇಶ ಪಡೆಯಬಹುದು ಎನ್ನುವಂತಾಗುತ್ತದೆ. ಹಾಗಾಗಿ ಖಾಸಗಿ, ಡೀಮ್ಡ್ ವಿವಿಗಳಲ್ಲೂ ಪ್ರತಿ ವರ್ಷ ಪ್ರವೇಶಾತಿ ಪ್ರಕ್ರಿಯೆ, ಪರೀಕ್ಷೆ, ಫಲಿತಾಂಶಗಳ ಪ್ರಕಟಣೆ ಸೇರಿದಂತೆ ಎಲ್ಲ ಶೈಕ್ಷಣಿಕ ವಿಚಾರಗಳಿಗೂ ಏಕರೂಪ ವೇಳಾಪಟ್ಟಿಯನ್ನು ಬರುವ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ತರಬೇಕೆಂದು ಒತ್ತಾಯಿಸಿದರು.ಇದೇ ವೇಳೆ, ಉನ್ನತ ಶಿಕ್ಷಣ ಇಲಾಖೆಯ ಯುಯುಸಿಎಂಎಸ್ ತಂತ್ರಾಂಶದಲ್ಲಿ ಇರುವ ನ್ಯೂನ್ಯತೆಗಳನ್ನು ಸರಿಪಡಿಸಿ ನಿರ್ವಹಣೆಗೆ ಕೌಶಲ್ಯಯುತ ಸಿಬ್ಬಂದಿ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಎಬಿವಿಪಿ (ಕರ್ನಾಟಕ ದಕ್ಷಿಣ) ವಿಭಾಗದ ಅಧ್ಯಕ್ಷ ಡಾ। ಎಚ್.ಕೆ.ಸತೀಶ, ಡಾ। ಆನಂದ ಹೊಸೂರ, ಕಾರ್ಯದರ್ಶಿಗಳಾದ ಸಚಿನ್ ಕುಳಗೇರಿ, ಎಚ್.ಕೆ.ಪ್ರವೀಣ, ಬಸವೇಶ ಕೋರಿ, ಧಾರವಾಡ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಣಿಕಂಠ ಕಳಸ ಇದ್ದರು.