ಸಾರಾಂಶ
ಲಕ್ಷ್ಮೇಶ್ವರ: ಶ್ರೀರಾಮ ಸೇನೆ ಹಾಗೂ ವಿವಿಧ ಹಿಂದೂಪರ ಸಂಘಟನೆಗಳು ಅ. 19ರಂದು (ಶನಿವಾರ) ಲಕ್ಷ್ಮೇಶ್ವರ ಬಂದ್‌ಗೆ ಕರೆ ನೀಡಿದ್ದನ್ನು ಕೈಬಿಡಬೇಕು. ಇಲ್ಲವಾದಲ್ಲಿ ಬಂದ್‌ಗೆ ಕರೆ ಕೊಟ್ಟವರ ವಿರುದ್ಧ ಪ್ರತಿಭಟನೆ ಮಾಡಲಾಗುವುದು ಎಂದು ಲಕ್ಷ್ಮೇಶ್ವರ ತಾಲೂಕು ಪ್ರಗತಿಪರ ಸಂಘಟನೆಗಳ ಸಂಚಾಲಕ ಸುರೇಶ ನಂದೆಣ್ಣವರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಕಳೆದ ವಾರ ದಸರಾ ಪ್ರಯುಕ್ತ ನಡೆದ ದುರ್ಗಾದೇವಿಯ ಮೆರವಣಿಗೆಯಲ್ಲಿ ಗೋಸಾವಿ ಸಮಾಜದ ಯುವಕರ ಹಾಗೂ ಅನ್ಯ ಕೋಮಿನ ಯುವಕರ ಮಧ್ಯೆ ಸಣ್ಣ ವಿಷಯಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದು ಕೆಲವರು ಅದನ್ನೇ ದೊಡ್ಡದಾಗಿ ಮಾಡಿ, ಕೋಮು ಬಣ್ಣ ಹಚ್ಚಿ ಅಶಾಂತಿ ಸೃಷ್ಟಿಸಿ ಪಟ್ಟಣದ ಬಂದ್ ಮಾಡಲು ಹೊರಟಿರುವುದು ಖಂಡನೀಯ. ಅಲ್ಲದೆ ಪಟ್ಟಣದ ದಕ್ಷ ಪಿಎಸ್‌ಐ ಈರಪ್ಪ ರಿತ್ತಿ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಪಟ್ಟಣ ಕೋಮು ಸೌಹಾರ್ದಕ್ಕೆ ಹೆಸರಾಗಿದ್ದು ಅದನ್ನು ಹಾಳು ಮಾಡಲು ಹೊರಟಿದ್ದಾರೆ.
ಲಕ್ಷ್ಮೇಶ್ವರ ಪಟ್ಟಣ ಈಗ ಶಾಂತಿಯಿಂದ ಇದ್ದು, ಇದೀಗ ತಾನೇ ವ್ಯಾಪಾರ ವಹಿವಾಟು ಸುಧಾರಿಸುತ್ತಿದೆ. ದೀಪಾವಳಿ ಹಬ್ಬದ ವ್ಯಾಪಾರ ವಹಿವಾಟು ಈಗ ಆರಂಭವಾಗುತ್ತಿದ್ದು. ಅಂದು ನಡೆಯುವ ಬಂದ್ ವೇಳೆ ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟು ತೆರೆದು ವ್ಯಾಪಾರ ಮಾಡಬೇಕು, ಅಂತಹ ವ್ಯಾಪಾರಸ್ಥರಿಗೆ ಗುಲಾಬಿ ಹೂವನ್ನು ನೀಡಿ ಸ್ವಾಗತಿಸಲಾಗುವುದು. ಪಟ್ಟಣದಲ್ಲಿ ಹಿಂದೂ-ಮುಸ್ಲಿಂ ಸಮಾಜದವರು ಅಣ್ಣ ತಮ್ಮಂದಿರ ಹಾಗೆ ಬದುಕುತ್ತಿದ್ದಾರೆ. ಆದ್ದರಿಂದ ಅ. 19ರಂದು ನೀಡಿರುವ ಬಂದ್ ಕರೆಯನ್ನ ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ಅಂದು ನಮ್ಮ ಸಂಘಟನೆಯು ಬಂದ್ ಕರೆಯನ್ನು ವಿರೋಧಿಸಿ ಹೋರಾಟ ಮಾಡಲಿದೆ ಎಂದು ಹೇಳಿದರು.ಈ ವೇಳೆ ಸೋಮಣ್ಣ ಬೆಟಗೇರಿ, ಪದ್ಮರಾಜ ಪಾಟೀಲ್, ರಾಮಣ್ಣ ಲಮಾಣಿ (ಶಿಗ್ಲಿ), ಶರಣು ಗೋಡಿ, ಕೋಟೆಪ್ಪ ವರ್ದಿ, ತಿಪ್ಪಣ್ಣ ಸಂಶಿ ಮಾತನಾಡಿ ಶ್ರೀರಾಮ ಸೇನೆಯ ಜಿಲ್ಲಾ ಸಂಚಾಲಕ ರಾಜು ಖಾನಪ್ಪನವರ ಅವರು ಲಕ್ಷ್ಮೇಶ್ವರ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಕಾರ್ಯ ಮಾಡುತ್ತಿರುವುದು ಖಂಡನೀಯ. ಕೂಡಲೇ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಕಾಗೋಷ್ಠಿಯಲ್ಲಿ ನೀಲಪ್ಪ ಶೇರಸೂರಿ, ಇಸ್ಮಾಯಿಲ್ ಆಡೂರ, ಅಣ್ಣಪ್ಪ ರಾಮಗೇರಿ, ನೀಲಪ್ಪ ಪಡಗೇರಿ, ಮಂಜುನಾಥ ಶೇರಸೂರಿ, ಯಲ್ಲಪ್ಪ ಸೂರಣಗಿ, ಬಸವರೆಡ್ಡಿ ಹನುಮರೆಡ್ಡಿ, ರಾಜು ಓಲೆಕಾರ, ನಾಗೇಶ ಅಮರಾಪುರ, ಹೊನ್ನಪ್ಪ ವಡ್ಡರ, ಮುದಕಣ್ಣ ಗದ್ದಿ, ನೀಲಪ್ಪ ಪಡಗೇರಿ, ಎಂ.ಎಂ.ಗಾಡಗೋಳಿ ಸೇರಿದಂತೆ ಅನೇಕರು ಇದ್ದರು.