ಮಕ್ಕಳ ನೂತನ ಶಿಕ್ಷಣ ಯೋಜನೆ ಕೈಬಿಡಲು ಆಗ್ರಹ

| Published : Jun 17 2024, 01:34 AM IST

ಸಾರಾಂಶ

ಮೂರರಿಂದ ಆರು ವರ್ಷದ ಮಕ್ಕಳಲ್ಲಿ ನಾಲ್ಕರಿಂದ ಆರು ವರ್ಷದ ಮಕ್ಕಳು ಶಾಲೆಗಳಿಗೆ ತೆರಳಿದರೆ ಅಂಗನವಾಡಿ ಕೇಂದ್ರಕ್ಕೆ ಬರುವ ಮಕ್ಕಳು ಯಾರು. ಆಗ ಅಂಗನವಾಡಿ ಕೇಂದ್ರಗಳು ಮುಚ್ಚಿ ಹೋಗುತ್ತವೆ. ಈ ಬಗ್ಗೆ ಅಧ್ಯಯನಕ್ಕೆ ಸಮಿತಿ ರಚಿಸಲಿ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಾಲ್ಕು ವರ್ಷದೊಳಗಿನ ಮಕ್ಕಳಿಗೆ ಆರ್‌ಡಿಪಿಆರ್‌ ರೂಪಿಸುವ ಯಾವುದೇ ಕಾರ್ಯಕ್ರಮಗಳನ್ನು ಮತ್ತು 4-6 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ಇಲಾಖೆ ರೂಪಿಸುವ ಯೋಜನೆಗಳನ್ನು ಸರ್ಕಾರ ನಿಲ್ಲಿಸುವಂತೆ ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರ ಸಂಘದ ಜಿಲ್ಲಾ ಸಮಿತಿ ಜಿಲ್ಲಾಡಳಿತ ಭವನ ಆವರಣದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಸಿತು.

ಪ್ರತಿಭಟನಾಕಾರರನ್ನು ಉದ್ದೇಶಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರ ಸಂಘದ ಜಿಲ್ಲಾಧ್ಯಕ್ಷೆ ಲಕ್ಷ್ಮಿದೇವಮ್ಮ ಮಾತನಾಡಿ, ಶಿಕ್ಷಣ ಇಲಾಖೆಯಲ್ಲಿ ಹೇಳಿಕೊಡುವ ಅನೌಪಚಾರಿಕ ಶಿಕ್ಷಣವನ್ನು ಮತ್ತು ಎಬಿಸಿಡಿ ಇಂಗ್ಲಿಷ್ ವರ್ಣಮಾಲೆ ಮತ್ತು ಪದ ಗುಂಚಗಳನ್ನು ಮಾತ್ರವೇ ಬೋಧಿಸುವುದು ಇರುತ್ತದೆ. ಮಕ್ಕಳ ಅಪೌಷ್ಟಿಕತೆಯಡೆಗೆ ಗಮನ ಇರುವುದಿಲ್ಲ.ಇಂತಹ ಅವೈಜ್ಞಾನಿಕ ಕ್ರಮಗಳ ಬಗ್ಗೆ ಸರ್ಕಾರ ಒತ್ತು ನೀಡುತ್ತಿರುವುದು ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಅಂಗನವಾಡಿ ಮುಚ್ಚುವ ಸ್ಥಿತಿ

ಇಂತಹ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರಗಳಿಗೆ ಬರುವ ಮೂರರಿಂದ ಆರು ವರ್ಷದ ಮಕ್ಕಳಲ್ಲಿ ನಾಲ್ಕರಿಂದ ಆರು ವರ್ಷದ ಮಕ್ಕಳು ಶಾಲೆಗಳಿಗೆ ತೆರಳಿದರೆ ಅಂಗನವಾಡಿ ಕೇಂದ್ರಕ್ಕೆ ಬರುವ ಮಕ್ಕಳು ಯಾರು. ಆಗ ಅಂಗನವಾಡಿ ಕೇಂದ್ರಗಳು ಮುಚ್ಚಿ ಹೋಗುತ್ತವೆ. ಆದ್ದರಿಂದ ಈ ಅಂಶಗಳನ್ನು ಪರಿಶೀಲಿಸಿ ಈಗಾಗಲೇ ಶಿಕ್ಷಣ ಇಲಾಖೆ ಅಡಿಯಲ್ಲಿರುವ ಎಲ್‌ಕೆಜಿ, ಯುಕೆಜಿ ಮತ್ತು ಕೆಪಿಎಸ್ ಶಾಲೆಗಳಲ್ಲಿ ಮಕ್ಕಳ ಒಟ್ಟು ಸ್ಥಿತಿ ಹಾಗೂ ಐಸಿಡಿಎಸ್ ಅಡಿಯಲ್ಲಿರುವ ಮಕ್ಕಳ ಸ್ಥಿತಿಗತಿಯ ಅಧ್ಯಯನ ಮಾಡಬೇಕು ಎಂದರು.

ಅಧ್ಯಯನಕ್ಕೆ ಸಮಿತಿ ರಚಿಸಿ

ಅಧ್ಯಯನ ಮಾಡಲು ಮಕ್ಕಳ ತಜ್ಞರು, ಮಕ್ಕಳ ವೈದ್ಯರು ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದ ತಜ್ಞರು ಹಾಗೂ ನಮ್ಮ ಸಂಘದ ಪ್ರತಿನಿಧಿಗಳು ಮತ್ತು ಎರಡೂ ಇಲಾಖೆಯ ಪ್ರಮುಖರನ್ನು ಒಳಗೊಂಡ ಸಮಿತಿ ನೇಮಿಸಿ ವರದಿ ಮಾಡಲು ಸೂಚಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು. ಪ್ರತಿಭಟನಾಕಾರರು ಅಂಗನವಾಡಿ ಕಾರ್ಯಕರ್ತರ ಹಾಗೂ ಸಹಾಯಕರ ಇನ್ನಿತರ ಬೇಡಿಕೆಗಳನ್ನು ಕಾಲಮಿತಿಯೊಳಗೆ ಈಡೇರಿಸಬೇಕೆಂದು ಒತ್ತಾಯಿಸಿ ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿರವರಿಗೆ ಮನವಿ ಪತ್ರ ನೀಡಿದರು. ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರ ಸಂಘದ ಜಿಲ್ಲಾ ಕಾರ್ಯದರ್ಶಿ ರತ್ನಮ್ಮ, ಖಜಾಂಚಿ ವೆಂಕಟಲಕ್ಷ್ಮಿ, ಅಶ್ವತಮ್ಮ, ಪಿಳ್ಳಮ್ಮ, ಪದ್ಮ, ಶಾಂತಮ್ಮ ರಾಧಾ, ಭಾಗ್ಯಮ್ಮ, ಸುಧಾ ಗೀತಾ, ಲಕ್ಷ್ಮಿನರಸಮ್ಮ, ಉಮಾ, ಶುಭ, ಮುನಿರತ್ನಮ್ಮ ಪದ್ಮಾ ಸೇರಿ ವಿವಿಧ ತಾಲೂಕು ಸಂಘಗಳ ಪದಾಧಿಕಾರಿಗಳು ಭಾಗವಹಿಸಿದ್ದರು.