ಬ್ಯಾಡಗಿ: ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ಶೇ.30ರಷ್ಟು ಅನುದಾನ ಶೈಕ್ಷಣಿಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮೀಸಲಿಡುವಂತೆ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಶುಕ್ರವಾರ ಶಾಸಕರ ಜನಸಂಪರ್ಕ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿದರಲ್ಲದೇ ಶಾಸಕರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.ಈ ವೇಳೆ ಮಾತನಾಡಿದ ಎಸ್‌ಎಫ್‌ಐ ಜಿಲ್ಲಾ ಮುಖಂಡ ಅರುಣ ನಾಗವತ, ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಮಾ.6ರಂದು ಸಿಎಂ ಸಿದ್ದರಾಮಯ್ಯನವರು ಮಂಡಿಸುವ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕೊಠಾರಿ ಆಯೋಗದ ಶಿಫಾರಸ್ಸಿನಂತೆ ಶೇ.30ರಷ್ಟು ಅನುದಾನ ಮೀಸಲಿಡಬೇಕು ಎಂದರು.
ಕಾಲೇಜುಗಳನ್ನು ಸ್ಥಾಪಿಸಿ: ತಾಲೂಕಿಗೆ ಸರ್ಕಾರಿ ನರ್ಸಿಂಗ್, ಪ್ಯಾರಾ ಮೆಡಿಕಲ್, ಬಿ.ಫಾರ್ಮ್, ಎಮ್.ಫಾರ್ಮ, ಸರ್ಕಾರಿ ಜಿಟಿ ಟಿಸಿ, ಡಿಪ್ಲೊಮಾ ಸೇರಿದಂತೆ ವಿವಿಧ ರೀತಿಯ ಕೋರ್ಸ್ ಹಾಗೂ ಅದಕ್ಕೆ ಸಂಬಂಧಿಸಿದ ಕಾಲೇಜುಗಳನ್ನು ಮಂಜೂರು ಮಾಡಿಸಬೇಕು, ಬ್ಯಾಡಗಿ ಪಟ್ಟಣದಲ್ಲಿ ಹೈಟೆಕ್ ಬಸ್ ನಿಲ್ದಾಣ, ನಗರ ಸಾರಿಗೆ ಇದರೊಟ್ಟಿಗೆ ಇಲ್ಲಿನ ಮುಖ್ಯರಸ್ತೆ ಅಗಲೀಕರಣ ಮಾಡುವಂತೆ ಆಗ್ರಹಿಸಿದರು.ವಿವಿಗಳಿಗೆ ಅನುದಾನ ನೀಡಿ: ಮಲ್ಲೇಶ ಬ್ಯಾಡಗಿ ಮಾತನಾಡಿ, ಸರ್ಕಾರಿ ಇಂಜಿನಿಯರಿಂಗ್, ಮೆಡಿಕಲ್, ಪ್ಯಾರಾಮೆಡಿಕಲ್, ನರ್ಸಿಂಗ್, ಹಾವೇರಿ ವಿಶ್ವವಿದ್ಯಾಲಯ, ಶಿಗ್ಗಾಂವಿ ಜಾನಪದ ವಿವಿ, ಹನುಮನಮಟ್ಟಿ ಕೃಷಿ ವಿವಿಗಳು ಸೇರಿದಂತೆ ಹಲವು ವಿವಿಗಳು ಅನುದಾವಿಲ್ಲದೇ ಪರದಾಡುತ್ತಿವೆ. ಈ ನಿಟ್ಟಿನಲ್ಲಿ ಅನುದಾನ ನೀಡಿ ಶಿಕ್ಷಣ ಕ್ಷೇತ್ರವನ್ನು ಉಳಿಸುವಂತೆ ಆಗ್ರಹಿಸಿದರು.ಶೈಕ್ಷಣಿಕ ಸಾಲ ಮನ್ನಾ ಮಾಡಿ: ಹಾಸ್ಟೆಲ್ ವಿದ್ಯಾರ್ಥಿಗಳ ಮಾಸಿಕ ಆಹಾರ ಭತ್ಯೆಯನ್ನು ಕನಿಷ್ಠ 4,500 ರು.ಗಳಿಗೆ ಹೆಚ್ಚಿಸುವುದು ಸೇರಿದಂತೆ ಜಿಲ್ಲೆಗೆ ಹೆಚ್ಚುವರಿಯಾಗಿ ಕನಿಷ್ಠ 10 ಹಾಸ್ಟೆಲ್ ಮಂಜೂರು, ಅದರಲ್ಲಿ ಬ್ಯಾಡಗಿಗೆ 5 ಹಾಸ್ಟೆಲ್ ಮಂಜೂರು ಮಾಡಬೇಕು, ರಾಜ್ಯದಲ್ಲಿ ಶಿಕ್ಷಣದ ಶುಲ್ಕ ಕಟ್ಟಲು ಶೈಕ್ಷಣಿಕ ಸಾಲ ಮಾಡಿಕೊಂಡಿರುವ ಎಲ್ಲ ವರ್ಗದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಸಾಲಮನ್ನಾ ಮಾಡಬೇಕು. ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸಲು ಹಾಗೂ ಉನ್ನತ ಶಿಕ್ಷಣದವರೆಗೂ (ಎಲ್.ಕೆ.ಜಿ. ಯಿಂದ ಪಿಎಚ್.ಡಿ.ವರೆಗೆ), ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕು ಎಂದರು.ಈ ವೇಳೆ ರಜಾಕ ಗುತ್ತಲ, ನವೀನ ತಳವಾರ, ಶಿವರಾಜ, ಸಚಿನ ಓಲೇಕಾರ, ಚಂದ್ರು ಆರ್.ಕೆ., ಪ್ರಶಾಂತ ಗುಡ್ಡದ, ದರ್ಶನ ಊದಗಟ್ಟಿ, ದಿಳ್ಳೆಪ್ಪ ಅಳಲಗೇರಿ, ಪುಟ್ಟೇಶ ದೇವರಗುಡ್ಡ, ಪವನ ಬಳ್ಳಾರಿ, ಸಂಜೀವ ಬಾಗಮ್ಮನವರ, ಎಫ್.ಭರತ. ಕೆ. ಗಣೇಶ ಮಾಸ್ಟರ, ನಾಗಪ್ಪ ಚಿಕ್ಕಣ್ಣನವರ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಾಸಕರ ಅನುಪಸ್ಥಿತಿಯಲ್ಲಿ ಆಪ್ತಸಹಾಯಕ ನದಾಫ್ ಮನವಿ ಸ್ವೀಕರಿಸಿದರು.