ಕ್ರಿಮಿನಲ್ ಹಿನ್ನೆಲೆ ಇರುವ ಕುಟುಂಬದಿಂದ ಬಂದ ನಾರಾ ಭರತ್ ರೆಡ್ಡಿ ಮಹಿರ್ಷಿ ವಾಲ್ಮೀಕಿ ಪುತ್ಥಳಿ ಉದ್ಘಾಟನೆ ಕಾರ್ಯಕ್ರಮ

ಗಂಗಾವತಿ: ಶಾಸಕ ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಬಿ.ಶ್ರೀರಾಮುಲು ಅವರ ಹತ್ಯೆಗೆ ಸಂಚು ರೂಪಿಸಿ ತಮ್ಮ ಬೆಂಬಲಿಗರು, ಅಂಗರಕ್ಷಕರಿಂದ ಗೋಲಿಬಾರ್ ಮಾಡಿಸಿದ ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿ ಮತ್ತು ಆತನ ಸಹಚರರನ್ನು ಕೂಡಲೇ ಬಂಧಿಸಬೇಕೆಂದು ಮಾಜಿ ಸಂಸದ ಶಿವರಾಮಗೌಡ, ಮಾಜಿ ಶಾಸಕ ಪರಣ್ಣ ಮುನವಳ್ಳಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

ಶನಿವಾರ ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಬಳ್ಳಾರಿ ಗೋಲಿಬಾರ್ ಪ್ರಕರಣವನ್ನು ತೀವ್ರವಾಗಿ ಖಂಡಿಸಿ ಈ ಪ್ರಕರಣ ನಡೆಯಲು ಮೂಲಕಾರಣೀಕರ್ತರಾದ ಶಾಸಕ ಭರತ್ ರೆಡ್ಡಿ ಸೇರಿದಂತೆ ಆತನ ಬೆಂಬಲಿಗರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಮತ್ತು ಶಾಸಕ ಜನಾರ್ದನ ರೆಡ್ಡಿ ಹಾಗೂ ಬಿ. ಶ್ರೀರಾಮುಲು ಅವರಿಗೆ ಸರ್ಕಾರ ಸೂಕ್ತ ಭದ್ರತೆ ನೀಡಬೇಕೆಂದು ಒತ್ತಾಯಿಸಿದರು.

ಕ್ರಿಮಿನಲ್ ಹಿನ್ನೆಲೆ ಇರುವ ಕುಟುಂಬದಿಂದ ಬಂದ ನಾರಾ ಭರತ್ ರೆಡ್ಡಿ ಮಹಿರ್ಷಿ ವಾಲ್ಮೀಕಿ ಪುತ್ಥಳಿ ಉದ್ಘಾಟನೆ ಕಾರ್ಯಕ್ರಮದ ಬ್ಯಾನರ್ ಕಟ್ಟುವ ನೆಪದಲ್ಲಿ ಗಲಭೆ ಎಬ್ಬಿಸಿ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲುರನ್ನು ಹತ್ಯೆಗೈಯಲು ತಮ್ಮ ಬೆಂಬಲಿಗರ ಖಾಸಗಿ ಅಂಗರಕ್ಷಕರಿಂದ 9 ಬಾರಿ ಗೋಲಿಬಾರ್ ಮಾಡಿಸಿದ್ದು ಸೂಕ್ತ ಪ್ರತ್ಯಕ್ಷ ಸಾಕ್ಷಾಧಾರಗಳು ಸರ್ಕಾರಕ್ಕೆ ಲಭ್ಯವಾಗಿವೆ. ಅಲ್ಲದೇ ನಾರಾ ಭರತ್ ರೆಡ್ಡಿ ತಾವು ಮನಸ್ಸು ಮಾಡಿದರೆ ಇಡೀ ಬಳ್ಳಾರಿ ಮತ್ತು ಜನಾರ್ದನ ರೆಡ್ಡಿ ನಿವಾಸವನ್ನು ಸುಟ್ಟು ಹಾಕಬಲ್ಲೆ ಎಂದು ದ್ವೇಷ ಮತ್ತು ಪ್ರಚೋಧನಕಾರಿ ಭಾಷಣ ಮಾಡಿದ್ದಾರೆ. ರಾಜ್ಯ ಸರ್ಕಾರವೇ ಇತ್ತೀಚಿಗೆ ತಂದ ದ್ವೇಷ ಭಾಷಣ ಮಸೂದೆಯಡಿ ತಕ್ಷಣ ಭರತ್ ರೆಡ್ಡಿಯನ್ನು ಬಂಧಿಸುವ ಮೂಲಕ ಈ ಮಸೂದೆಗೆ ಆದ್ಯತೆ ನೀಡಬೇಕೆಂದು ಆಗ್ರಹಿಸಿದರು.

ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ದುರಗಪ್ಪ ಆಗೋಲಿ, ನಗರ ಮಂಡಲ ಅಧ್ಯಕ್ಷ ಚಂದ್ರಶೇಖರ ಹೀರೂರ, ಎಚ್. ಗೀರೆಗೌಡ, ಮನೋಹರಗೌಡ ಹೇರೂರ, ಜೋಗದ ಹನುಮಂತಪ್ಪ ನಾಯಕ, ರಾಘವೇಂದ್ರ ಶೆಟ್ಟಿ, ಮೌಲಾಸಾಬ್, ವೀರಭದ್ರಪ್ಪ, ಅಲಿ, ರಮೇಶ ಚೌಡ್ಕಿ, ಸಂಗಯ್ಯ ಸ್ವಾಮಿ ಸಂಶಿಮಠ, ಕಾಶಿನಾಥ ಚಿತ್ರಗಾರ, ಚನ್ನಪ್ಪ ಮಳಗಿ ಅನೇಕರಿದ್ದರು.