ಲಕ್ಷ್ಮೇಶ್ವರ: ಹೊಸ ಬಸ್ ಸ್ಟಾಂಡ್ ಹತ್ತಿರ ಇರುವ ಪುರಸಭೆ ವಾಣಿಜ್ಯ ಮಳಿಗೆಗಳ ಅವಧಿ ಮುಗಿದಿದ್ದು, ಮರುಟೆಂಡರ್ ಕರೆಯುವ ಮೂಲಕ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾದ್ಯಕ್ಷ ಬಸವರಾಜ ಹಿರೇಮನಿ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷ ಶರಣು ಗೋಡಿ, ಜಯಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಇಸ್ಮಾಯಿಲ್ ಆಡೂರ ಒತ್ತಾಯಿಸಿದರು.ಮಂಗಳವಾರ ಪಟ್ಟಣದ ಬಸ್ ಸ್ಟಾಂಡ್ ಎದುರಿಗಿನ ಪುರಸಭೆಯ ಐಡಿಎಸ್‌ಎಂಟಿ ವಾಣಿಜ್ಯ ಸಂಕೀರ್ಣ ಎದುರು ಪ್ರತಿಭಟನೆ ನಡೆಸಿ ಮಾತನಾಡಿದರು.

ಪುರಸಭೆಯ ವಾಣಿಜ್ಯ ಮಳಿಗೆಗಳಲ್ಲಿ ಅನೇಕ ವರ್ಷಗಳಿಂದ ಚಿಕನ್ ಅಂಗಡಿ, ಎಗ್ ರೈಸ್ ಅಂಗಡಿಗಳು ಇದ್ದು, ಇವುಗಳನ್ನು ಜಪ್ತಿ ಮಾಡಬೇಕು. 2023ರಲ್ಲಿ ಕೆಲ ವಾಣಿಜ್ಯ ಮಳಿಗೆಗಳ ಅವಧಿ ಮುಗಿದಿದ್ದು, ಅವುಗಳ ಪುನಃ ಟೆಂಡರ್ ಆಗಬೇಕು. ಲೋಪದೋಷ ಎಸಗಿದ ಹಿಂದೆ ಇದ್ದ ಪುರಸಭೆ ಮುಖ್ಯಾಧಿಕಾರಿ ಅಮಾನತು ಮಾಡಬೇಕು ಎಂದರು.

ಪುರಸಭೆ ಹಿರಿಯ ಅರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್ ಹಾಗೂ ಕಂದಾಯ ನಿರೀಕ್ಷಕ ಸುರೇಶ ಪೂಜಾರ ಅವರಿಗೆ ತರಾಟೆ ತೆಗೆದುಕೊಂಡ ಕಾರ್ಯಕರ್ತರು, ಇಲ್ಲಿ ಇರುವ ಎಗ್ಗರೈಸ್, ಚಿಕನ್ ಅಂಗಡಿ ಜಪ್ತಿ ಮಾಡದಿದ್ದರೆ ಇಲ್ಲಿಂದ ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಪೊಲೀಸರ ಬಂದೋಬಸ್ತನಲ್ಲಿ ವಾಣಿಜ್ಯ ಮಳಿಗೆಗಳಲ್ಲಿ ಇದ್ದ ಎಗ್ಗರೈಸ್, ಚಿಕನ್ ಹಾಗೂ ಮಾಂಸದ ಹೋಟೆಲಗಳನ್ನು ಜಪ್ತಿ ಮಾಡಿದರು. ಜಪ್ತಿ ಮಾಡಿದ ಅಂಗಡಿ ತೆಗೆಯಬಾರದು ಎಂದು ಹೇಳಿದ ಅವರು ಪ್ರತಿಭಟನಾಕಾರರು ಟೆಂಡರ್ ಎಂದು ಪ್ರಶ್ನೆ ಮಾಡಿದಾಗ ಅಧಿಕಾರಿಗಳು ಜುಲೈ ಕೊನೆಯ ವಾರದಲ್ಲಿ ಟೆಂಡರ್ ಪ್ರಕ್ರಿಯೆ ನಡೆಸುತ್ತೇವೆ ಎಂದು ಭರವಸೆ ನೀಡಿದ ಹಿನ್ನೆಲೆ ಪ್ರತಿಭಟನೆಯಿಂದ ಸರಿದರು.

ಈ ವೇಳೆ ಸಿಪಿಐ ವಿ.ವೈ. ನ್ಯಾಮಗೌಡ, ಪಿಎಸ್ಐ ನಾಗರಾಜ ಗಡದ, ಕ್ರೈಂ ಪಿಎಸ್ಐ ಟಿ.ಕೆ. ರಾಠೋಡ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದರು. ಪುರಸಭೆ ವ್ಯವಸ್ಥಾಪಕರು ಮಂಜುಳಾ ಹೂಗಾರ, ಹನುಮಂತಪ್ಪ ನಂದೆಣ್ಣವರ ಇದ್ದರು. ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ತಾಲೂಕು ಅಧ್ಯಕ್ಷ ನಾಗೇಶ ಅಮರಾಪುರ, ವಿವಿಧ ಸಂಘಟನೆಗಳ ಸದಸ್ಯ ರಮೇಶ ಹಂಗನಕಟ್ಟಿ, ಮಂಜುನಾಥ ಮುಳಗುಂದ, ಸುರೇಶ ಹಟ್ಟಿ, ಮಹಾಂತೇಶ ಗುದ್ನಾಳ, ಇಸಾಕಬಾಸಾ ಹರಪನಹಳ್ಳಿ ಬಸವರಾಜ ಮೇಲ್ಮುರಿ, ವೀರಭದ್ರಯ್ಯ ಮಠಪತಿ, ನಜೀರ ಬಾಗಲಕೋಟ, ಶರಣಪ್ಪ ಬಸಾಪುರ, ಸಂಜೀವ ಪೋತರಾಜ, ಮಹೇಶ ಸೂರಣಗಿ, ಪ್ರವೀಣ ಆಚಾರಿ ಸೇರಿದಂತೆ ಮೂರು ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.