ಗ್ರಾಪಂ ಹೆಸರಿನ ಅಕ್ರಮ ಪಹಣಿ ರದ್ದುಪಡಿಸಲು ಆಗ್ರಹ

| Published : Feb 01 2025, 12:00 AM IST

ಸಾರಾಂಶ

ಕಡೂರು, ಉದ್ದೇಶಿತ ಕ್ರೀಡಾಂಗಣಕ್ಕೆ ಮೀಸಲಿಟ್ಟಿದ್ದ 5 ಎಕರೆ ಜಾಗವನ್ನು ಅಕ್ರಮವಾಗಿ ಗ್ರಾಮ ಪಂಚಾಯಿತಿ ಹೆಸರಿಗೆ ಖಾತೆ ವರ್ಗಾಯಿಸಿರುವ ಪಹಣಿ ಯನ್ನು ಅಧಿಕಾರಿಗಳು ಕೂಡಲೇ ರದ್ದುಪಡಿಸಬೇಕು ಎಂದು ಗ್ರಾಪಂ ಮಾಜಿ ಅಧ್ಯಕ್ಷ ಕಂಸಾಗರ ರೇವಣ್ಣ ಆಗ್ರಹಿಸಿದರು.

ಕಂಸಾಗರ ಗ್ರಾಮ ಸಮೀಪ ಕ್ರೀಡಾಂಗಣಕ್ಕೆ ಮೀಸಲಿಟ್ಟ ಜಾಗದಲ್ಲಿ ರೇವಣ್ಣ ನೇತೃತ್ವದಲ್ಲಿ ಪ್ರತಿಭಟನೆ

ಕನ್ನಡಪ್ರಭ ವಾರ್ತೆ, ಕಡೂರು

ಉದ್ದೇಶಿತ ಕ್ರೀಡಾಂಗಣಕ್ಕೆ ಮೀಸಲಿಟ್ಟಿದ್ದ 5 ಎಕರೆ ಜಾಗವನ್ನು ಅಕ್ರಮವಾಗಿ ಗ್ರಾಮ ಪಂಚಾಯಿತಿ ಹೆಸರಿಗೆ ಖಾತೆ ವರ್ಗಾಯಿಸಿರುವ ಪಹಣಿ ಯನ್ನು ಅಧಿಕಾರಿಗಳು ಕೂಡಲೇ ರದ್ದುಪಡಿಸಬೇಕು ಎಂದು ಗ್ರಾಪಂ ಮಾಜಿ ಅಧ್ಯಕ್ಷ ಕಂಸಾಗರ ರೇವಣ್ಣ ಆಗ್ರಹಿಸಿದರು.ಗುರುವಾರ ತಾಲೂಕಿನ ಕಂಸಾಗರ ಗ್ರಾಮದ ಸಮೀಪದ ಕ್ರೀಡಾಂಗಣದ ಉದ್ದೇಶಕ್ಕಾಗಿ ಮೀಸಲಿಟ್ಟ ಜಾಗಕ್ಕೆ ಗ್ರಾಮಸ್ಥರೊಂದಿಗೆ ತೆರಳಿ ಸಾಂಕೇತಿಕ ಪ್ರತಿಭಟನೆ ನಡೆಸಿದ ಬಳಿಕ ಮಾತನಾಡಿ, ತಾಲೂಕಿನ ಕಂಸಾಗರ ಗ್ರಾಮದ ಸರ್ವೆ ನಂ.12 ರಲ್ಲಿ ಇದ್ದ ಸರಕಾರಿ ಗೋಮಾಳದ 17.5 ಎಕರೆಯಲ್ಲಿ 5 ಎಕರೆ ಜಮೀನು ಸಾರ್ವಜನಿಕ ಉದ್ದೇಶಿತ ಕ್ರೀಡಾಂಗಣಕ್ಕೆ ಮೀಸಲಿಡಲಾಗಿದೆ. ಆದರೆ ಅದನ್ನು ಸರಸ್ವತಿಪುರ ಗ್ರಾಮ ಪಂಚಾಯಿತಿಗೆ ಅಕ್ರಮವಾಗಿ ವರ್ಗಾಯಿಸಿರುವ ಸದರಿ ಖಾತೆಯನ್ನು ಅಧಿಕಾರಿಗಳು ರದ್ದುಪಡಿಸಬೇಕು ಎಂದರು.

ಕುರಿ, ದನ ಮೇಯಲು ಮತ್ತು ಶ್ರೀ ಆಂಜನೇಯ ಸ್ವಾಮಿ, ಶ್ರೀ ಪ್ಲೇಗಿನಮ್ಮ, ಶ್ರೀ ದೊಡ್ಡಾಲದಮ್ಮ, ಗ್ರಾಮ ದೇವರ ಜಾತ್ರಾ ಮಹೋತ್ಸವಗಳಿಗೆ ಹಿಂದಿನಿಂದಲೂ ಈ ಜಾಗ ಕಾಯ್ದಿರಿಸಿಕೊಂಡು ಬರಲಾಗಿದೆ. ಜೊತೆಗೆ ಜಾನುವಾರುಗಳ ಮೇವಿಗಾಗಿಯೇ ಜಾಗ ಮೀಸಲಿಡಲಾಗಿತ್ತು. ಆದರೆ 5 ಎಕರೆ ಜಮೀನು ಸಾರ್ವಜನಿಕ ಉದ್ದೇಶಿತ ಕ್ರೀಡಾಂಗಣಕ್ಕಾಗಿರುವ ಕಂಸಾಗರ ಗ್ರಾಮದ ಜಾಗವನ್ನು ಗ್ರಾಮಸ್ಥರಿಗೂ ತಿಳಿಸದೆ ಸರಸ್ವತಿಪುರ ಗ್ರಾಪಂಗೆ ಕಾಯ್ದಿರಿಸಿ ಅಕ್ರಮವಾಗಿ ಪಹಣಿ ಮಾಡಿರುವುದು ಗ್ರಾಮಸ್ಥರ ಕೆಂಗಣ್ಣಿಗೆ ಅಧಿಕಾರಿಗಳು ಗುರಿಯಾಗಿದ್ದಾರೆ ಎಂದು ಕಿಡಿಕಾರಿದರು.ಕಂಸಾಗರ ಗ್ರಾಮ ವ್ಯಾಪ್ತಿಯಲ್ಲಿದ್ದ ಸರಕಾರಿ ಗೋಮಾಳದ ಜಾಗವನ್ನು ಅಧಿಕಾರಿಗಳು ಅಕ್ರಮವಾಗಿ ಖಾತೆ ಮಾಡಲು ಮತ್ತು ಮಾಡಿಸಲು ಮುಂದಾದ ಕಾಣದ ಕೈಗಳ ಬಗ್ಗೆ ಹಿರಿಯ ಅಧಿಕಾರಿಗಳು ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಪಂಚಾಯಿತಿ ವ್ಯಾಪ್ತಿಗೆ 3 ಕಿ.ಮೀ. ದೂರದ ಸಾರ್ವಜನಿಕ ಉದ್ದೇಶದ ಕ್ರೀಡಾಂಗಣಕ್ಕೆ ಮೀಸಲಿಟ್ಟ ಜಾಗ ಸರಸ್ವತಿಪುರ ಗ್ರಾಪಂ ಹೆಸರಿನಲ್ಲಿ ಕಾಯ್ದಿರಿಸಿಕೊಂಡ ಪಹಣಿ ರದ್ದುಪಡಿಸಿ ಗ್ರಾಮದ ಗೋಮಾಳದ ಜಾಗ ಯಥಾಸ್ಥಿತಿ ಮುಂದುವರಿಸಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ ಜಾಗದ ಉಳಿವಿ ಗಾಗಿ ಗ್ರಾಮಸ್ಥ ರೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಇದೇ ಸಂದರ್ಭದಲ್ಲಿ ಗ್ರಾಮದ ಮುಖಂಡ ಕೆ.ಎನ್. ಬೊಮ್ಮಣ್ಣ, ಕಂಸಾಗರ ಶೇಖರ್, ಪಟೇಲ್ ರಮೇಶ್, ಕೆ.ಎಚ್. ಲೋಕೇಶ್, ಶಿವಪ್ರಸಾದ್, ಕೆ. ರವಿಕುಮಾರ್, ಕೆ.ಎಸ್.ಚಂದ್ರು, ಮೆಡಿಕಲ್ ತಮ್ಮಯ್ಯ, ಕೆ.ವಿ.ಬಾಲಾಜಿ, ದೇಪುರಪ್ಪ, ಕೆ.ಎಂ. ಮಂಜುನಾಥ್, ಕೆ.ಎಚ್. ರೇವಣ್ಣ, ಡಿ. ಹರೀಶ್ ಮತ್ತಿತರಿದ್ದರು.

30ಕೆಕೆಡಿಯು2.

ಕಡೂರು ತಾಲೂಕಿನ ಕಂಸಾಗರ ಗ್ರಾಮದ ಬಳಿ ಉದ್ದೇಶಿತ ಕ್ರೀಡಾಂಗಣದ 5 ಎಕರೆ ಜಾಗದ ಅಕ್ರಮ ಖಾತೆ ಪಹಣಿಯನ್ನು ಅಧಿಕಾರಿಗಳು ರದ್ದು ಪಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು. ಕಂಸಾಗರ ರೇವಣ್ಣ, ಶೇಖರ್, ಪಟೇಲ್ ರಮೇಶ್, ಲೋಕೇಶ್, ರವಿಕುಮಾರ್, ತಮ್ಮಯ್ಯ, ಶಿವಪ್ರಸಾದ್ ಮತ್ತಿತರಿದ್ದರು.