ಮುಂಡರಗಿ: ಪಟ್ಟಣದ ಪುರಸಭೆ ಪಕ್ಕದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮೂರ್ತಿ ಸ್ಥಾಪನೆಗೆ ಒಪ್ಪಿಗೆ ನೀಡಿ ಅದಕ್ಕೆ ₹15 ಲಕ್ಷ ಅನುದಾನ ನೀಡಿದ್ದ ಪುರಸಭೆ ಮುಖ್ಯಾಧಿಕಾರಿ ಶಂಕರ್ ಹುಲ್ಲಮ್ಮನವರ ಅವರನ್ನು ದಿಢೀರ್ ವರ್ಗಾವಣೆ ಮಾಡಿದ್ದು, ವರ್ಗಾವಣೆ ಆದೇಶ ರದ್ದು ಪಡಿಸುವವರೆಗೂ ಅಂಬೇಡ್ಕರ್ ಮೂರ್ತಿ ಅನಾವರಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಡಾ. ಬಿ.ಆರ್. ಅಂಬೇಡ್ಕರ್ ಅಭಿಮಾನಿ ಬಳಗ ಎಚ್ಚರಿಕೆ ನೀಡಿದೆ.
ಈ ಕುರಿತು ಸೋಮವಾರ ಸಂಜೆ ಎಚ್.ಡಿ. ಪೂಜಾರ ಹಾಗೂ ನಿಂಗರಾಜ ಹಾಲಿನವರ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅಭಿಮಾನಿ ಬಳಗದ ಸದಸ್ಯರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೇವಲ ಮೂರ್ತಿ ಪ್ರತಿಷ್ಠಾಪನೆಗೆ ಮಾತ್ರವಲ್ಲದೇ ಕಳೆದ ಎರಡು ವರ್ಷಗಳಿಂದ ಪಟ್ಟಣದಲ್ಲಿ ಸ್ವಚ್ಛತೆ, ಕುಡಿಯುವ ನೀರು, ಬೀದಿದೀಪ ನಿರ್ವಹಣೆ, ಕಸ ವಿಲೇವಾರಿ ಸೇರಿದಂತೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಂಡಿದ್ದರು.ಕಳೆದ 2 ವರ್ಷಗಳಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದ ಹುಲ್ಲಮ್ಮನವರ ಅವರನ್ನು ಯಾವುದೇ ಕಾರಣಗಳಿಲ್ಲದೇ ವರ್ಗಾವಣೆ ಮಾಡಿರುವುದರ ಹಿಂದಿನ ಮರ್ಮ ತಿಳಿಯುತ್ತಿಲ್ಲ. ಇದೀಗ ಪುರಸಭೆ ಆವರಣದಲ್ಲಿನ ಅಂಬೇಡ್ಕರ್ ಮೂರ್ತಿ ಕಾಮಗಾರಿ ಪೂರ್ಣಗೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಏ. 15ರಂದು ಮೂರ್ತಿ ಅನಾವರಣ ಕಾರ್ಯಕ್ರಮ ನಿಗದಿಪಡಿಸಿದ್ದರು. ಅದಕ್ಕಾಗಿ ಡಾ. ಬಿ.ಆರ್. ಅಂಬೇಡ್ಕರ್ ಅಭಿಮಾನಿ ಬಳಗ ತಯಾರಿ ನಡೆಸಿತ್ತು ಎಂದರು.
ಮುಖ್ಯಾಧಿಕಾರಿ ವರ್ಗಾವಣೆ ಹಿನ್ನೆಲೆ ಏ. 14ರಂದು ತಾಲೂಕು ಆಡಳಿತದಿಂದ ಅಂಬೇಡ್ಕರ್ ಜಯಂತಿ ಮಾತ್ರ ನಡೆಯುತ್ತಿದ್ದು, ಏ. 15ರಂದು ನಿಗದಿಪಡಿಸಿದ ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಮುಖ್ಯಾಧಿಕಾರಿ ಹುಲ್ಲಮ್ಮನವರ ವರ್ಗಾವಣೆ ಆದೇಶ ರದ್ದು ಮಾಡುವ ವರೆಗೂ ಅವಕಾಶ ನೀಡುವುದಿಲ್ಲ. ಒಂದು ವೇಳೆ ಪ್ರತಿಷ್ಠಾಪನೆ ವಿಳಂಬವಾಗಿ ಮೂರ್ತಿಗೆ ಏನಾದರೂ ತೊಂದರೆಯಾದಲ್ಲಿ ಅಧಿಕಾರಿಗಳೇ ಹೊಣೆ ಎಂದು ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅಭಿಮಾನಿ ಬಳಗದ ಪ್ರೊ. ಸತೀಶ ಪಾಸಿ, ದಂಡೆಪ್ಪ ಹರಿಜನ, ಸಹದೇವಪ್ಪ ರಾಮೇನಹಳ್ಳಿ, ನಿಂಗರಾಜ ಮೇಗಳಮನಿ, ಮಂಜುನಾಥ ಹೈತಾಪೂರ, ಸಂತೋಷ ಹಡಗಲಿ, ಅಭಿಷೇಕ ಹಾಲಿನವರ, ರಾಘವೇಂದ್ರ ತಂಬೂರಿ, ರಮೇಶ ಹಾಲಿನವರ, ಮನೋಜ ವಡ್ಡರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.