ಶಿವಮೊಗ್ಗ: ರಾಜ ಕಾಲುವೆ ಅತಿಕ್ರಮಣ ತೆರವಿಗೆ ಆಗ್ರಹಿಸಿ ಕರ್ನಾಟಕ ರಕ್ಷಣಾವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾ ಘಟಕದ ವತಿಯಿಂದ ಶನಿವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ನಗರದ ಸವಳಂಗ ರಸ್ತೆಯ ಅಕ್ಕಮಹಾದೇವಿ ವೃತ್ತದ ಬಳಿ ಇರುವ ರಾಜ ಕಾಲುವೆ ಜಾಗವನ್ನು ಅತಿಕ್ರಮಿಸಿಕೊಂಡು ನರ್ಸಿಂಗ್ ಹೋಂ ಕಟ್ಟಡ ಕಟ್ಟಿದ್ದಾರೆ. ಈ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ, ಹಾಗೂ ಡಿಎಚ್‌ಓ ಇಲಾಖೆಯಿಂದ ನಿಯಮಗಳನ್ನು ಉಲ್ಲಂಘಿಸಿ ಪರವಾನಿಗೆ ನೀಡಲಾಗಿದೆ. ಇದು ಮಳೆ ನೀರಿನ ಒಳ ಹರಿವಿಗೂ ಅಡ್ಡಿಯಾಗಿದೆ. ಕಸ ಹಾಗೂ ಇತರೆ ತ್ಯಾಜ್ಯಗಳು ರಾಜ ಕಾಲುವೆಯಿಂದ ಆಚೆ ಬರುತ್ತಿದೆ. ಅಲ್ಲದೆ ಸಾಮಾನ್ಯ ರೋಗಿಗಳಿಗೂ ಕೂಡ ತುರ್ತು ಸಂದರ್ಭದಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲು ಕೂಡ ಸುರಕ್ಷಿತವಾಗಿಲ್ಲ. ಆದ್ದರಿಂದ ಈ ಕಟ್ಟಡವನ್ನು ಕೂಡಲೇ ತೆರವುಗೊಳಿಸಬೇಕು ಮತ್ತು ನರ್ಸಿಂಗ್ ಹೋಂ ತೆರೆಯಲು ಕೆಪಿಎಂಇ ನೋಂದಣಿ ಪ್ರಮಾಣವನ್ನು ರದ್ದುಗೊಳಿಸಬೇಕು. ರೋಗಿಗಳ ಹಿತದೃಷ್ಠಿಯಿಂದಾದರೂ ಈ ನಸಿಂಗ್ ಹೋಂ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.

ಮೆಸ್ಕಾಂ ಇಲಾಖೆ ಕೂಡ ವಿದ್ಯುತ್ ಸಂಪರ್ಕ ನೀಡಿರುವುದು ಸರಿಯಿಲ್ಲ. ಕೂಡಲೇ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಬೇಕು. ಮಹಾನಗರ ಪಾಲಿಕೆ ಆಯುಕ್ತರು ಜಿಲ್ಲಾ ಆರೋಗ್ಯಾಧಿಕಾರಿಗಳು, ಮೆಸ್ಕಾಂ ಅಧಿಕಾರಿಗಳು ಕೂಡಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಇಲ್ಲದಿದ್ದರೆ ಲೋಕಾಯುಕ್ತರ ತನಿಖೆಗಾಗಿ ದೂರು ನೀಡಲಾಗುವುದು ಎಂದು ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎಚ್‌.ಎಸ್‌.ಕಿರಣ್‌ಕುಮಾರ್, ಸಂತೋಷ್, ಪ್ರವೀಣ್‌ಕುಮಾರ್, ಕೃಷ್ಣಪ್ಪ, ನೂರುಲ್ಲಾ, ಸಾದಿಕ್, ರವಿ, ಸತೀಶ, ಮುಜೀಬುಲ್ಲಾ, ರಾಜಶೇಖರ್, ಕವಿತಾ, ಅನಿತಾ, ಪರಮೇಶ್, ಕೇಶವ ಸೇರಿದಂತೆ ಹಲವರಿದ್ದರು.