ಸಾರಾಂಶ
ಇಲ್ಲಿನ ಜಮೀನುಗಳ ಸರ್ವೆ ಸೆಟ್ಲ್‌ಮೆಂಟ್ ಮಾಡಿರದ ಕಾರಣ, ಈ ಕಾರ್ಯ ಸಾಧ್ಯವಾಗಿಲ್ಲ. ಆದ್ದರಿಂದ ತಾಲೂಕಿನಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆಯವರು ಜಂಟಿ ಸರ್ವೆ ಮಾಡಿ, ಅರಣ್ಯ ಜಮೀನುಗಳಲ್ಲಿ ತಲೆತಲಾಂತರದಿಂದ ಸಾಗುವಳಿ ಮಾಡುತ್ತಿರುವ ರೈತರನ್ನು ಗುರುತಿಸಬೇಕು.
ಸಂಡೂರು: ತಾಲೂಕಿನಲ್ಲಿ ಕಂದಾಯ ಹಾಗೂ ಅರಣ್ಯ ಇಲಾಖೆಗಳು ಜಂಟಿ ಸರ್ವೇ ಮಾಡಬೇಕು. ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಸಲ್ಲಿಸಲಾದ ಅರ್ಜಿಗಳನ್ನು ಪುನರ್ ಪರಿಶೀಲಿಸಿ ಅರಣ್ಯ ಜಮೀನುಗಳಲ್ಲಿ ಹಲವು ದಶಕಗಳಿಂದ ಉಳುಮೆ ಮಾಡುತ್ತಿರುವ ರೈತರಿಗೆ ಪಟ್ಟಾ ನೀಡುವಂತೆ ಒತ್ತಾಯಿಸಿ ತಾಲೂಕಿನ ವಿವಿಧ ಗ್ರಾಮಗಳ ರೈತರು ಗುರುವಾರ ಅಖಿಲ ಭಾರತ ಕಿಸಾನ್ ಸಭಾ ನೇತೃತ್ವದಲ್ಲಿ ಪಟ್ಟಣದ ತಾಲೂಕು ಕಚೇರಿ ಮುಂದೆ ಧರಣಿ ನಡೆಸಿದರು.
ಕಿಸಾನ್ ಸಭಾ ತಾಲೂಕು ಘಟಕದ ಅಧ್ಯಕ್ಷ ಗಿರಿರಾವ್ ತಹಸೀಲ್ದಾರ್ ಜಿ. ಅನಿಲ್‌ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ, ತಾಲೂಕಿನ ಸಂಡೂರು, ಲಕ್ಷ್ಮೀಪುರ, ೧೮ ಹುಲಿಕುಂಟೆ, ಧರ್ಮಾಪುರ, ವಿ. ನಾಗಲಾಪುರ, ಅಂಕಮ್ಮನಹಾಳ್ ಮುಂತಾದ ಗ್ರಾಮಗಳಲ್ಲಿನ ಅರಣ್ಯ ಜಮೀನುಗಳಲ್ಲಿ ಹಲವು ದಶಕಗಳಿಂದ ರೈತರು ಉಳುಮೆ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ೧೯೭೮ಕ್ಕಿಂತ ಮುಂಂಚಿನಿಂದಲೂ ಅರಣ್ಯ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ರೈತರ ಜಮೀನುಗಳನ್ನು ಸಕ್ರಮ ಮಾಡಲು ಸರ್ಕಾರ ಆದೇಶ ನೀಡಿದೆ ಎಂದರು. ಇಲ್ಲಿನ ಜಮೀನುಗಳ ಸರ್ವೆ ಸೆಟ್ಲ್‌ಮೆಂಟ್ ಮಾಡಿರದ ಕಾರಣ, ಈ ಕಾರ್ಯ ಸಾಧ್ಯವಾಗಿಲ್ಲ. ಆದ್ದರಿಂದ ತಾಲೂಕಿನಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆಯವರು ಜಂಟಿ ಸರ್ವೆ ಮಾಡಿ, ಅರಣ್ಯ ಜಮೀನುಗಳಲ್ಲಿ ತಲೆತಲಾಂತರದಿಂದ ಸಾಗುವಳಿ ಮಾಡುತ್ತಿರುವ ರೈತರನ್ನು ಗುರುತಿಸಬೇಕು ಹಾಗೂ ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ಪುನರ್ ಪರಿಶೀಲಿಸಿ, ರೈತರಿಗೆ ಪಟ್ಟಾ ನೀಡಬೇಕು ಎಂದು ಒತ್ತಾಯಿಸಿದರು. ಕಿಸಾನ್ ಸಭಾದ ರಾಜ್ಯ ಸಮಿತಿ ಸದಸ್ಯ ಕೆ. ನಿಂಗಪ್ಪ, ಜಿಲ್ಲಾ ಸಮಿತಿ ಮುಖಂಡ ಅಡಿವೆಪ್ಪ, ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ಆರ್. ಸ್ವಾಮಿ, ಉಪಾಧ್ಯಕ್ಷ ಅಬ್ದುಲ್ ವಹಾಬ್, ಮುಖಂಡರಾದ ನರಸಪ್ಪ, ವಿಜಯಕುಮಾರ್, ಮಂಜುನಾಥ, ಅಂಜಿನಿ, ಸಿದ್ದಪ್ಪ, ಬುಡ್ಡೇಪೀರ, ಗುರುರಾಜ, ಶಿವಾನಂದ, ಮಾರೇಶ, ಸಾರಪ್ಪ, ಭರಮಪ್ಪ ಹಾಗೂ ವಿವಿಧ ಗ್ರಾಮಗಳ ರೈತರು ಉಪಸ್ಥಿತರಿದ್ದರು.