ವಕ್ಫ್‌ ಅಧಿಕಾರ ಮೊಟಕುಗೊಳಿಸಲು ಆಗ್ರಹ

| Published : Nov 14 2024, 12:53 AM IST

ಸಾರಾಂಶ

ದೇವಸ್ಥಾನ ಮತ್ತು ಮಠಮಾನ್ಯಗಳ ಮೇಲೆ ವಕ್ಫ್‌ ನೀಡಿರುವ ನೋಟಿಸ್‌ ಅನ್ನು ಕೂಡಲೇ ಹಿಂಪಡೆದು, ರೈತರ ಪಹಣಿಗಳಲ್ಲಿ ನಮೂದಾಗಿರುವ ವಕ್ಫ್ ಆಸ್ತಿ ಎಂಬುದನ್ನು ರದ್ದುಗೊಳಿಸಬೇಕು. ವಕ್ಫ್‌ಗೆ ನೀಡಿರುವ ಈ ಅಧಿಕಾರದ ಆದೇಶವನ್ನೇ ಹಿಂಪಡೆಯಬೇಕೆಂದು ಆಗ್ರಹಿಸಿ ಕನ್ನಡಪರ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಬುಧವಾರ ಡಿಸಿ ಕಚೇರಿ ಮುಂದೆ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ದೇವಸ್ಥಾನ ಮತ್ತು ಮಠಮಾನ್ಯಗಳ ಮೇಲೆ ವಕ್ಫ್‌ ನೀಡಿರುವ ನೋಟಿಸ್‌ ಅನ್ನು ಕೂಡಲೇ ಹಿಂಪಡೆದು, ರೈತರ ಪಹಣಿಗಳಲ್ಲಿ ನಮೂದಾಗಿರುವ ವಕ್ಫ್ ಆಸ್ತಿ ಎಂಬುದನ್ನು ರದ್ದುಗೊಳಿಸಬೇಕು. ವಕ್ಫ್‌ಗೆ ನೀಡಿರುವ ಈ ಅಧಿಕಾರದ ಆದೇಶವನ್ನೇ ಹಿಂಪಡೆಯಬೇಕೆಂದು ಆಗ್ರಹಿಸಿ ಕನ್ನಡಪರ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಬುಧವಾರ ಡಿಸಿ ಕಚೇರಿ ಮುಂದೆ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಇದೇ ವೇಳೆ ಕನ್ನಡಪರ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಿ. ಶಂಕರಗೌಡ ಮತ್ತು ಹರೀಶ್ ಗೌಡ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಸಚಿವರಾದ ಜಮೀರ್‌ ಅಹಮ್ಮದ್ ನೇರವಾಗಿ ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಇವರ ಆದೇಶದ ಮೇರೆಗೆ ಜಮೀರ್‌ ಅಹಮ್ಮದ್‌ರವರ ಮುಂದಾಳತ್ವದಲ್ಲಿ ಸರ್ಕಾರದ ಕಂದಾಯ ಅಧಿಕಾರಿಗಳನ್ನು ರಾತ್ರಿಯಿಡೀ ಉಪಯೋಗಿಸಿಕೊಂಡು ಇದ್ದಕ್ಕಿಂದಂತೆ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ರೈತರ ಜಮೀನುಗಳನ್ನು ಅತಿಕ್ರಮವಾಗಿ ಪಹಣಿಗಳಲ್ಲಿ ವಕ್ಫ್ ಆಸ್ತಿಯೆಂದು ನಮೂದಿಸಿ ಬಿಡುಗಡೆ ಮಾಡಿ ಮತ್ತು ರೈತರ ಮನೆಗಳಿಗೆ ನೋಟೀಸನ್ನು ನೀಡಿರುವುದು ನಿಜಕ್ಕೂ ಎಲ್ಲಾ ರೈತ ಬಾಂಧವರಿಗೂ ಮತ್ತು ಸಾರ್ವಜನಿಕರಿಗೂ ಆಶ್ಚರ್ಯವನ್ನುಂಟು ಮಾಡಿರುತ್ತದೆ ಎಂದರು.

ಇದಲ್ಲದೆ ರೈತರ ಜಮೀನುಗಳ ಆಸ್ತಿಗಳಿಗೆ ಕಣ್ಣು ಹಾಕಿದ ಈ ವಕ್ಫ್ ಬೋರ್ಡ್ ಇರುವ ದೇವಸ್ಥಾನ ಇದಲ್ಲದೆ ಮಠಮಾನ್ಯಗಳಿಗೂ ಕೂಡ ಲಗ್ಗೆ ಇಟ್ಟಿರುವುದು ಇದರಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ತುಷ್ಟೀಕರಣವನ್ನು ಮಾಡಲು ಹೊರಟಿದೆ. ಅಂದರೆ ಹಿಂದೂಗಳನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆದಿದ್ದು, ಇದರಿಂದ ಸಾವಿರಾರು ವರ್ಷಗಳ ಇತಿಹಾಸವಿರುವ ದೇವಸ್ಥಾನ, ಮಠ ಮಾನ್ಯಗಳು, ಹಾಗೂ ಹಿರಿಯರಿಂದ ಬಂದ ದಾನ, ವಿಭಾಗ, ಪಿತ್ರಾರ್ಜಿತ ಸ್ವರೂಪ ಅಥವಾ ಹಿಂದಿನ ಸರ್ಕಾರಗಳಿಂದ ಮಂಜೂರಾಗಿರುವಂತಹ ರೈತರ ಜಮೀನುಗಳು ಹಾಗೂ ಸ್ಮಶಾನಗಳೂ ಕೂಡ ಸೇರಿದ್ದಾಗಿರುವ ಈ ಆಸ್ತಿಗಳಿಗೆ ವಕ್ಫ್ ಬೋರ್ಡ್‌ ಇವರು ಕಣ್ಣು ಹಾಕಿರುವುದು ನಿಜಕ್ಕೂ ಹಾಸ್ಯಾಸ್ಪದವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಎಂಬುದು ಯಾವ ಕಾಲದಿಂದ ಸೃಷ್ಟಿಯಾಗಿದೆ? ಇದಕ್ಕೆ ಪುರಾವೆಗಳಿವೆಯೇ? ಏಕೆಂದರೆ ಒಂದಾನೊಂದು ಕಾಲದಲ್ಲಿ ಅಂದರೆ ಬ್ರಿಟಿಷ್‌ನವರಿಗಿಂತ ಮುಂಚಿತವಾಗಿ ದೇಶದಲ್ಲಿ ಮೊಗಲ್ ಆಳ್ವಿಕೆ ಇತ್ತು ಎಂಬುದನ್ನು ಚರಿತ್ರೆಯಲ್ಲಿ ಓದಿರುತ್ತೇವೆ, ಕೇಳಿರುತ್ತೇವೆ. ಆದರೆ ಇದು ಮುಗಿದು ಹೋಗಿರುವ ಅಧ್ಯಾಯವಾಗಿದ್ದು, ಈಗ ಈ ವಕ್ಫ್ ಬೋರ್ಡಿಗೆ ಯಾವುದೇ ತರಹವಾದ ಆಸ್ತಿಗಳ ಮೇಲೆ ಅಧಿಕಾರವಿರುವುದಿಲ್ಲ. ಹೀಗಿದ್ದೂ ಕೂಡ ಅದರಲ್ಲೂ ಕರ್ನಾಟಕ ರಾಜ್ಯವು ಕಾಂಗ್ರೆಸ್ ಸರ್ಕಾರದಿಂದ ಕೂಡಿರುವುದಾಗಿರುವುದರಿಂದ ಇಲ್ಲ ತುಘಲಕ್ ಆಳ್ವಿಕೆ ನಡೆಯುತ್ತಿದೆ. ಏಕೆಂದರೆ ಇದರಲ್ಲಿ ಹೆಚ್ಚಿಗೆ ಹಿಂದೂಗಳ ಒಗ್ಗಟ್ಟು ಇಲ್ಲದೆ ಇರುವುದು ಕೂಡ ರಾಜ್ಯ ಸರ್ಕಾರದಲ್ಲಿರುವ ಕೆಲವು ಮಂತ್ರಿಗಳಿಗೆ ಹಾಸಿಕೊಟ್ಟಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಕೂಡಲೇ ಕರ್ನಾಟಕ ರಾಜ್ಯ ಸರ್ಕಾರವು ಹಿಂದೂಗಳಿಗೆ ನ್ಯಾಯ ಒದಗಿಸಿಕೊಡುವಲ್ಲಿ ಹಾಗೂ ಪುರಾತನ ಕಾಲದಿಂದಲೂ ಇರುವ ದೇವಾಲಯಗಳು, ಮಠಮಾನ್ಯಗಳು ಹಿರಿಯರಿಂದ ಬಂದ ದಾನ, ವಿಭಾಗ, ಪಿತ್ರಾರ್ಜಿತ ಸ್ವರೂಪ ಅಥವಾ ಹಿಂದಿನ ಸರ್ಕಾರಗಳಿಂದ ಮಂಜೂರಾಗಿರುವಂತಹ ರೈತರ ಜಮೀನುಗಳು ಹಾಗೂ ಸ್ಮಶಾನಗಳು ಇವುಗಳ ಮೇಲೆ ಕಣ್ಣುಹಾಕಿರುವ ವಕ್ಫ್‌ ಬೋರ್ಡ್ ಮೇಲೆ ಹಾಗೂ ಇದರ ಹಿಂದಿರುವ ವ್ಯಕ್ತಿಗಳ ಮೇಲೆ ಸೂಕ್ತವಾದ ಕಾನೂನು ರೀತ್ಯಾ ಕ್ರಮವನ್ನು ಕೈಗೊಂಡು ಈ ಕೂಡಲೇ ಪಹಣಿಯಲ್ಲಿ ಮತ್ತು ವಕ್ಫ್‌ ಬೋರ್ಡ್‌ನವರು ನೋಟಿಸ್ ನೀಡುತ್ತಿರುವ ದೇವಸ್ಥಾನ, ಮಠಮಾನ್ಯಗಳ ಮೇಲೆ ಕೂಡಲೇ ನೀಡಿರುವಂತಹ ನೋಟಿಸನ್ನು ಹಿಂಪಡೆದು, ರೈತರ ಪಹಣಿಗಳಲ್ಲಿ ನಮೂದಾಗಿರುವ ವಕ್ಫ್ ಆಸ್ತಿ ಎಂಬುದನ್ನು ರದ್ದುಗೊಳಿಸಿ, ಈ ಆದೇಶವನ್ನೇ ಹಿಂಪಡೆಯಬೇಕೆಂದು ಈ ಮೂಲಕ ಹಾಸನ ಜಿಲ್ಲೆಯಾದ್ಯಂತ ಇರುವ ೨೫ ಸಂಘನೆಯ ಅಧ್ಯಕ್ಷರು ಹಾಗೂ ಇದರ ಮುಖ್ಯಸ್ಥರಾದ ತಮ್ಮಲ್ಲಿ ಈ ಮೂಲಕ ಸರ್ಕಾರದ ಗಮನಕ್ಕೆ ತರಬೇಕೆಂಬುದಾಗಿ ಈ ಮೂಲಕ ಕೋರುತ್ತೇವೆ ಎಂದರು. ಒಂದು ವೇಳೆ ಇದರ ಬಗ್ಗೆ ಸರ್ಕಾರವೂ ಗಮನಕ್ಕೆ ತೆಗೆದುಕೊಂಡು ಯಾವುದೇ ಕ್ರಮವನ್ನು ಕೈಗೊಳ್ಳದೇ ಇದ್ದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಇದರ ಬಗ್ಗೆ ತೀವ್ರತರವಾದ ಹಾಗೂ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂಬುದನ್ನು ಈ ಮೂಲಕ ಎಚ್ಚರಿಸುತ್ತೇವೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಕನ್ನಡಪರ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಖಜಾಂಚಿ ರಾಘವೇಂದ್ರ, ಪುಟ್ಟಸ್ವಾಮಿಗೌಡ, ಎಚ್.ಆರ್‌. ಪುನೀತ್, ವಿಜಯಕುಮಾರ್‌, ಜಯಶಂಕರ್, ಜಾನ್, ಮಂಜೇಗೌಡ, ಪಿ.ಜಿ. ರಾಮಸ್ವಾಮಿ, ರೋಹಿತ್ ಗೌಡ, ಬಿ.ಪಿ. ಶ್ರಿಧರ್, ಪವನ್, ಧನುಶ್, ಗಣೇಶ್‌ ದಯಾ, ನರಸಿಂಹ ಇತರರು ಉಪಸ್ಥಿತರಿದ್ದರು.