ಕಾಂಗ್ರೆಸ್ ಸರ್ಕಾರ ವಜಾಗೊಳಿಸಿ ರಾಜ್ಯಪಾಲರ ಆಳ್ವಿಕೆ ಹೇರಲು ಆಗ್ರಹ

| Published : Apr 06 2025, 01:48 AM IST

ಕಾಂಗ್ರೆಸ್ ಸರ್ಕಾರ ವಜಾಗೊಳಿಸಿ ರಾಜ್ಯಪಾಲರ ಆಳ್ವಿಕೆ ಹೇರಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸಿ ರಾಜ್ಯಪಾಲರ ಆಳ್ವಿಕೆ ಹೇರುವಂತೆ ಒತ್ತಾಯಿಸಿ ಜಿಲ್ಲಾ ಬಿಜೆಪಿ ವತಿಯಿಂದ ಶನಿವಾರ ಅಪರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಗದಗ: ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸಿ ರಾಜ್ಯಪಾಲರ ಆಳ್ವಿಕೆ ಹೇರುವಂತೆ ಒತ್ತಾಯಿಸಿ ಜಿಲ್ಲಾ ಬಿಜೆಪಿ ವತಿಯಿಂದ ಶನಿವಾರ ಅಪರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆಯ ಸರ್ಕಾರವಾಗಿದೆ. ಬಸ್ ದರ, ಮೆಟ್ರೋ ದರ, ಸ್ಟಾಂಪ್ ಡ್ಯೂಟಿ, ನೋಂದಣಿ ಶುಲ್ಕ, ಜನನ ಪ್ರಮಾಣ ಪತ್ರ ಏರಿಕೆ, ಪೆಟ್ರೋಲ್, ಡೀಸೆಲ್‌ ದರ, ಅಲ್ಕೋಹಾಲ್, ವಿದ್ಯುತ್ ದರ ಏರಿಕೆ ಮಾಡಿ ಈಗ ಹಾಲಿನ ದರವನ್ನು ಕೂಡಾ ಪ್ರತಿ ಲೀ 4 ರು.ಹೆಚ್ಚು ಮಾಡಿ ಜನರ ಜೇಬಿಗೆ ಕತ್ತರಿ ಹಾಕಿದೆ. ರಾಜ್ಯದಲ್ಲಿ 22 ತಿಂಗಳ ಹಿಂದೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಅಗತ್ಯ ಸೇವೆಗಳ ದರ ಹೆಚ್ಚಳದ ದಾರಿ ಹಿಡಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಏ.1ರಿಂದ ಜಾರಿಯಾಗುವಂತೆ ರಾಜ್ಯ ಸರ್ಕಾರ ಈಗಾಗಲೇ ವಿದ್ಯುತ್, ಹಾಲು ಬಳಿಕ ಈಗ ರಾತ್ರೋ ರಾತ್ರಿ ಪ್ರತಿ ಲೀ ಡೀಸೆಲ್‌ಗೆ 2 ರು. ಹೆಚ್ಚಿಗೆ ಮಾಡಿ ಜನತೆಗೆ ಮತ್ತೊಂದು ಹೊರೆಯನ್ನು ಹೊರಿಸಿದೆ ಎಂದರು.ಏರುಗತಿಯಲ್ಲಿ ಸಾಗಿರುವ ತೆರಿಗೆ ಹೇರಿಕೆಯ ಭಾಗ ಇದೀಗ ಡೀಸೆಲ್‌ ಮಾರಾಟದ ಮೇಲೂ ಬಿದ್ದಿದ್ದು 18.44% ಇದ್ದ ಮಾರಾಟ ತೆರಿಗೆಯನ್ನು ಇದೀಗ 21.17% ಕ್ಕೆ ಏರಿಸಿದೆ. ಇದರಿಂದ ಡೀಸೆಲ್‌ ದರ ಸರಾಸರಿ 2 ರು. ಹೆಚ್ಚಳವಾಗಿದೆ. ಈಗಾಗಲೇ ಬೆಲೆ ಏರಿಕೆಯ ಸರಣಿಯಿಂದ ಜನರು ಕಂಗಾಲಾಗಿದ್ದು ಒಂದರ ಹಿಂದೆ ಮತ್ತೊಂದರಂತೆ ಅಗತ್ಯ ವಸ್ತುಗಳು ದುಬಾರಿಯಾಗಲಾರಂಭಿಸಿವೆ. ಇದರಿಂದ ಜನರು ಬದುಕು ದುಸ್ತರವಾಗುತ್ತಿದೆ. ಈಗ ಕೆಲವು ದಿನಗಳ ಹಿಂದೆ 15% ರಷ್ಟು ಬಸ್ ದರವನ್ನು ಹೆಚ್ಚಿಗೆ ಮಾಡಿತ್ತು. ಈಗಾಗಲೇ ಸಾರಿಗೆ ನಿಗಮ ಸಾಕಷ್ಟು ನಷ್ಟದಲ್ಲಿದ್ದು, ಈ ಮಧ್ಯೆ ಡೀಸೆಲ್‌ ದರ ಏರಿಕೆಯಿಂದ ಸಾರಿಗೆ ನಿಗಮಗಳ ಶಕ್ತಿ ಇನ್ನಷ್ಟು ಕುಂದುವ ಭಯ ಕಾಡಲಾರಂಭಿಸಿದೆ. ಹಿಂದೆ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಿದ್ದಾಗ ಡೀಸೆಲ್‌ ಹಾಗೂ ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು ಬಹಳಷ್ಟು ಕಡಿಮೆ ಮಾಡಿದ್ದರು. ಆದರೆ ಈಗಿನ ಸರ್ಕಾರ ಪ್ರತಿ ದಿವಸವು ಕೂಡಾ ಒಂದೊಂದು ವಸ್ತುವಿನ ಬೆಲೆಯನ್ನು ಏರಿಸುತ್ತಾ ಹೋಗಿ ಸಾಮಾನ್ಯ ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದು, ಇದರಿಂದ ಜನ ರಾಜ್ಯ ಸರ್ಕಾರದ ಬಗ್ಗೆ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂದರು.

ಈಗ ಏರಿಸಿರುವ ವಿದ್ಯುತ್, ಹಾಲು ಹಾಗೂ ಡೀಸೆಲ್‌ ಬೆಲೆಯನ್ನು ಕೂಡಲೇ ಇಳಿಸಬೇಕು ಹಾಗೂ ರಾಜ್ಯದ ಜನರಿಗೆ ಹೊರೆಯಾಗಿರುವ ಈ ಸರ್ಕಾರವನ್ನು ಕೂಡಲೇ ವಜಾಗೊಳಿಸಿ ರಾಜ್ಯಪಾಲರ ಆಳ್ವಿಕೆ ಹೇರಬೇಕೆಂದು ಒತ್ತಾಯಿಸಿದರು. ಈ ವೇಳೆ ಬಿಜೆಪಿ ಮುಖಂಡರಾದ ಎಂ.ಎಂ. ಹಿರೇಮಠ, ಸಿದ್ದಣ್ಣ ಪಲ್ಲೇದ, ಸುರೇಶ ಮರಳಪ್ಪನವರ, ಬೂದಪ್ಪ ಹಳ್ಳಿ, ಅಶೋಕ ಕರೂರ, ಅನಿಲ ಅಬ್ಬಿಗೇರಿ, ಕೆ.ಪಿ. ಕೋಟಿಗೌಡ್ರ, ಸಂತೋಷ ಅಕ್ಕಿ, ಅಮರನಾಥ ಗಡಗಿ, ಮಾಂತೇಶ ಬಾತಾಖಾನಿ, ಮುತ್ತು ಮುಶಿಗೇರಿ, ವಿಜಯಲಕ್ಷ್ಮೀ ಮಾನ್ವಿ, ಪದ್ಮನಿ ಮುತ್ತಲದಿನ್ನಿ, ರವಿ ಮಾನ್ವಿ, ಅಶೋಕ ಕುಡತಿನಿ, ಅಮರನಾಥ ಬೆಟಗೇರಿ, ಮುತ್ತು ಕಡಗದ, ಜೈನರ್, ಡಿ.ಬಿ. ಕರೀಗೌಡ್ರ, ಸುಜಯ ಗಲಗಲಿ, ಮಂಜುನಾಥ ಶಾಂತಗೇರಿ, ಪಂಚಾಕ್ಷರಿ ಅಂಗಡಿ, ಅರವಿಂದ ಅಣ್ಣಿಗೇರಿ, ಮೋಹನ ಕೋರಿ, ಬಸವರಾಜ ನರೇಗಲ್, ಬಳ್ಳಾರಿ, ವಿನೋದ ಹಂಸನೂರ ಹಾಗೂ ಪ್ರಮುಖರು ಇದ್ದರು.

Related Stories
Top Stories