ಸಾರಾಂಶ
ರಾಣಿಬೆನ್ನೂರು ತಾಲೂಕಿನ ಕುಪ್ಪೇಲೂರ ಗ್ರಾಮದ ಹಳೆಯ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸುವಂತೆ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬುಧವಾರ ರಾಣಿಬೆನ್ನೂರಿನಲ್ಲಿ ತಾಲೂಕು ಆರೋಗ್ಯಾಧಿಕಾರಿಗಳಿಗೆ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು.
ರಾಣಿಬೆನ್ನೂರು: ತಾಲೂಕಿನ ಕುಪ್ಪೇಲೂರ ಗ್ರಾಮದ ಹಳೆಯ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸುವಂತೆ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬುಧವಾರ ನಗರದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳಿಗೆ ಕಚೇರಿ ಸಿಬ್ಬಂದಿ ಮೂಲಕ ಮನವಿ ಸಲ್ಲಿಸಿದರು.
ಈ ಸಮಯದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ ಮಾತನಾಡಿ, ಗ್ರಾಮದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಸ್ಪತ್ರೆಯನ್ನು ಸ್ಥಳಾಂತರ ಮಾಡಲಾಗಿದೆ. ಆದರೆ ಹಳೆಯ ಕಟ್ಟದಲ್ಲಿರುವ ಸಲಕರಣೆಗಳು, ದಾಖಲಾತಿಗಳು ಹಾಳಾಗಿ ಹೋಗಿವೆ. ಸಾರ್ವಜನಿಕರು ಹೊಸ ಆಸ್ಪತ್ರೆಗೆ ಬಂದು ಯಾವುದಾದರೂ ಹಳೆಯ ದಾಖಲೆಗಳನ್ನು ಕೇಳಿದರೆ ಹಳೆ ಕಟ್ಟಡಕ್ಕೆ ಹೋಗಿ ನೀವೇ ಹುಡುಕಿಕೊಳ್ಳಿ ಎನ್ನುತ್ತಿದ್ದಾರೆ. ಸರ್ಕಾರದಲ್ಲಿ ಇರುವಂತಹ ಅಧಿಕಾರಿ ವರ್ಗದವರು ನಮ್ಮ ತೆರಿಗೆ ಹಣದಲ್ಲಿ ಕಟ್ಟಿದಂತಹ ಆಸ್ಪತ್ರೆಗಳು ಮತ್ತು ದಾಖಲಾತಿಗಳು ಸರಿಯಾಗಿ ಇಟ್ಟುಕೊಳ್ಳದಿರುವುದು ಸರಿಯಲ್ಲ. ಈಗಲಾದರೂ ಅಲ್ಲಿಯ ಸಿಬ್ಬಂದಿ ವರ್ಗದ ಮೇಲೆ ಸೂಕ್ತ ತನಿಖೆ ನಡೆಸಿ ನಿರ್ಲಕ್ಷ್ಯ ತೋರಿಸುತ್ತಿರುವ ಅಧಿಕಾರಿಗಳ ಮೇಲೆ ಕೇಸು ದಾಖಲು ಮಾಡಿ ಅವರನ್ನು ಬೇರೆ ಕಡೆ ವರ್ಗಾಯಿಸಬೇಕು. ತಾವು ಒಂದು ತಿಂಗಳೊಳಗೆ ಕ್ರಮ ಕೈಗೊಳ್ಳದಿದ್ದರೆ ಕುಪ್ಪೇಲೂರು ಗ್ರಾಮದಿಂದ ರಾಣಿಬೆನ್ನೂರು ಇಲಾಖೆಯ ಅಧಿಕಾರಿಗಳ ಮುಖ್ಯ ಕಚೇರಿ ವರೆಗೆ ಬೈಕ್ ರ‍್ಯಾಲಿ ಕೈಗೊಂಡು ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ಶಿವಕುಮಾರ ಜಾಧವ್, ಸಿದ್ಧಾರೂಢ ಗುರುಂ, ಗೋಪಿ ಕುಂದಾಪುರ, ಪಾಲಕ್ಷಪ್ಪ ಕಡೇಮನಿ, ಚಂದ್ರಪ್ಪ ಬಣಕಾರ, ವಿಜಯ ಮಿಳ್ಳಿ, ಪ್ರೇಮಾ ಅಂಗಡಿ, ಸಂತೋಷ ಯಡಚಿ, ಬಾಷಾ ಹಂಪಪಟ್ಟಣ, ಪರಶುರಾಮ ಕುರವತ್ತಿ, ಬಸವರಾಜ ದಳವಾಯಿ, ಸಂತೋಷ ಕನಪ್ಪಳ್ಳವರ ಮತ್ತಿತರರಿದ್ದರು.