ಮುಂಬರುವ 2ನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಹಳಿಯಾಳ ಬ್ಲಾಕ್ ಕಾಂಗ್ರೆಸ್ ಒಕ್ಕೊರಲಿನಿಂದ ಆಗ್ರಹಿಸಿದೆ.

ಹಳಿಯಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಒತ್ತಾಯ

ಕನ್ನಡಪ್ರಭ ವಾರ್ತೆ ಹಳಿಯಾಳ

ಮುಂಬರುವ 2ನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಹಳಿಯಾಳ ಬ್ಲಾಕ್ ಕಾಂಗ್ರೆಸ್ ಒಕ್ಕೊರಲಿನಿಂದ ಆಗ್ರಹಿಸಿದೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪಕ್ಷದ ಪದಾಧಿಕಾರಿಗಳು, ಮುಖಂಡರು ಮತ್ತು ಮಾಜಿ ಜನಪ್ರತಿನಿಧಿಗಳ ಪರವಾಗಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸಂಪುಟದಲ್ಲಿ ನಮ್ಮ ನಾಯಕ ದೇಶಪಾಂಡೆ ಅವರಿಗೆ ಸಚಿವ ಸ್ಥಾನ ದೊರೆಯಬಹುದೆಂದು ಹಳಿಯಾಳ ಕ್ಷೇತ್ರದ ಜನತೆಯಷ್ಟೇ ಅಲ್ಲ, ಇಡೀ ರಾಜ್ಯವೇ ನಿರೀಕ್ಷೆ ಹೊಂದಿತ್ತು. ಆದರೆ ಮೊದಲ ಹಂತದ ಸಂಪುಟದಲ್ಲಿ ಸಚಿವ ಸ್ಥಾನ ದೊರೆಯದಿರುವುದರಿಂದ ನಮಗೂ ಹಾಗೂ ಇಡೀ ರಾಜ್ಯದ ಜನತೆಗೆ ನಿರಾಸೆಯಾಗಿದೆ. ಆದರೆ ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ದೇಶಪಾಂಡೆ ಅವರಿಗೆ ಸಚಿವ ಸ್ಥಾನ ದೊರೆಯುವ ಅಚಲ ವಿಶ್ವಾಸವಿದೆ ಎಂದರು.ಕಾಂಗ್ರೆಸ್ ವಕ್ತಾರ ಉಮೇಶ ಬೊಳಶೆಟ್ಟಿ ಮಾತನಾಡಿ, ಅಜಾತಶತ್ರುವೆಂದು ಗುರುತಿಸಿಕೊಳ್ಳುವ ದೇಶಪಾಂಡೆ ಅವರು ಈ ವರೆಗೂ ತಮಗೆ ನೀಡಿದ ಸಚಿವ ಖಾತೆಯಿಂದ ರಾಜ್ಯದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದಾರೆ. ಮೊದಲ ಬಾರಿ ಐಟಿ-ಮತ್ತು ಸ್ಟಾರ್ಟ್ಅಪ್‌ ನವೋದ್ಯಮ ನೀತಿಯನ್ನು ದೇಶದಲ್ಲಿ ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಹೊಸ ವಿಚಾರಧಾರೆಯುಳ್ಳ ಅವರನ್ನು ಸಂಪುಟದಲ್ಲಿ ಸೇರ್ಪಡೆ ಮಾಡಿಕೊಂಡರೆ ಸಂಪುಟದ ಘನತೆ ಹೆಚ್ಚಲಿದೆ ಎಂದರು.

ಯುವ ಮುಖಂಡ ರವಿ ತೋರಣಗಟ್ಟಿ ಮಾತನಾಡಿ, 9 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ದೇಶಪಾಂಡೆ ಅವರು ಈ ವರೆಗೆ ಎಂಟು ಮುಖ್ಯಮಂತ್ರಿಗಳ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ ಅಪಾರ ಅನುಭವ ಹೊಂದಿದ್ದಾರೆ. ಆರೋಪ ಮತ್ತು ಹಗರಣಗಳ ಮುಕ್ತ ಆಡಳಿತ ನಡೆಸುವ ದೇಶಪಾಂಡೆ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದರು.

ಕಾಂಗ್ರೆಸ್ ಮುಖಂಡರಾದ ಸತ್ಯಜಿತ ಗಿರಿ, ವೆಂಕಟೇಶ ಸಾಳುಂಕೆ ಮೊದಲಾದವರು ಮಾತನಾಡಿ ದೇಶಪಾಂಡೆ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಅಜರ್ ಬಸರಿಕಟ್ಟಿ, ಫಯಾಜ್ ಶೇಖ್, ವಿಷ್ಣು ಮಿಶಾಳೆ, ಸಂಜು ಮಿಶಾಳೆ, ಸಂತೋಷ ರೇಣಕೆ, ಮಂಜುನಾಥ ಬಂಡಿವಾಡ, ಅಣ್ಣಪ್ಪ, ದೇಮಾಣಿ ಶಿರೋಜಿ, ಖಲೀಲ ಚಿಗರಿ, ಮಾಲಾ ಬೃಗಾಂಜಾ, ಸುವರ್ಣ ಮಾದರ, ಪ್ರಕಾಶ ಪಾಕ್ರೆ ಸೇರಿದಂತೆ ಪಕ್ಷದ ವಿವಿಧ ವಿಭಾಗಗಳ ಪದಾಧಿಕಾರಿಗಳು, ಬೂತ್‌ ಮಟ್ಟದ ಮುಖಂಡರು ಇದ್ದರು.