ಕಳೆದ ಏಳೆಂಟು ದಶಕಗಳಿಂದಲೂ ಕಾಂಗ್ರೆಸ್ ಸರ್ಕಾರದಲ್ಲಿ ಗಾಣಿಗ ಸಮಾಜದ ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ೨೦೨೩ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಲಕ್ಷ್ಮಣ ಸವದಿ ನಾಯಕತ್ವದ ಹೋರಾಟ ಮರೆಯುವಂತಿಲ್ಲ

ಯಲಬುರ್ಗಾ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಮಾಜಿ ಡಿಸಿಎಂ ಹಾಗೂ ಹಿರಿಯ ಶಾಸಕ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡುವಂತೆ ತಾಲೂಕು ಗಾಣಿಗ ಸಮಾಜದ ಅಧ್ಯಕ್ಷ ಶರಣಪ್ಪ ರ್ಯಾವಣಕಿ ಒತ್ತಾಯಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗಾಣಿಗ ಸಮಾಜದಿಂದ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ರಾಜ್ಯದಲ್ಲಿ ಸುಮಾರು ೪೫ ಲಕ್ಷಕ್ಕೂ ಅಧಿಕ ಗಾಣಿಗ ಸಮುದಾಯವಿದ್ದು, ಪ್ರಸ್ತುತ ಕಾಂಗ್ರೆಸ್‌ನಲ್ಲಿ ಲಕ್ಷ್ಮಣ ಸವದಿ, ಬಿ.ಕೆ. ಸಂಗಮೇಶ, ವೀರೇಂದ್ರ ಪಪ್ಪಿ ಸೇರಿದಂತೆ ೩ಜನ ಶಾಸಕರಿದ್ದಾರೆ. ಕಳೆದ ಏಳೆಂಟು ದಶಕಗಳಿಂದಲೂ ಕಾಂಗ್ರೆಸ್ ಸರ್ಕಾರದಲ್ಲಿ ಗಾಣಿಗ ಸಮಾಜದ ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ೨೦೨೩ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಲಕ್ಷ್ಮಣ ಸವದಿ ನಾಯಕತ್ವದ ಹೋರಾಟ ಮರೆಯುವಂತಿಲ್ಲ. ಸವದಿ ಪ್ರಚಾರ ಮಾಡಿದ ಕ್ಷೇತ್ರದಲ್ಲಿ ಬಹುತೇಕ ಗೆಲುವು ಕಂಡಿದೆ. ಇದನ್ನೆಲ್ಲ ಪರಿಗಣಿಸಿ ಕಾಂಗ್ರೆಸ್ ಸರ್ಕಾರ ಮತ್ತು ಪಕ್ಷದ ಹೈಕಮಾಂಡ್ ಸಮುದಾಯಕ್ಕೆ ನ್ಯಾಯ ಒದಗಿಸುವಂತಹ ಕೆಲಸ ಮಾಡಬೇಕು.ಅಲ್ಲದೆ ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಸಮುದಾಯದ ಇಬ್ಬರಿಗೆ ಸಚಿವ ಸ್ಥಾನ ಕೊಡಬೇಕು. ಈ ಹಿಂದೆ ಲಕ್ಷ್ಮಣ ಸವದಿ ಉಪಮುಖ್ಯಮಂತ್ರಿ ಹಾಗೂ ಅನೇಕ ಖಾತೆ ಸಮರ್ಥವಾಗಿ ನಿಭಾಯಿಸಿದ್ದಾರೆ. ಅನುಭವ ಮತ್ತು ಹಿರಿತನ ಪರಿಗಣಿಸಿ ಅವರಿಗೆ ಸಚಿವ ಸ್ಥಾನ ನೀಡಬೇಕು. ಒಂದುವೇಳೆ ಇದರಲ್ಲಿ ತಾರತಮ್ಯವಾದರೆ ಕಾಂಗ್ರೆಸ್ ವಿರುದ್ಧ ಬರುವ ದಿನಗಳಲ್ಲಿ ಸಮಾಜ ತಕ್ಕ ಪಾಠ ಕಲಿಸಲಿದೆ ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಮುದಾಯದ ಬಾಳೇಶಪ್ಪ ಕಟಗಿಹಳ್ಳಿ, ಮಹಾಂತೇಶ ಗಾಣಿಗೇರ, ನಾಗರಾಜ ನವಲಹಳ್ಳಿ, ಹಿರೇಹನುಮಪ್ಪ ಬೊಮ್ಮನಾಳ, ಆದೇಶ ರೊಟ್ಟಿ, ಹನುಮಂತ ಚರಾರಿ,ಪಂಪಾಪತಿ ಕುದ್ರಿಮೋತಿ, ವೀರೇಶ ಸಜ್ಜನ, ಅಶೋಕ ಸಜ್ಜನ, ಮಂಜುನಾಥ ರೊಟ್ಟಿ, ವೀರೇಶ ಚರಾರಿ ಸೇರಿದಂತೆ ಮತ್ತಿತರರು ಇದ್ದರು.