ಜಂಟಿ ಸರ್ವೇ ಮೂಲಕ ಜಾಗದ ಗಡಿ ಗುರುತಿಸಲು ಆಗ್ರಹ: ಸುನೀಲ್ ಕುಮಾರ್

| Published : Jan 31 2025, 12:45 AM IST

ಜಂಟಿ ಸರ್ವೇ ಮೂಲಕ ಜಾಗದ ಗಡಿ ಗುರುತಿಸಲು ಆಗ್ರಹ: ಸುನೀಲ್ ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ರೈತರ ಹಾಗೂ ಒತ್ತುವರಿದಾರರ ಗಮನಕ್ಕೆ ತಾರದೇ ಯಾವುದೇ ಭೂಮಿಯನ್ನು ಸೆಕ್ಷನ್ 4ಕ್ಕೆ ಸೇರಿಸಬಾರದು ಎಂದು ಕಡಹಿನಬೈಲು ಗ್ರಾಪಂ‌ ಉಪಾಧ್ಯಕ್ಷ ಸುನೀಲ್ ಕುಮಾರ್ ಅರಣ್ಯಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಕಡಹಿನಬೈಲು ಗ್ರಾಮ ಪಂಚಾಯಿತಿಯಲ್ಲಿ ವಿಶೇಷ ಗ್ರಾಮ ಸಭೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ರೈತರ ಹಾಗೂ ಒತ್ತುವರಿದಾರರ ಗಮನಕ್ಕೆ ತಾರದೇ ಯಾವುದೇ ಭೂಮಿಯನ್ನು ಸೆಕ್ಷನ್ 4ಕ್ಕೆ ಸೇರಿಸಬಾರದು ಎಂದು ಕಡಹಿನಬೈಲು ಗ್ರಾಪಂ‌ ಉಪಾಧ್ಯಕ್ಷ ಸುನೀಲ್ ಕುಮಾರ್ ಅರಣ್ಯಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಬುಧವಾರ ಕಡಹಿನಬೈಲು ಗ್ರಾ.ಪಂ.ನಲ್ಲಿ ನಡೆದ ವಿಶೇಷ ಗ್ರಾಮಸಭೆಯಲ್ಲಿ ಮಾತನಾಡಿ, ಕಡಹಿನ ಬೈಲು ಗ್ರಾಮದ ಸ‌.ನಂ. 109,77,83,110,81 ಹಾಗೂ 40 ರಲ್ಲಿನ 298.25 ಭೂ ಪ್ರದೇಶವನ್ನು ಅರಣ್ಯ ಇಲಾಖೆಯವರು ಬ್ಲಾಕ್ 1 ಹಾಗೂ 4 ಎಂದು ಅಧಿಸೂಚಿಸಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರ ಅಭಿಪ್ರಾಯ ಪಡೆಯಲು ವಿಶೇಷ ಗ್ರಾಮ ಸಭೆ ಕರೆಯಲಾಗಿದೆ. ಈಗಾಗಲೇ ಅಧಿಸೂಚಿಸುತ್ತಿರುವ ಭೂ ಪ್ರದೇಶದಲ್ಲಿ ರೈತರು ಮನೆ ಕಟ್ಟಿಕೊಂಡಿರುವವರು ಸರ್ಕಾರ ವಿಶೇಷವಾಗಿ ನೇಮಿಸಿದ ಕಡೂರಿನಲ್ಲಿರುವ ಫಾರೆಸ್ಟ್ ಸೆಟ್ಲ್ ಮೆಂಟ್ ಆಫೀಸರ್ ಗೆ ದೂರು ನೀಡಬೇಕು. ನಂತರ ಸ್ಥಳ ತನಿಖೆ ಮಾಡಿ, ಮನೆ ಕಟ್ಟಿಕೊಂಡ ಜಾಗ ಹೊರತುಪಡಿಸಿ ಉಳಿದ ಜಾಗವನ್ನು ಸೆಕ್ಷನ್ 4 ಗೆ ಸೇರಿಸುತ್ತಾರೆ ಎಂದು ತಿಳಿಸಿದರು.ಗ್ರಾಪಂ ಮಾಜಿ ಉಪಾಧ್ಯಕ್ಷ ಗಾಂಧಿಗ್ರಾಮ ನಾಗರಾಜು ಮಾತನಾಡಿ, ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯವರು ತಮ್ಮ ತಮ್ಮ ಜಾಗ ಯಾವುದೆಂದು ಇಲಾಖೆಯವರೇ ಗೊಂದಲದಲ್ಲಿದ್ದಾರೆ. ಮೊದಲು 2 ಇಲಾಖೆಯವರು ಸೇರಿ ಜಂಟಿ ಸರ್ವೇ ಮಾಡುತ್ತೇವೆಂದು ಹೇಳಿದ್ದರು. ಆದರೆ, ಆ ಕಾರ್ಯ ನೆನೆಗುದಿಗೆ ಬಿದ್ದಿದೆ. ಇದರಿಂದ ಒತ್ತುವರಿ ಮಾಡಿಕೊಂಡು ಬದುಕು ಕಟ್ಟಿಕೊಂಡಿರುವ ರೈತರ ಬದುಕು ಮೂರಾಬಟ್ಟೆಯಂತಾಗಿದೆ. ಮೊದಲು ಎರಡೂ ಇಲಾಖೆಯವರು ತಮ್ಮ ಜಾಗದ ಗಡಿಯನ್ನು ಜಂಟಿ ಸರ್ವೇ ಮಾಡಿ ಗುರುತು ಮಾಡಿ ಎಂದು ಒತ್ತಾಯಿಸಿದರು.

ಉಪ ವಲಯ ಅರಣ್ಯಾಧಿಕಾರಿ ಅರುಣ್ ಬಾರಂಗಿ ಮಾತನಾಡಿ, ಕಡಹಿನಬೈಲು ಗ್ರಾಮದ ಸ.ನಂ. 109 ರಲ್ಲಿ 49.38, 77 ರಲ್ಲಿ 0.33 ಗುಂಟೆ, 83 ರಲ್ಲಿ 13.34, 110 ರಲ್ಲಿ 66.18, 81 ರಲ್ಲಿ 32.17, ಹಾಗೂ ಸ.ನಂ. 40 ರಲ್ಲಿ 135.05 ಎಕ್ರೆ ಜಾಗವನ್ನು ಸೆಕ್ಷನ್ 4 ಗೆ ಅಧಿಸೂಚಿಸಲಾಗಿದೆ. ಆದ್ದರಿಂದ ಒತ್ತುವರಿ ಮಾಡಿ ಮನೆ ಕಟ್ಟಿಕೊಂಡವರು ಕೂಡಲೇ ಫಾರೆಸ್ಟ್ ಸೆಟ್ಲ್ ಮೆಂಟ್ ಆಫೀಸರ್ ಗೆ ಆಕ್ಷೇಪಣೆ ದೂರು ನೀಡಬೇಕು ಎಂದು ಮನವಿ ಮಾಡಿದರು. ಗ್ರಾಮದ ಮುಖಂಡ ಜಂಟಿ ಅರಣ್ಯ ಸಮಿತಿ ಅಧ್ಯಕ್ಷ ಕೆ.ಮೋಹನ ಮಾತನಾಡಿ, ಅರಣ್ಯವನ್ನು ನಿಜವಾಗಿ ಉಳಿಸಿ, ಬೆಳೆಸಿ, ಸಂರಕ್ಷಿಸುತ್ತಿರುವುದು ರೈತರಾದ ನಾವುಗಳು. ಕಡಹಿನಬೈಲು ಗ್ರಾಮದ ಸ.ನಂ. 110 ರಲ್ಲಿ 1978 ಗೂ ಮುನ್ನ 8 ರಿಂದಾ 10 ಜನರಿಗೆ ಹಂಗಾಮಿ ಸಾಗುವಳಿ ಚೀಟಿ ನೀಡಿದ್ದಾರೆ. ಆದರೆ ಇದೂವರೆಗೂ ಖಾಯಂ ಹಕ್ಕುಪತ್ರ ನೀಡಿಲ್ಲ ಎಂದರು. ಸಭೆಯಲ್ಲಿ ಗ್ರಾಪಂ‌ ಸದಸ್ಯ ಎ.ಬಿ.ಮಂಜುನಾಥ್, ಮುಖಂಡರಾದ ಎಲ್ದೋ, ಎಲ್.ನಾಗರಾಜ್, ಡಿ.ಜಿ.ಸತೀಶ್, ಎ‌.ಬಿ.ಪ್ರಶಾಂತ್, ಉಪ ವಲಯ ಅರಣ್ಯಾಧಿಕಾರಿ ಗೌಸ್ ಮೊಹಿಯುದ್ದಿನ್ ಮಾತನಾಡಿದರು.ಸಭೆ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷೆ ಅಶ್ವಿನಿ ವಹಿಸಿದ್ದರು‌. ಸಭೆಯಲ್ಲಿ ಗ್ರಾ.ಪಂ. ಸದಸ್ಯರಾದ ಚಂದ್ರಶೇಖರ್, ಶೈಲಾಮಹೇಶ್, ವಾಣಿನರೇಂದ್ರ, ಲಿಲ್ಲಿಮಾಥುಕುಟ್ಟಿ, ಪೂರ್ಣಿಮಾ, ಪಿಡಿಒ ವಿಂದ್ಯಾ ಇದ್ದರು.