ಸಾರಾಂಶ
ಕರ್ನಾಟಕ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದಿಂದ ಹಳೆಯ ಪಿಂಚಣಿ ಯೋಜನೆ ಸೇರಿದಂತೆ ಅನೇಕ ಪ್ರಮುಖವಾದ ಬೇಡಿಕೆ ಈಡೇರಿಸುವಂತೆ ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗೆ ಮನವಿ
ಕನ್ನಡಪ್ರಭ ವಾರ್ತೆ ಕುಷ್ಟಗಿಕರ್ನಾಟಕ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದಿಂದ ಹಳೆಯ ಪಿಂಚಣಿ ಯೋಜನೆ ಸೇರಿದಂತೆ ಅನೇಕ ಪ್ರಮುಖವಾದ ಬೇಡಿಕೆ ಈಡೇರಿಸುವಂತೆ ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ ಪಟ್ಟಣಶೆಟ್ಟರ ಮಾತನಾಡಿ, ರಾಜ್ಯ ಸರ್ಕಾರವು ಈಗಾಗಲೇ ಸರ್ಕಾರಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವ ಆದೇಶ ಹೊರಡಿಸಿದ್ದು ಶೀಘ್ರವೇ ಅದನ್ನು ಜಾರಿಗೊಳಿಸಬೇಕು ಎಂದರು.ಪ್ರಾಧಿಕಾರದ ವಂತಿಗೆಯನ್ನು ಆಡಳಿತ ಮಂಡಳಿಗಳ ಬದಲಾಗಿ ಸರ್ಕಾರವೇ ಭರಿಸಲು ಕ್ರಮ ವಹಿಸಬೇಕು. ಸಿಬ್ಬಂದಿ ವೇತನ ನಿವೃತ್ತಿ ಮತ್ತು ಇತರ ಸೌಲಭ್ಯಗಳಿಗೆ ಸಂಬಂಧಿಸಿದ ವಿಧೇಯಕಕ್ಕೆ ತಿದ್ದುಪಡಿ ಅಥವಾ ರದ್ದುಪಡಿಸಿ ಭವಿಷ್ಯಾವರ್ತಿಯಾಗಿ ಜಾರಿಗೆ ಬರುವಂತೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
2006ರ ಏಪ್ರಿಲ್ ಪೂರ್ವದಲ್ಲಿ ನೇಮಕವಾಗಿ ನಂತರ ಅನುದಾನಕ್ಕೊಳಪಟ್ಟ ಮತ್ತು 2006ರ ನಂತರ ನೇಮಕವಾಗಿ ವೇತನ ಪಡೆಯುತ್ತಿರುವ ಅನುದಾನಿತ ವಿದ್ಯಾಸಂಸ್ಥೆಗಳ ನೌಕರರಿಗೆ ಯಾವುದೇ ರೀತಿಯ ಪಿಂಚಣಿ ಸೌಲಭ್ಯ ಇರುವುದಿಲ್ಲ. ಬೇರೆ ರಾಜ್ಯಗಳು ಈಗಲೂ ವೇತನದ ಜೊತೆಗೆ ಪಿಂಚಣಿ ನೀಡುತ್ತಿವೆ. 6ನೇ ವೇತನ ಆಯೋಗವು ಪಿಂಚಣಿ ನೀಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದರೂ ಕ್ರಮ ತೆಗೆದುಕೊಂಡಿಲ್ಲ. ಆದ ಕಾರಣ ಈ ಸರ್ಕಾರವು ನಮ್ಮ ಸಮಸ್ಯೆಗೆ ಪರಿಹಾರ ನೀಡಬೇಕು ಎಂದರು.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಪ್ರಭಾಕರ ಅವರಡ್ಡಿ, ತಾಲೂಕಾಧ್ಯಕ್ಷ ಸುರೇಶ ಕಾಡಗಿಮಠ, ಪ್ರಧಾನ ಕಾರ್ಯದರ್ಶಿ ಶರಣಪ್ಪ ಚಿನಿವಾಲರ, ಅಡಿವೆಪ್ಪ ಮೇಟಿ, ಡಿ.ಆರ್. ಪಾಟೀಲ, ಶಿವರಾಜ ಪೂಜಾರ, ಯಮನೂರಪ್ಪ, ರಾಮನಗೌಡ ಗೌಡರ, ಲಕ್ಷ್ಮಣ ಬಡಿಗೇರ, ಯಮನಪ್ಪ ಶಿರವಾರ, ಗುರುಲಿಂಗಯ್ಯ, ಉಮೇಶ ಹಿರೇಮಠ, ಸಂಗಮೇಶ ಇಲಚಿ, ಎಂ. ಕೆ. ಸೂಡಿ, ಶಿವಲಿಂಗಯ್ಯ ಮಠ ಸೇರಿದಂತೆ ಅನೇಕರು ಇದ್ದರು.