ಬಣಜಿಗ ಸಮುದಾಯವನ್ನು ಉದ್ಯೋಗ ಉದ್ದೇಶಕ್ಕಾಗಿ ಪ್ರವರ್ಗ ಡಿ ಹಾಗೂ ಶಿಕ್ಷಣದ ಉದ್ದೇಶಕ್ಕಾಗಿ ಪ್ರವರ್ಗ ಬಿ ಅಡಿಯಲ್ಲಿ ವರ್ಗಿಕರಿಸಿರುವುದು ಪರಿಚ್ಛೇದದ ಉಲ್ಲಂಘನೆಯಾಗಿದೆ.

ರೋಣ: ಬಣಜಿಗ ಜಾತಿಗೆ ಸೇರಿದ ಬಣಜಿಗ ಸಮುದಾಯವನ್ನು ಪ್ರವರ್ಗ 2ಎ ಅಡಿಯಲ್ಲಿಯೇ ಉದ್ಯೋಗ ಮೀಸಲಾತಿಗಾಗಿ ಪರಿಗಣಿಸಿ ಆದೇಶ ನೀಡುವಂತೆ ಆಗ್ರಹಿಸಿ ತಾಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮಂಗಳವಾರ ತಹಸೀಲ್ದಾರ್ ನಾಗರಾಜ ಕೆ. ಅವರ ಮೂಲಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಮನವಿ ಸಲ್ಲಿಸಲಾಯಿತು.

ಉಚ್ಚ ನ್ಯಾಯಾಲಯವು ಬಣಜಿಗ ಸಮುದಾಯವನ್ನು ಉದ್ಯೋಗ ಉದ್ದೇಶಕ್ಕಾಗಿ ಪ್ರವರ್ಗ ಡಿ ಹಾಗೂ ಶಿಕ್ಷಣದ ಉದ್ದೇಶಕ್ಕಾಗಿ ಪ್ರವರ್ಗ ಬಿ ಅಡಿಯಲ್ಲಿ ವರ್ಗಿಕರಿಸಿರುವುದು ಪರಿಚ್ಛೇದದ ಉಲ್ಲಂಘನೆಯಾಗಿದೆ. ಅದಕ್ಕಾಗಿ ಬಣಜಿಗ ಸಮುದಾಯವನ್ನು ಪರಿಚ್ಛೇದ 16(4) ರ ಅಡಿಯಲ್ಲಿ ಗ್ರೂಪ್ ಡಿ ಬದಲಿಗೆ ಗ್ರೂಪ್ ಬಿ ಅಡಿಯಲ್ಲಿ ಮರು ವರ್ಗಿಕರಿಸಿಬೇಕೆಂದು ಉಚ್ಚ ನ್ಯಾಯಾಲಯ ಪೀಠವು ಆದೇಶ ನೀಡಿದೆ.

ಬಣಜಿಗ ಸಮುದಾಯದವರು ಶೈಕ್ಷಣಿಕವಾಗಿ ಅತಿ ಹಿಂದುಳಿದಿರುವುದರಿಂದ ಸರ್ಕಾರಿ ನೇಮಕಾತಿಗಳಿಂದ ಅವಕಾಶ ವಂಚಿತರಾಗುತ್ತಿದ್ದಾರೆ. ಸಂವಿಧಾನದ ಸದಾಶಯಕ್ಕೆ ಇದು ವ್ಯತಿರಿಕ್ತವಾಗಿದೆ. ಈ ಹಿನ್ನಲೆಯಲ್ಲಿ ಬಣಜಿಗ ಸಮುದಾಯವನ್ನು 16 (4) ಅಡಿಯಲ್ಲಿ ಗ್ರೂಪ್ ಡಿ ಬದಲಿಗೆ ಗ್ರೂಪ್ ಬಿ ಅಡಿಯಲ್ಲಿಯೇ ಮರು ವರ್ಗಿಕರಿಸಿ ಉಚ್ಚ ನ್ಯಾಯಾಲಯದ ಆದೇಶದ ಪ್ರಕಾರ ಸಾಮಾಜಿಕ ನ್ಯಾಯ ಒದಗಿಸಬೇಕು. ಬಣಜಿಗ ಜಾತಿಗೆ ಸೇರಿದ ನಮ್ಮ ಸಮುದಾಯವನ್ನು ಪ್ರವರ್ಗ 2ಎ ಅಡಿಯಲ್ಲಿಯೇ ಉದ್ಯೋಗ ಮೀಸಲಾತಿಗಾಗಿ ಪರಿಗಣಿಸಿ ಆದೇಶ ನೀಡಬೇಕು ಎಂದು ಮನವಿ ಮೂಲಕ ವಿನಂತಿಸಿದರು.

ಮನವಿ ಸ್ವೀಕರಿಸಿದ ತಹಸೀಲ್ದಾರ್‌ ನಾಗರಾಜ ಕೆ. ಮಾತನಾಡಿ, ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಕಳುಹಿಸಲಾಗುವುದು ಎಂದರು.

ರೋಣ ತಾಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ಮುತ್ತಣ್ಣ ಮಗಳದ, ವೀರಣ್ಣ ಶೆಟ್ಟರ, ಮುತ್ತಣ್ಣ ಕಡಗದ, ರವಿ ಸಂಗನಬಶೆಟ್ಟರ, ಸಂಗಪ್ಪ ಮೆಣಸಿನಕಾಯಿ, ಬಸವರಾಜ ಕೊಟಗಿ, ಶರಣಪ್ಪ ಜಕ್ಕಲಿ, ಮಂಜುನಾಥ ಶೀಲವಂತರ, ತಮ್ಮಣ್ಣ ಲಕ್ಷ್ಮೇಶ್ವರ, ಶಂಭು ಸಂಗಳದ, ವೀರೇಶ ದಿಂಡೂರ ಸೇರಿದಂತೆ ಬಣಜಿಗ ಸಮುದಾಯದ ಅನೇಕ ಮುಖಂಡರು ಉಪಸ್ಥಿತರಿದ್ದರು.ಬರ ಎದುರಿಸಲು ರೈತರಿಗೆ ಸಲಹೆ

ನರಗುಂದ: ತೋಟಗಾರಿಕೆ ಬೆಳೆ ಬೆಳೆಯುವ ರೈತರು ಮಳೆ ಕೊರತೆ ಸಂದರ್ಭದಲ್ಲಿ ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಲಹೆಗಳನ್ನು ಪಾಲಿಸಲು ತೋಟಗಾರಿಕೆ ಇಲಾಖೆ ಸೂಚಿಸಿದೆ.ಈರುಳ್ಳಿಯ ಅಲ್ಪಾವಧಿ ತಳಿಯಾದ ಭೀಮಾ ರೇಡ್ ಬಿತ್ತನೆ, ನಾಟಿ ಮಾಡುವುದು ಸೂಕ್ತ. ಕೃಷ್ಣಪ್ರಭಾ ರುದ್ರ ತಳಿಯ ಮೆಣಸಿನಕಾಯಿ ಸಸಿ ತಯಾರಿಸಿ, ನಾಟಿ ಮಾಡಬೇಕು. ಆಗಸ್ಟ್ ಮೊದಲ ವಾರ ಮಳೆಯಾದಲ್ಲಿ ಅಜ್ವಾನ, ಚೌಳಿಕಾಯಿ, ಸೊಯಾಬೀನ್, ಅಲಸಂದೆ, ಹುರುಳಿ ಬೆಳೆಗಳನ್ನು ಬೆಳೆಯಬಹುದು. ನೀರಿನ ಲಭ್ಯತೆ ಕಡಿಮೆ ಇದ್ದಲ್ಲಿ ಬೆಂಡೆಕಾಯಿ, ಬದನೆಕಾಯಿ, ಕುಂಬಳಕಾಯಿ, ಸೌತೆಕಾಯಿ, ಹಿರೇಕಾಯಿ, ಹಾಗಲಕಾಯಿ ಬೆಳೆಯಲು ಆದ್ಯತೆ ನೀಡಬೇಕು. ಹಣ್ಣಿನ ಬೆಳೆಗಳಲ್ಲಿ ದಟ್ಟವಾಗಿ ಬೆಳೆದ ಟೊಂಗೆಗಳನ್ನು ತೆಗೆಯಬೇಕು. ನಿಯಮಿತವಾಗಿ ಸವರುವಿಕೆ ಮತ್ತು ಚಾಟಣಿ ಕೈಗೊಳ್ಳಬೇಕು. ಹೊಸದಾಗಿ ನಾಟಿ ಮಾಡಿದ ಹಣ್ಣಿನ ಸಸಿಗಳಿಗೆ ಚೊಗಚೆ, ತೊಗರಿ ಬೀಜಗಳನ್ನು ಹಾಕಿ ಅಥವಾ ಎತ್ತರವಾದ ಗಿಡದ ಟೊಂಗೆಗಳ ಮೂಲಕ ನೆರಳು ಒದಗಿಸಬೇಕು ಎಂದು ತಾಲೂಕು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.