ಸಾರಾಂಶ
ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ 5 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸೋತರೂ ಸೊರಕೆಯವರು ಕಾರ್ಯಕರ್ತರ ಪರ ನಿಂತು ಅವರ ಕೆಲಸಗಳನ್ನು ಮಾಡಿಕೊಡುತ್ತಾ ಪಕ್ಷ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾ ಕಾಂಗ್ರೆಸ್‌ಗೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಶಿರ್ವ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ನ್ಯಾಯವಾದಿ ಮೆಲ್ವಿನ್ ಡಿಸೋಜ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಕರ್ನಾಟಕ ರಾಜ್ಯದಲ್ಲಿ ಜೂನ್ 13ರಂದು ವಿಧಾನಪರಿಷತ್ತಿನ 11 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ವಿನಯ್ ಕುಮಾರ್ ಸೊರಕೆ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಬೇಕು ಎಂದು ಶಿರ್ವ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ನ್ಯಾಯವಾದಿ ಮೆಲ್ವಿನ್ ಡಿಸೋಜ ಆಗ್ರಹಿಸಿದ್ದಾರೆ.ವಿನಯಕುಮಾರ್ ಸೊರಕೆ ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಗೆದ್ದರೂ, ಸೋತರೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಉಡುಪಿ ಜಿಲ್ಲೆಯಲ್ಲಿ ಪಕ್ಷದ ಕಾರ್ಯಕರ್ತರ ಧ್ವನಿಯಾಗಿರುವವರು. ಕಾಪು ಕ್ಷೇತ್ರದಲ್ಲಿ ಶಾಸಕರಾಗಿ ಮತ್ತು ಸಚಿವರಾಗಿ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳು ಕಾರ್ಯಕರ್ತರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದಿವೆ.
ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ 5 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸೋತರೂ ಸೊರಕೆಯವರು ಕಾರ್ಯಕರ್ತರ ಪರ ನಿಂತು ಅವರ ಕೆಲಸಗಳನ್ನು ಮಾಡಿಕೊಡುತ್ತಾ ಪಕ್ಷ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾ ಕಾಂಗ್ರೆಸ್‌ಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಇತ್ತೀಚೆಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಪಕ್ಷ ನೀಡಿದ ಜವಾಬ್ದಾರಿಯನ್ನು ರಾಜ್ಯಾದ್ಯಂತ ಸಂಚರಿಸಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಈ ಹಿಂದೆ ಕೂಡ ಪಕ್ಷದಲ್ಲಿ ಹಲವಾರು ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಇಲ್ಲದೇ ಇರುವ ಈ ಸಂದರ್ಭದಲ್ಲಿ ಸೊರಕೆಯವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದಲ್ಲಿ ಕಾರ್ಯಕರ್ತರಲ್ಲಿ ಹೊಸ ಹುರುಪು ಬರಲಿದೆ ಮತ್ತು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆ ಮಾಡಲು ಶಕ್ತಿ ಬಂದಂತಾಗುತ್ತದೆ. ಆದುದರಿಂದ ನಮ್ಮ ರಾಜ್ಯ ನಾಯಕರು ಇದನ್ನು ಮನಗಂಡು ಸೊರಕೆಯವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿ ಅವರು ಕಾಂಗ್ರೆಸ್ ಪಕ್ಷಕ್ಕೆ ನೀಡಿದ ಸೇವೆಗೆ ಮನ್ನಣೆ ನೀಡಬೇಕೆಂದು ಮೆಲ್ವಿನ್ ಡಿಸೋಜ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.