ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಮೆಕ್ಕೇಜೋಳ ಖರೀದಿ ಕೇಂದ್ರ ತೆರೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಮಂಗಳವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಚಿತ್ರದುರ್ಗ: ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಮೆಕ್ಕೇಜೋಳ ಖರೀದಿ ಕೇಂದ್ರ ತೆರೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಮಂಗಳವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಬಳಿ ಸಭೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶದ ರೈತರ ಬೇಡಿಕೆ ಈಡೇರಿಸುವಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಉದಾಸೀನ ತೋರುತ್ತಿದೆ ಎಂದು ಅಸಮಧಾನ ಹೊರಹಾಕಿದರು. ಜಿಲ್ಲೆಯ ಲಕ್ಷಾಂತರ ಎಕರೆ ಪ್ರದೇಶದಲ್ಲಿ ರೈತರು ಮೆಕ್ಕೇಜೋಳ ಬೆಳೆದಿದ್ದು, ದರ ಕುಸಿತದಿಂದಾಗಿ ಕಂಗೆಟ್ಟಿದ್ದಾರೆ. ಖರೀದಿ ಕೇಂದ್ರ ತೆರೆದರೆ ಮುಕ್ತ ಮಾರುಕಟ್ಟೆಯಲ್ಲಿ ದರ ಹೆಚ್ಚಳವಾಗುತ್ತದೆ. ಸಾಲ ಮಾಡಿಕೊಂಡಿರುವ ರೈತರು ಸಿಕ್ಕಷ್ಟೇ ಸಿಗಲಿ ಎಂದು ಎಪಿಎಂಸಿಗಳಲ್ಲಿ ಮಾರಿಕೊಂಡು ಹೋಗುತ್ತಿದ್ದಾರೆ. ಸರ್ಕಾರ ಖರೀದಿ ಕೇಂದ್ರ ತೆರೆಯುವಲ್ಲಿ ಮೀನ ಮೇಷ ಎಣಿಸುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.ಮೆಕ್ಕೇಜೋಳ ಖರೀದಿಗೆ ಕೆಲ ಸರ್ಕಾರಿ ಸಾಮ್ಯದ ಸಂಸ್ಥೆಗಳಿಗೆ ಸೂಚನೆ ನೀಡಿದೆ. ಐದು ಕ್ವಿಂಟಾಲ್, ಐವತ್ತು ಕ್ವಿಂಟಾಲ್ ಖರೀದಿ ಮಾಡುವಂತೆ ಚೌಕಾಶಿ ಆಟ ಆಡುತ್ತಿದೆ. ಮಿತಿಯಿಲ್ಲದೇ ರೈತರ ಮೆಕ್ಕೆಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಬೇಕೆಂದು ಮನವಿ ಸಲ್ಲಿಸಿದ್ದರೂ, ನಿರ್ಲಕ್ಷ್ಯ ತಾಳಲಾಗಿದೆ. ತಕ್ಷಣ ಎಲ್ಲಾ ತಾಲೂಕುಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆದು ರೈತರ ಆರ್ಥಿಕ ಧೈರ್ಯವನ್ನು ತುಂಬುವಂತಹ ಕೆಲಸವನ್ನು ಸರ್ಕಾರ ಮತ್ತು ಜಿಲ್ಲಾ ಆಡಳಿತ ಮಾಡಬೇಕು ಎಂದು ಆಗ್ರಹಿಸಿದರು.

ಚಿತ್ರದುರ್ಗ ಜಿಲ್ಲೆಯಲ್ಲಿ ಶೇಂಗಾ ಬೆಳೆ ಸಂಪೂರ್ಣವಾಗಿ ಹಾಳಾಗಿದ್ದರೂ, ಬೆಳೆ ಪರಿಹಾರ ಮತ್ತು ಬೆಳೆ ವಿಮೆ ಇದುವರೆಗೂ ರೈತರ ಬ್ಯಾಂಕ್ ಖಾತೆಗೆ ಜಮೆ ಆಗಿಲ್ಲ. ಚಿತ್ರದುರ್ಗ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಈರುಳ್ಳಿ ಬೆಳೆ ಹಾಳಾಗಿದ್ದರೂ ಪರಿಹಾರ ಮತ್ತು ಬೆಳೆ ವಿಮೆ ವಿತರಿಸಿಲ್ಲ. ದರ ಕುಸಿತದಿಂದ ಕಂಗಲಾಗಿರುವ ರೈತರಿಗೆ ಈರುಳ್ಳಿ ಬೆಳೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡುವಂತೆ ಮನವಿಯನ್ನು ಸಲ್ಲಿಸಿದ್ದರೂ ಉದಾಸೀನ ತೋರಲಾಗಿದೆ. 2022-23ನೇ ಅತಿವೃಷ್ಟಿಯಿಂದ ಬೆಳೆ ಪರಿಹಾರವನ್ನು ನಿಜವಾದ ಫಲಾನುಭವಿಗಳಿಗೆ ನೀಡದೆ ಬೇನಾಮಿ ಬ್ಯಾಂಕ್ ಖಾತೆಗಳಿಗೆ ಪರಿಹಾರದ ಹಣವನ್ನು ವರ್ಗಾಹಿಸಿರುವುದು ಕಂಡುಬಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಬೇನಾಮಿ ಬ್ಯಾಂಕ್ ಖಾತೆಗಳಿಗೆ ಪರಿಹಾರದ ಹಣ ಜಮಾ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಪ್ರತಿಭಟನಾಕರರು ಒತ್ತಾಯಿಸಿದರು.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚಿತ್ರದುರ್ಗ ಜಿಲ್ಲೆ ಶಾಖೆ ಅಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಬಿ.ನಿಜಲಿಂಗಪ್ಪ, ಜಿಲ್ಲಾ ಕಾರ್ಯದರ್ಶಿ ರಾಮರೆಡ್ಡಿ, ಸಂಜೀವಪ್ಪ, ಸಿ.ನಾಗರಾಜು ಮುದ್ದಾಪುರ, ಬಾಗೇನಾಳ್ ತಿಪ್ಪೇಸ್ವಾಮಿ, ನಿರಂಜನಮೂರ್ತಿ, ಮಹಾಸ್ವಾಮಿ, ಓಬಳೇಶ್, ಸದಾಶಿವಪ್ಪ, ವೆಂಕಟೇಶಪ್ಪ, ಕುಮಾರ್, ಪ್ರವೀಣಕುಮಾರ್, ಲಕ್ಷ್ಮಣ್, ಬಾಬು ರಾಜಶೇಣರಪ್ಪ, ಜಯ್ಯಣ್ಣ, ನಾಗರಾಜು, ಲೋಕಣ್ಣ, ತಿಪ್ಪೆಸ್ವಾಮಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.