ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಲು ಆಗ್ರಹ

| Published : Dec 03 2024, 12:31 AM IST

ಸಾರಾಂಶ

ಹಿರಿಯೂರು: ತಾಲೂಕಿನ ಯಲ್ಲದಕೆರೆ ಭಾಗದ ಹಳ್ಳಿಗಳ ನೂರಾರು ವಿದ್ಯಾರ್ಥಿಗಳು ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಿ ಎಂದು ಆಗ್ರಹಿಸಿ ಸೋಮವಾರ ಬೆಳಿಗ್ಗೆ ಯಲ್ಲದಕೆರೆಯಲ್ಲಿ 2 ಗಂಟೆಗಳ ಕಾಲ ಸರ್ಕಾರಿ ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಿದರು.

ಹಿರಿಯೂರು: ತಾಲೂಕಿನ ಯಲ್ಲದಕೆರೆ ಭಾಗದ ಹಳ್ಳಿಗಳ ನೂರಾರು ವಿದ್ಯಾರ್ಥಿಗಳು ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಿ ಎಂದು ಆಗ್ರಹಿಸಿ ಸೋಮವಾರ ಬೆಳಿಗ್ಗೆ ಯಲ್ಲದಕೆರೆಯಲ್ಲಿ 2 ಗಂಟೆಗಳ ಕಾಲ ಸರ್ಕಾರಿ ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ವಿದ್ಯಾರ್ಥಿಗಳು ಯಲ್ಲದಕೆರೆ ಅಕ್ಕಪಕ್ಕದ ಹಳ್ಳಿಗಳಾದ ಕೆ.ಕೆ.ಹಟ್ಟಿ, ಬ್ಯಾರಮಡು, ಚಿಗಳಿಕಟ್ಟೆ, ಹಂದಿಗನಡು ಭಾಗದ ನೂರಾರು ವಿದ್ಯಾರ್ಥಿಗಳು ಪ್ರತಿದಿನವೂ ಯಲ್ಲದಕೆರೆ ಗ್ರಾಮಕ್ಕೆ ಬಂದು ನಗರ ಭಾಗದ ಶಾಲಾ ಕಾಲೇಜುಗಳಿಗೆ ಬರುತ್ತಿದ್ದು, ಬೆಳಿಗ್ಗೆ 8 ರಿಂದ ಹತ್ತು ಗಂಟೆಯವರೆಗೆ ಕಾದರೂ ಬಸ್‌ಗಳು ಬರುತ್ತಿಲ್ಲ. ಬಂದರು ನಿಲ್ಲಿಸುತ್ತಿಲ್ಲ. ಇದರಿಂದ ಸಮಯಕ್ಕೆ ಸರಿಯಾಗಿ ಶಾಲಾ ಕಾಲೇಜುಗಳಿಗೆ ಹೋಗಲಾಗದೆ ಪರಿತಪಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹತ್ತಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕವಾಗಿರುವ ಯಲ್ಲದಕೆರೆಗೆ ಹಿರಿಯೂರು, ಚಿತ್ರದುರ್ಗದ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಬರುತ್ತಿದ್ದು, ಬಸ್ ಗಾಗಿ ಕಾದು ಕಾದು ವಾಪಾಸ್ ಮನೆಗೆ ಹೋದ ನಿದರ್ಶನಗಳು ಸಾಕಷ್ಟಿವೆ. ಬೆಳಿಗ್ಗೆ ಹೊತ್ತು ಸರ್ಕಾರಿ ಬಸ್‌ಗಳು ಬರುತ್ತಿಲ್ಲ. ಬರುವ ಮೈಸೂರು ಮಾರ್ಗದ ಒಂದೆರಡು ಬಸ್‌ಗಳು ಬಂದರೂ ಸಹ ವಿದ್ಯಾರ್ಥಿಗಳನ್ನು ನೋಡಿ ನಿಲ್ಲಿಸುವುದಿಲ್ಲ. ಈ ಕುರಿತು ಈಗಾಗಲೇ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಲಿಖಿತ ರೂಪದ ಮನವಿ ನೀಡಿದರು ಸಮಸ್ಯೆ ಪರಿಹರಿಸುವ ಕೆಲಸವಾಗಿಲ್ಲ ಎಂದು ದೂರಿದರು.

ಹೆಚ್ಚಾಗಿ ಬಡವರು, ದಲಿತರು ಇರುವ ಈ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅಧಿಕಾರಿಗಳೇ ಅಡ್ಡಗಾಲಾಗಿದ್ದು, ನಾವು ಪರೀಕ್ಷೆಯಲ್ಲಿ ಫೇಲ್ ಆದರೆ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ ಎಂದು ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದರು.

ಆಗಸ್ಟ್ ತಿಂಗಳಲ್ಲಿಯೂ ಸಹ ಇದೇ ರೀತಿ ಬಸ್ ತಡೆದು ಪ್ರತಿಭಟಿಸಲಾಗಿತ್ತು. ದಿನ ಪತ್ರಿಕೆಗಳ ಸುದ್ದಿ ಗಮನಿಸಿದ ಸಚಿವರು ಆ ಭಾಗಕ್ಕೆ ಬಸ್ ವ್ಯವಸ್ಥೆ ಮಾಡಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಆಗಸ್ಟ್ ತಿಂಗಳಲ್ಲೇ ಸೂಚಿಸಿದ್ದರು. ಆದರೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ನಾಲ್ಕು ತಿಂಗಳು ಕಳೆಯುತ್ತಾ ಬಂದರೂ ಈ ಭಾಗದ ವಿದ್ಯಾರ್ಥಿಗಳ ಬಸ್ ಸಮಸ್ಯೆ ಬಗೆಹರಿಯಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಾರಿಗೆ ಅಧಿಕಾರಿಗಳು ಇನ್ನೊಂದು ವಾರದಲ್ಲಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು. ವಿದ್ಯಾರ್ಥಿಗಳು ಇನ್ನೊಂದು ವಾರ ನಾವು ಮನೆಯಲ್ಲೇ ಉಳಿಯುತ್ತೇವೆ, ನೀವು ಬಸ್ ಬಿಟ್ಟ ನಂತರ ಶಾಲಾ ಕಾಲೇಜ್ ಹೋಗುತ್ತೇವೆ ಎಂದು ಉತ್ತರಿಸಿ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ.ಅಧಿಕಾರಿಗಳು ಸಚಿವರ ಮಾತು ಪಾಲಿಸದಿರುವುದು ದುರಂತ

ವಿದ್ಯಾರ್ಥಿಗಳ ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಹಿಸಿದ ಕೆ.ಕೆ.ಹಟ್ಟಿಯ ಭಾರತೀಯ ಕಿಸಾನ್ ಸಂಘದ ಕಾರ್ಯದರ್ಶಿ ಆರ್‌.ಜಯಪ್ರಕಾಶ್, ಯಲ್ಲದಕೆರೆ ಭಾಗದ ಸುಮಾರು 200ರಷ್ಟು ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ಹಿರಿಯೂರು, ಚಿತ್ರದುರ್ಗ ನಗರಗಳಿಗೆ ಹೋಗುತ್ತಾರೆ. ಬಸ್ ಇಲ್ಲದ ಕಾರಣ ಹಲವು ವಿದ್ಯಾರ್ಥಿಗಳ ವಿದ್ಯಾಭ್ಯಾಸ ಅರ್ಧಕ್ಕೆ ನಿಂತಿದೆ. ಕಳೆದ ಬಾರಿ ಸಚಿವರಿಗೆ ಮನವಿ ಮಾಡಿದಾಗ ಸಚಿವರು ತಕ್ಷಣವೇ ಆ ಭಾಗಕ್ಕೆ ಬಸ್ ವ್ಯವಸ್ಥೆ ಮಾಡಿ ಎಂದು ಹೇಳಿದ್ದರು. ಆದರೆ ಅಧಿಕಾರಿಗಳು ಅವರ ಮಾತನ್ನೂ ಪಾಲಿಸದೇ ಇರುವುದು ದುರಂತ ಎಂದರು.

ಕನ್ನಡಪ್ರಭ ಪತ್ರಿಕೆ ಸುದ್ದಿಯ ಜೆರಾಕ್ಸ್

ಪ್ರತಿ ಹಿಡಿದು ಅಧಿಕಾರಿಗಳ ವಿರುದ್ಧ ಘೋಷಣೆ

ಆಗಸ್ಟ್ ತಿಂಗಳ 6ನೇ ತಾರೀಕು ಕನ್ನಡಪ್ರಭ ಪತ್ರಿಕೆಯು "ಸಮಯಕ್ಕೆ ಬಾರದ ಬಸ್ ವಿದ್ಯಾರ್ಥಿಗಳಿಗೆ ಸಮಸ್ಯೆ " ಎಂಬ ಸುದ್ದಿ ಮಾಡಿತ್ತು. ಆನಂತರ ಸಚಿವರು ಬಸ್ ಸೌಲಭ್ಯ ಕಲ್ಪಿಸಲು ಆದೇಶಿಸಿದ್ದರು. ಆದರೆ ನಾಲ್ಕು ತಿಂಗಳು ಆಗುತ್ತಾ ಬಂದರೂ ಆ ಆದೇಶ ಪಾಲನೆಯಾಗದಿದ್ದರಿಂದ ಸೋಮವಾರ ವಿದ್ಯಾರ್ಥಿನಿಯರು ಪತ್ರಿಕೆಯ ಸುದ್ದಿಯ ಜೆರಾಕ್ಸ್ ಪ್ರತಿಗಳನ್ನು ಪ್ರದರ್ಶಿಸಿ ಬಸ್ ಸೌಲಭ್ಯ ಕಲ್ಪಿಸದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಿದ್ದರು.