ಸಾರಾಂಶ
ಹೊನ್ನಾವರ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಿಂದ 25 ವರ್ಷದಿಂದ ಪಟ್ಟಣದ ಕರ್ನಲ್ ಕಂಬದಿಂದ ಸರ್ಕಲ್ ತನಕ ಗೂಡಂಗಡಿ ಇಟ್ಟುಕೊಂಡವರ ಅಂಗಡಿ ತೆರೆವುಗೊಳಿಸಲಾಗುತ್ತಿದೆ. ಅದನ್ನೇ ನಂಬಿ ಜೀವನ ನಡೆಸುತ್ತಾ ಇರುವವರಿಗೆ ಪಪಂ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು ಎಂದು ನ್ಯಾಯವಾದಿ ವಿಕ್ರಂ ನಾಯ್ಕ ಹೇಳಿದರು.
ಅವರು ಬೀದಿಬದಿ ವ್ಯಾಪಾರಿಗಳ ಸಂಘದಿಂದ ತಹಸೀಲ್ದಾರ್ ಗೆ ಮನವಿ ನೀಡಿ ಮಾತನಾಡಿದರು.ಪಪಂ ₹50 ಶುಲ್ಕ ವಸೂಲಿ ಮಾಡಿದ ಮೇಲೆ ಅವರಿಗೆ ಜವಾಬ್ದಾರಿ ಇದೆ. ಬೀದಿ ವ್ಯಾಪಾರಸ್ಥರು ಅದನ್ನೇ ನಂಬಿದ್ದಾರೆ. ಪಪಂ ವ್ಯಾಪ್ತಿಯಲ್ಲಿ ಜಾಗ ಇದೆ. ಅಲ್ಲಿ ಅವಕಾಶ ಮಾಡಿಕೊಟ್ಟು ಜೀವನಕ್ಕೆ ದಾರಿ ಮಾಡಿಕೊಡಿ, ಇಲ್ಲವಾದಲ್ಲಿ ಅವರ ಅವಲಂಬಿತ ಕುಟುಂಬ ರಸ್ತೆಗೆ ಬರುತ್ತದೆ. ಜಾಗ ಕೊಡಿ ಕಷ್ಟಪಟ್ಟು ದುಡಿದು ಸಂಸಾರ ನಡೆಸುತ್ತಾರೆ. ಎಲ್ಲ ಕಡೆ ಬೀದಿ ಬದಿ ವ್ಯಾಪಾರಸ್ಥರಿಗೆ ಫುಡ್ ಕೋರ್ಟ್ ಮಾಡಿಕೊಟ್ಟಿದ್ದಾರೆ. ಇಲ್ಲಿಯೂ ಜಾಗ ಇದೆ. ಪಪಂಕ್ಕೂ ಆದಾಯ ಬರುತ್ತದೆ. ಶೀಘ್ರದಲ್ಲಿ ಪಪಂ ಸಭೆಯಲ್ಲಿ ಠರಾವು ಮಾಡಿ ಫುಡ್ ಕೋರ್ಟ್ ಮಾಡಲು ನಿರ್ಣಯ ತೆಗೆದುಕೊಳ್ಳಿ ಎಂದು ಮನವಿ ಮಾಡಿದರು.
ಬೀದಿ ವ್ಯಾಪಾರಸ್ಥರ ಸಂಘದ ಶ್ರೀರಾಮ್ ಜಾದೂಗಾರ ಮಾತನಾಡಿ, ಹೆದ್ದಾರಿ ಮೇಲೆ ತೆರವು ಗೊಳಿಸಿದ ಅಂಗಡಿಯವರಿಗೆ ಹೆದ್ದಾರಿ ಆದ ಮೇಲೆ ಅದರ ಅಂಚಿಗೆ ಇರುವ ಜಾಗದಲ್ಲಿ ವ್ಯಾಪಾರ ಮಾಡಲು ಸ್ಥಳಾವಕಾಶ ಮಾಡಿಕೊಡಿ, ಕೋಟಿಗಟ್ಟಲೇ ಪರಿಹಾರ ತೆಗೆದುಕೊಂಡವರ ಅಂಗಡಿ ತೆಗೆಯಲು ಆಗ್ತಾ ಇಲ್ಲ. ನಮ್ಮ ಅಂಗಡಿ ತೆಗೆಯುತ್ತಾರೆ. ಪಪಂ ಬೆಳಿಗ್ಗೆ ಸುಂಕ ವಸೂಲಿ, ಸಂಜೆ ಅಂಗಡಿ ತೆರವು ಮಾಡುತ್ತಿದ್ದಾರೆ ಎಂದರು.ಬೀದಿ ಬದಿಯಲ್ಲಿ ವ್ಯಾಪಾರ ಮಾಡದೇ ಇರುವವರಿಗೂ ಪಪಂ ಲೈಸೆನ್ಸ್ ಕೊಟ್ಟಿದೆ. ಲೈಸೆನ್ಸ್ ಹಂಚಿ ಹರಾಜು ಮಾಡಿದ್ದಾರೆ. 170-180 ಬೀದಿಬದಿ ವ್ಯಾಪಾರಸ್ಥರು ಇದ್ದಾರೆ. ಅವರಲ್ಲಿ ಎಲ್ಲರಿಗೂ ಲೈಸೆನ್ಸ್ ಇಲ್ಲ. 300-350 ಜನರಿಗೆ ಲೈಸೆನ್ಸ್ ಕೊಡಲಾಗಿದೆ. ಸಾಲ ಪಡೆಯಲು, ಬಿಪಿಎಲ್ ಕಾರ್ಡ್ ಗಾಗಿ ಲೈಸೆನ್ಸ್ ಪಡೆಯಲಾಗಿದೆ. ಅಂತವರ ಲೈಸೆನ್ಸ್ ರದ್ದು ಮಾಡಿ ಎಂದರು.
ಬೀದಿಬದಿ ವ್ಯಾಪಾರಿಗಳ ಸಂಘದ ತಾಲೂಕು ಅಧ್ಯಕ್ಷ ಸಂದೀಪ ಪೂಜಾರಿ ಮಾತನಾಡಿ, ಬೀದಿ ವ್ಯಾಪಾರಸ್ಥರು ಐಶಾರಾಮಿ ಜೀವನ ಮಾಡ್ತಾ ಇರುವವರಲ್ಲ. ದಿನಗೂಲಿ ಮಾಡಿ ಅದರಲ್ಲಿ ಬಂದ ಆದಾಯದಿಂದ ಮಕ್ಕಳ ಶಿಕ್ಷಣ, ಕುಟುಂಬ ನಿರ್ವಹಣೆ ನಡೆಸುತ್ತಿದ್ದಾರೆ. ಪರ್ಯಾಯ ವ್ಯವಸ್ಥೆ ಮಾಡದೆ ಏಕಾ ಏಕಿ ತೆರವು ಗೊಳಿಸಿದ್ದಾರೆ. ಪಪಂಗೆ ಜವಾಬ್ದಾರಿ ಇದೆ. ಹಣ ವಸೂಲಿ ಮಾಡಿ ದೊಡ್ಡ ತಪ್ಪು ಮಾಡಿದ್ದಾರೆ. ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಿ, ಮಾಡಿಕೊಡದೆ ಇದ್ದಲ್ಲಿ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದರು.ಶಿರಸ್ತೇದಾರ ಕೃಷ್ಣ ಗೊಂಡ ಮನವಿ ಸ್ವೀಕಾರ ಮಾಡಿದರು. ಬೀದಿ ವ್ಯಾಪಾರಿಗಳ ಸಂಘದ ಸಂಸ್ಥಾಪಕ ಅಧ್ಯಕ್ಷ ಅಶೋಕ್ ಜಾದೂಗಾರ, ಪಟ್ಟಣದ ಬೀದಿಬದಿ ವ್ಯಾಪಾರಸ್ಥರು ಇದ್ದರು.