ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ಕಳೆದ 3-4 ತಿಂಗಳಿನಿಂದ ಮಧುಮೇಹ ಪೀಡಿತ ಹೊರ-ಒಳರೋಗಿಗಳಿಗೆ ಉಚಿತವಾಗಿ ನೀಡುತ್ತಿದ್ದ ಇನ್ಸುಲಿನ್ ಬಾಟಲಿ ಹಾಗೂ ಚಿಕಿತ್ಸೆ ಜೊತೆಗೆ ರಕ್ತದೊತ್ತಡದಿಂದ ಬಳಲುತ್ತಿರುವ ರೋಗಿಗಳಿಗೆ ನೀಡುತ್ತಿದ್ದ ಟೆಲ್‌ಮಿಸಾಲ್ ಮಾತ್ರೆಗಳನ್ನು ಸಹ ಉಚಿತವಾಗಿ ನೀಡುತ್ತಿದ್ದುದ್ದನ್ನು ನಿಲ್ಲಿಸಲಾಗಿದೆ ಎಂದು ಆರೋಪಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಇದೊಂದು ಜನವಿರೋಧಿ ನಿರ್ಧಾರವಾಗಿದ್ದು, ಮೆಗ್ಗಾನ್ ಭೋದನಾ ಆಸ್ಪತ್ರೆಯ ಆಡಳಿತ ಮಂಡಳಿ ಕರ್ನಾಟಕ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಹೊರಟಿದೆ. ಈ ಆಸ್ಪತ್ರೆಗೆ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು ಹಾಗೂ ಅಕ್ಕಪಕ್ಕದ ಏಳು ಜಿಲ್ಲೆಗಳಿಂದ ಬಿ.ಪಿ. ಶುಗರ್‌ನಿಂದ ಬಳಲುತ್ತಿರುವ ರೋಗಿಗಳು ಬರುತ್ತಿದ್ದು, ಕಳೆದು 3-4 ತಿಂಗಳಿನಿಂದ ಏಕ ಪಕ್ಷೀಯವಾಗಿ ಅವರಿಗೆ ನೀಡುತ್ತಿದ್ದ ಉಚಿತ ಸೌಲಭ್ಯಗಳನ್ನು ರದ್ದುಗೊಳಿಸಲಾಗಿದೆ. ಸರ್ಕಾರದಿಂದ ಸರಬರಾಜು ಆಗುವ ಇನ್ಸುಲಿನ್ ಹಾಗೂ ಬಿಪಿ ಮಾತ್ರೆಗಳು ಪರಿಣಾಮಕಾರಿಯಾಗಿಲ್ಲ ಎಂದು ಸುಳ್ಳು ಹೇಳಿ, ಖಾಸಗಿ ಮೆಡಿಕಲ್ ಸ್ಟೋರ್ಸ್‌ಗಳಿಂದ ತರುವಂತೆ ರೋಗಿಗಳಿಗೆ ತಿಳಿಸುತ್ತಾರೆ. ಇದರಿಂದ ಮೆಗ್ಗಾನ್ ಆಸ್ಪತ್ರೆಯ ಒಳರೋಗಿಗಳು ಅಕ್ಕಪಕ್ಕದ ಖಾಸಗಿ ಮೆಡಿಕಲ್‌ಗಳಿಗೆ ಹಣ ಪಾವತಿಸಿ ಔಷಧಿ ತರುವ ಮತ್ತು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ತಿಂಗಳಿಗೊಮ್ಮೆ 10 ರು. ಪಾವತಿಸಿ ಹೊಸ ಓಪಿಡಿ ಸ್ಲಿಪ್ ಮಾಡಿಸಬೇಕೆಂಬ ಜನವಿರೋಧಿ ನೀತಿಯನ್ನು ಕೂಡ ಆಡಳಿತ ಮಂಡಳಿ ಹೊರಡಿಸಿದೆ. ಕೂಡಲೇ ಹಿರಿಯ ನಾಗರೀಕರಿಗೆ ಪ್ರತ್ಯೇಕ ಓಪಿಡಿ ಸ್ಲಿಪ್ ಮಾಡಿಸುವ ಕೌಂಟರ್ ತೆರೆದು ಹಿರಿಯ ನಾಗರೀಕರಿಗೆ ಮತ್ತು ಮಹಿಳೆಯರಿಗೆ ಆದ್ಯತೆನೀಡಿ, ಮೊದಲು ಚಿಕಿತ್ಸೆ ನೀಡಬೇಕು. ‘ಡಿ’ದರ್ಜೆ ನೌಕರರು ವ್ಹೀಲ್‌ಚೇರ್‌ಗಳಲ್ಲಿ ರೋಗಿಗಳನ್ನು ತಳ್ಳಲು ಲಂಚ ಪಡೆಯುತ್ತಿದ್ದು ಅದನ್ನು ನಿಲ್ಲಿಸಬೇಕು. ಔಷಧಿ ಹಾಗೂ ಮುಲಾಮು ಮತ್ತು ಸಿರಾಪ್ ನೀಡುವ ಔಷಧಿ ಕೌಂಟರ್‌ಗಳಲ್ಲಿ ಕೂಡ ಹಿರಿಯರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಕ್ಯೂ ಮಾಡಿಸಬೇಕು. ತುರ್ತು ಚಿಕಿತ್ಸಾ ಘಟಕ ಮತ್ತು ಓಪಿಡಿಗಳಲ್ಲಿ ತಜ್ಞವೈದ್ಯರ ನೇಮಕ ಮಾಡಿ, ಕಡ್ಡಾಯವಾಗಿ ಅವರು ಬೆಳಿಗ್ಗೆಯಿಂದ ಸಂಜೆಯವರೆಗೆ ಕರ್ತವ್ಯ ನಿರ್ವಹಿಸಬೇಕು. ಖಾಸಗಿ ಮೆಡಿಕಲ್‌ಗಳಿಗೆ ಮಾತ್ರೆ ಮತ್ತು ಇಂಜೆಕ್ಷನ್‌ಗಳನ್ನು ತರಲು ಚೀಟಿ ಬರೆಯದೇ ಮೆಗ್ಗಾನ್‌ನಲ್ಲಿ ಅದನ್ನು ನೀಡಬೇಕು ಎಂದು ಒತ್ತಾಯಿಸಿದರು.

ಮನವಿ ನೀಡುವ ಸಂದರ್ಭದಲ್ಲಿ ಟ್ರಸ್ಟಿನ ಪ್ರಮುಖರಾದ ಕಲ್ಲೂರು ಮೇಘರಾಜ್, ಹೊಳೆಮಡಲು ವೆಂಕಟೇಶ್, ಹೆಚ್.ಎಂ.ಸಂಗಯ್ಯ, ಎಸ್.ಬಿ. ಅಶೋಕ್‌ಕುಮಾರ್, ಜನಮೇಜಿರಾವ್, ವೇದಾಂತ್‌ಗೌಡ, ಮಂಜುನಾಥ್, ಕೋಡ್ಲೂರು ಶ್ರೀಧರ್, ರಾಮಲಿಂಗಯ್ಯ, ಟಿ.ಎಚ್. ಬಾಬು, ಶಂಕರಾನಾಯ್ಕ್ ಇದ್ದರು.