ಕಟ್ಟಡ ಕಾರ್ಮಿಕರಿಗೆ ವಿವಿಧ ಸೌಲಭ್ಯ ನೀಡಲು ಆಗ್ರಹ

| Published : Jul 09 2024, 12:53 AM IST

ಸಾರಾಂಶ

ಶಿವಮೊಗ್ಗದ ಕಾರ್ಮಿಕ ಇಲಾಖೆ ಕಚೇರಿ ಎದುರು ಸೋಮವಾರ ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿ ಜೊತೆಗೆ ವಿವಿಧ ಸೌಲಭ್ಯ ನೀಡುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರ ಒಕ್ಕೂಟದ ಜಿಲ್ಲಾ ಶಾಖೆ ವತಿಯಿಂದ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿ ಜೊತೆಗೆ ವಿವಿಧ ಸೌಲಭ್ಯ ನೀಡುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರ ಒಕ್ಕೂಟದ ಜಿಲ್ಲಾ ಶಾಖೆ ವತಿಯಿಂದ ಕಾರ್ಮಿಕ ಇಲಾಖೆ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು.

ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕಾನೂನು ಬದ್ಧವಾಗಿ ನೀಡುತ್ತಿದ್ದ ಸೌಲಭ್ಯ ಸಿಗುತ್ತಿಲ್ಲ. ಕಳೆದ ಹಲವು ತಿಂಗಳಿನಿಂದ ಇಲಾಖೆ ಅಧಿಕಾರಿಗಳ ಜೊತೆಗೆ ಹಲವು ಸುತ್ತಿನ ಮಾತುಕತೆ ನಡೆದರೂ ಪ್ರಯೋಜವಾಗಿಲ್ಲ. ನ್ಯಾಯಯುತವಾದ ಬೇಡಿಕೆ ಈಡೇರಿಸಿಲ್ಲ. ಗುರುತಿನ ಚೀಟಿ ನೀಡದೇ ನಮ್ಮನ್ನು ಸೌಲಭ್ಯ ವಂಚಿತರನ್ನಾಗಿ ಮಾಡುತ್ತಿದ್ದಾರೆ. ಕಾರ್ಮಿಕರಿಗೆ ನೀಡುವ ಸೌಲಭ್ಯದಲ್ಲಿ ಹಲವಾರು ಕೋಟಿ ವಂಚನೆಯಾಗಿದೆ. ಕಾರ್ಮಿಕ ಮಂಡಳಿ ಹಣದಲ್ಲಿ ಬಾರೀ ಗೋಲ್‍ಮಾಲ್ ನಡದಿದೆ ಎಂದು ಪತ್ರಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ಶೈಕ್ಷಣಿಕ ಸಹಾಯಧನ ಅರ್ಜಿ ಸಲ್ಲಿಕೆ ಅವಧಿಯನ್ನು ಆ.31ರವರೆಗೆ ವಿಸ್ತರಿಸಬೇಕು. 2023ರ ಶೈಕ್ಷಣಿಕ ಸಹಾಯಧನ ಅಧಿಸೂಚನೆ ರದ್ದುಪಡಿಸಿ, 20-21ರ ಅಧಿಸೂಚನೆ ಅನ್ವಯವೇ ಶೈಕ್ಷಣಿಕ ಸಹಾಯಧನ ನೀಡಬೇಕು. ನೋಂದಣಿ ಮತ್ತು ಮರುನೋಂದಣಿಗಾಗಿ ಸಲ್ಲಿಸಿರುವ ಅರ್ಜಿಗಳನ್ನು ಸಕಾರಣವಿಲ್ಲದೆ ತಿರಸ್ಕರಿಸಬಾರದು. ಕಾಲಮಿತಿಯಲ್ಲಿ ಅರ್ಜಿ ವಿಲೇವಾರಿ ಮಾಡಬೇಕು ಎಂದು ಒತ್ತಾಯಿಸಿದರು.

ನೈಜ ಕಾರ್ಮಿಕರ ಅರ್ಜಿಗಳನ್ನು ಮಾನ್ಯ ಮಾಡಬೇಕು. ಲೈಸೆನ್ಸ್ ಸಲ್ಲಿಸದಿರುವ ಕಾರಣವನ್ನು ಮುಂದುಮಾಡಿ ಕೆಲವು ಅರ್ಜಿ ತಿರಸ್ಕರಿಸಲಾಗುತ್ತಿದ್ದು, ಅದನ್ನು ನಿಲ್ಲಿಸಬೇಕು. ಪಿಂಚಣಿ ಅರ್ಜಿಗಳು ವಿಲೇವಾರಿಯಾಗಿಲ್ಲ. ಪಿಂಚಣಿಯನ್ನು ವರ್ಷದ 12 ತಿಂಗಳು ಸರಿಯಾಗಿ ಪಾವತಿ ಮಾಡುತ್ತಿಲ್ಲ. ಕಾರ್ಮಿಕರು ಮಂಡಳಿ ಫಲಾನುಭವಿಗಳಾಗಿ ನೋಂದಾವಣಿಯಾಗುವ ಸಮಯದಲ್ಲಿ ಸಲ್ಲಿಸಿರುವ ವಯಸ್ಸಿನ ದಾಖಲೆಯನ್ನೇ ಪಿಂಚಣಿ ಸೌಲಭ್ಯಕ್ಕೆ ದಾಖಲೆಯಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.ಇಲಾಖೆ ಸಾಪ್ಟ್‌ವೇರ್‌ನಲ್ಲಿ ಅನೇಕ ತಾಂತ್ರಿಕ ದೋಷಗಳು ಪದೇ ಪದೇ ಕಾಣುತ್ತಿದ್ದು, ಈ ಸಮಸ್ಯೆ ಶೀಘ್ರ ಸರಿಪಡಿಸಬೇಕು. ತಿರಸ್ಕೃತವಾದ ಹೊಸ ನೋಂದಣಿದಾರರು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ತಿದ್ದುಪಡಿಗೆ ಕಚೇರಿಗೆ, ಕಾರ್ಮಿಕ ನಿರೀಕ್ಷಕರಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಅತಿ ಬಡ ಕಾರ್ಮಿಕರಿಗೆ ಗುರುತಿಸಿ ನಿವೇಶನ ನೀಡಬೇಕು. ಕಳೆದ ಒಂದು ವರ್ಷದಲ್ಲಿ ಕಾಮಿಕ ಕಲ್ಯಾಣ ಮಂಡಳಿಯಿಂದ ಕಾರ್ಮಿಕರಿಗಾಗಿ ನೀಡುತ್ತಿರುವ ಲ್ಯಾಪ್‍ಟ್ಯಾಪ್ ಖರೀದಿ, ಮಹಿಳೆಯರಿಗಾಗಿ ಪ್ಯಾಡ್ ಖರೀದಿ, ಆಸ್ಪತ್ರೆಗಳ ಮೂಲಕ ವೈದ್ಯಕೀಯ ತಪಾಸಣೆ, ಮತ್ತು ಇತ್ತೀಚೆಗೆ ಆರ್ಯುವೇದ ಕಂಪನಿಯಿಂದ ನೀಡಿದ ಪೌಷ್ಟಿಕಾಂಶ ಕಿಟ್ ಖರೀದಿಯಲ್ಲಿ ಬಾರಿ ಅವ್ಯವಹಾರ ಮಾಡಲಾಗಿದ್ದು, ವಾಸ್ತವ ದರಕ್ಕಿಂತ ಹೆಚ್ಚಿನ ದರದಲ್ಲಿ ಖರೀದಿಸಿದ್ದು, ನೂರಾರು ಕೋಟಿ ಅವ್ಯವಹಾರ ಇಲಾಖೆ ಮಾಡಿದೆ ಎಂದು ಆರೋಪಿಸಿದರು.

ಈಗ ಸ್ಕೂಲ್ ಕಿಟ್ ಬರಲು ಸಿದ್ಧವಾಗಿದ್ದು, ಇದರ ಬಗ್ಗೆಯೂ ತನಿಖೆಯಾಗಬೇಕು. ಜಿಲ್ಲೆಯಲ್ಲಿ ಖಾಲಿ ಇರುವ ಕಾರ್ಮಿಕ ನಿರೀಕ್ಷಕರುಗಳ ನೇಮಕಾತಿ ಕೂಡಲೇ ಮಾಡಬೇಕು. ಈ ಕೂಡಲೇ ಕಾರ್ಮಿಕರ ಮಕ್ಕಳಿಗೆ ನೀಡುತ್ತಿರುವ ವಿದ್ಯಾರ್ಥಿವೇತನವನ್ನು ಬಿಡುಗಡೆ ಮಾಡಬೇಕು ಎಂದು ಹೋರಾಟಗಾರರು ಎಚ್ಚರಿಸಿದ್ದು, ಬೇಡಿಕೆ ಈಡೇರದಿದ್ದಲ್ಲಿ. ಇಡೀ ರಾಜ್ಯದಲ್ಲಿ ಕಾರ್ಮಿಕ ಕಚೇರಿ ಹಾಗೂ ಎಲ್ಲಾ ಜನಪ್ರತಿನಿಧಿಗಳ ಮನೆಯ ಮುಂದೆ ಅನಿರ್ಧಿಷ್ಟಾವಧಿ ಹೋರಾಟ ಮಾಡುವುದಾಗಿ ಒಕ್ಕೂಟ ಎಚ್ಚರಿಸಿದೆ.

ಪ್ರತಿಭಟನೆಯಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಜೆ. ಸಂಜಯ್‍ಕುಮಾರ್, ಪ್ರಮುಖರಾದ ಜಿ.ಕೆ.ಸುಂದರ್, ಆರ್ಮುಗಂ, ಕೆ.ಗೋಪಿ, ಪ್ರಕಾಶ್ ಹುಣಸವಳ್ಳಿ ಮತ್ತಿತರರು ಇದ್ದರು.