ತುಂಗಭದ್ರಾ ಜಲಾಶಯದಿಂದ ಎಡದಂಡೆ ನಾಲೆಗೆ ಡಿ. 20ರವರೆಗೆ ನೀರು ಹರಿಸಬೇಕೆಂದು ಒತ್ತಾಯಿಸಿ ತುಂಗಭದ್ರಾ ಜಲಾಶಯ ರೈತ ಒಕ್ಕೂಟ ಹೋರಾಟ ಸಮಿತಿ ನೇತೃತ್ವದಲ್ಲಿ ಮಂಗಳವಾರ ನಗರದ ಮಿನಿವಿಧಾನಸೌಧ ಕಚೇರಿ ಮುಂದೆ ಅನಿರ್ದಿಷ್ಠಾವಧಿ ಧರಣಿ ಸತ್ಯಾಗ್ರಹ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಸಿಂಧನೂರು

ತುಂಗಭದ್ರಾ ಜಲಾಶಯದಿಂದ ಎಡದಂಡೆ ನಾಲೆಗೆ ಡಿ. 20ರವರೆಗೆ ನೀರು ಹರಿಸಬೇಕೆಂದು ಒತ್ತಾಯಿಸಿ ತುಂಗಭದ್ರಾ ಜಲಾಶಯ ರೈತ ಒಕ್ಕೂಟ ಹೋರಾಟ ಸಮಿತಿ ನೇತೃತ್ವದಲ್ಲಿ ಮಂಗಳವಾರ ನಗರದ ಮಿನಿವಿಧಾನಸೌಧ ಕಚೇರಿ ಮುಂದೆ ಅನಿರ್ದಿಷ್ಠಾವಧಿ ಧರಣಿ ಸತ್ಯಾಗ್ರಹ ನಡೆಸಲಾಯಿತು.

ಧರಣಿಗೆ ಬೆಂಬಲಿಸಿ ಭಾಗವಹಿಸಿದ್ದ ವೆಂಕಟಗಿರಿ ಕ್ಯಾಂಪಿನ ಸದಾನಂದ ಶರಣರು ಮಾತನಾಡಿ, ಮುಖ್ಯಮಂತ್ರಿಗಳು ಆಂಧ್ರದ ಸಿಎಂ ಜೊತೆಗೆ ಸಮಾಲೋಚನೆ ನಡೆಸಿ ಆಂಧ್ರ ಪಾಲಿನ ನೀರು ಬಳಸಿಕೊಳ್ಳಲು ಒಪ್ಪಿಗೆ ಪಡೆದು ರೈತರಿಗೆ ಡಿ.20ರವರೆಗೆ ನೀರು ಬಿಡಬೇಕು. ಇಲ್ಲದಿದ್ದರೆ ಅ.30ರಂದು ಸಿಂಧನೂರಿನಿಂದ ಅಂಬಾಮಠದವರೆಗೆ ಪಾದಯಾತ್ರೆ ನಡೆಸಿ, ಸಿಎಂ ಅವರಿಗೆ ಘೇರಾವ್ ಹಾಕಬೇಕಾಗುತ್ತದೆ. ಈ ಹೋರಾಟದ ಜೊತೆ ಸದಾ ನಾವಿರುತ್ತೇನೆ ಎಂದು ಹೇಳಿದರು.

ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಅಮೀನಪಾಷಾ ದಿದ್ದಿಗಿ ಮಾತನಾಡಿ, ಅಕ್ರಮ ನೀರಾವರಿ ತಡೆಯುವಂತೆ ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು ಮತ್ತು ತಹಸೀಲ್ದಾರ್ ಅವರಿಗೆ ಗಮನ ಸೆಳೆದಿದ್ದೇವೆ. ಆದರೆ ಅಕ್ರಮ ಪೈಪ್‌ಗಳನ್ನು ತೆರವುಗೊಳಿಸಿಲ್ಲ. ಕೇಂದ್ರ ಸರ್ಕಾರ ಕಾರ್ಪೋರೇಟ್ ಕಂಪನಿಗಳ ರು.55 ಸಾವಿರ ಕೋಟಿ ಸಾಲಮನ್ನಾ ಮಾಡುತ್ತದೆ. ಜೊತೆಗೆ ತೆರಿಗೆ ವಿನಾಯಿತಿಯನ್ನು ನೀಡುತ್ತದೆ. ಬರಗಾಲಕ್ಕೆ ತುತ್ತಾಗಿರುವ, ಬೆಳೆಹಾನಿ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಮಾತ್ರ ರು.2500 ಪರಿಹಾರದ ಹೆಸರಿನಲ್ಲಿ ಭಿಕ್ಷೆ ಹಾಕುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೃಷಿ ಚಟುವಟಿಕೆಗಳಿಗೆ ಪ್ರತಿದಿನ 12 ಗಂಟೆಗಳ ಕಾಲ ಸಮರ್ಪಕ ವಿದ್ಯುತ್ ಪೂರೈಸಬೇಕು. ಫಸಲ್ ಬಿಮಾ ಯೋಜನೆಯಡಿ ಬಾಕಿ ಇರುವ ಬೆಳೆ ವಿಮೆ ಹಣ ಕೂಡಲೇ ಬಿಡುಗಡೆ ಮಾಡಬೇಕು. 2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ನಷ್ಟ ಪರಿಹಾರ ಪ್ರತಿ ಎಕರೆಗೆ ರು.50 ಸಾವಿರ ನಿಗದಿಗೊಳಿಸಿ ಕೂಡಲೇ ಬಿಡುಗಡೆಗೊಳಿಸಬೇಕು. ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹವಾಗಿರುವ 30 ಟಿಎಂಸಿ ಹೂಳನ್ನು ತೆರವುಗೊಳಿಸಬೇಕು. ನವಲಿ ಸಮಾನಾಂತರ ಜಲಾಶಯ ನಿರ್ಮಾಣ ಕಾರ್ಯ ತ್ವರಿತಗೊಳಿಸಬೇಕು. ಭತ್ತದ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಲ್‌ಗೆ ರು.5 ಸಾವಿರಕ್ಕೆ ಹೆಚ್ಚಿಸಬೇಕು. ಪೋತ್ನಾಳ ಹಿರೇಹಳ್ಳಕ್ಕೆ ಜನ-ಜಾನುವಾರುಗಳು ಕುಡಿಯಲು ಮಸ್ಕಿ ಎಸ್ಕೇಪ್ ಮೂಲಕ ನೀರು ಹರಿಸಬೇಕು. ಮುಖ್ಯಕಾಲುವೆ ಮತ್ತು ಉಪಕಾಲುವೆಯ ಅಕ್ರಮ ನೀರಾವರಿಯನ್ನು ಶೀಘ್ರವಾಗಿ ತಡೆಗಟ್ಟಬೇಕು. ತುಂಗಭದ್ರಾ ಜಲಾಶಯ ರೈತ ಒಕ್ಕೂಟ ಹೋರಾಟ ಸಮಿತಿಯ ಪ್ರಧಾನ ಸಂಚಾಲಕರಾದ ಬಸವರಾಜ ಗೋಡಿಹಾಳ ಮತ್ತು ನಿರುಪಾದಿ ಕೆ.ಗೋಮರ್ಸಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ರೈತ ಮುಖಂಡರಾದ ಮಾಟೂರು ವೆಂಕನಗೌಡ, ಶರಣೇಗೌಡ ಗೊರೇಬಾಳ, ಸಿದ್ದನಗೌಡ, ಅಯ್ಯಪ್ಪ ನಾಯಕ, ಶಿವರಾಜ ಸಾಸಲಮರಿ, ಹನುಮಂತ ಹಂಚಿನಾಳ, ಬಸವರಾಜ ಹಂಚಿನಾಳ, ದುರುಗಪ್ಪ ಗುಡಗಲದಿನ್ನಿ, ಸಕ್ರಿ ಶರಣಪ್ಪ, ಮಲ್ಲಿಕಾರ್ಜುನ ಭಂಗಿ, ಅಯ್ಯಪ್ಪ ಬನ್ನಿಗನೂರು, ಮಲ್ಲಿಕಾರ್ಜುನಗೌಡ, ಯಮನೂರಪ್ಪ, ಶಿವನಗೌಡ ಗುಡದೂರು, ಗೋವಿಂದರೆಡ್ಡಿ, ಛತ್ರಪ್ಪ ಕುರುಕುಂದಿ, ಶಿವರಾಜ ಪಾಟೀಲ್ ಗುಂಜಳ್ಳಿ, ಪರಶುರಾಮ ಮಲ್ಲಾಪುರ, ತಿಮ್ಮಣ್ಣ ರಾಮತ್ನಾಳ ಸೇರಿದಂತೆ ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು.