ಸಾರಾಂಶ
ಕಾನೂನು ತೊಡಕುಗಳ ನಿವಾರಣೆಗಾಗಿ ಒತ್ತಾಯಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಾರ್ಯಾಲಯದ ಮೂಲಕ ಕಂದಾಯ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಕೊಪ್ಪಳ
ಬಗರ್ ಹುಕುಂ ಬಡ ಸಾಗುವಳಿದಾರರಿಗೆ ಭೂ ಮಂಜೂರಾತಿಯ ತಿರಸ್ಕೃತ ಅರ್ಜಿಗಳ ಪುನಃ ಪರಿಶೀಲನೆಯೊಂದಿಗೆ ಮಂಜೂರಾತಿ ನೀಡಲು ಅಡ್ಡಿಯಾಗಿರುವ ಕಾನೂನು ತೊಡಕುಗಳ ನಿವಾರಣೆಗಾಗಿ ಒತ್ತಾಯಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಾರ್ಯಾಲಯದ ಮೂಲಕ ಕಂದಾಯ ಸಚಿವರಿಗೆ ಮನವಿ ಸಲ್ಲಿಸಲಾಯಿತು.ಭೂ ಮಂಜೂರಾತಿಗಾಗಿ ಹಾಕಿದವರ ಅರ್ಜಿ ತಿರಸ್ಕೃತಗೊಂಡಿದ್ದು, ಇದಕ್ಕೆ ಅನೇಕ ಕಾರಣ ನೀಡಲಾಗುತ್ತಿದೆ. ಇದೇ ಭೂಮಿಗಳಲ್ಲಿ ಭೂರಹಿತ ಜನರು ಕಷ್ಟಪಟ್ಟು ಹಸನುಗೊಳಿಸಿಕೊಂಡು ಬದುಕು ಕಟ್ಟಿಕೊಂಡಿದ್ದಲ್ಲದೆ ನಮ್ಮೆಲ್ಲರಿಗೂ ಆಹಾರದ ಉತ್ಪಾದನೆಯನ್ನೂ ಮಾಡುತ್ತಿದ್ದಾರೆ. ಹಲವು ವಿಧದ ಭೂಮಿಗಳು ಸರ್ಕಾರದ ದೃಷ್ಟಿಯಲ್ಲಿ ಯೋಗ್ಯವಲ್ಲದ ಭೂಮಿಗಳಾಗಿರಬಹುದು ಆದರೆ ಈ ಭೂಮಿಗಳಲ್ಲೇ ಲಕ್ಷಾಂತರ ಬಡ ಜನರು ದುಡಿಯುತ್ತಾ ಸ್ವಾಭಿಮಾನಿ ಬದುಕು ಕಟ್ಟಿಕೊಂಡಿದ್ದಾರೆ. ಅರ್ಜಿಗಳ ತಿರಸ್ಕಾರ ಎಂಬುದು ಜನರ ನಿದ್ದೆ ಕೆಡಿಸಿದೆಯಲ್ಲದೆ ಜನರ ಬದುಕುವ ಹಕ್ಕನ್ನೇ ತಿರಸ್ಕರಿಸಿದಂತಾಗಿದೆ ಎಂದು ಹೋರಾಟ ಸಮಿತಿಯವರು ಆಕ್ರೋಶ ವ್ಯಕ್ತಪಡಿಸಿದರು.
ಈ ತುಂಡು ಭೂಮಿ ಅವರ ಕುಟುಂಬಗಳಿಗೆ ಜೀವನಾಧಾರವಾಗಿದೆ. ದಶಕಗಳ ಕಾಲದಿಂದಲೂ ಬದುಕಿಗೆ ಆಸರೆಯಾಗಿದ್ದ ಭೂಮಿಗಳನ್ನೇ ನಂಬಿ ಅರ್ಜಿ ಸಲ್ಲಿಸಿ ಭೂಮಿಯ ಹಕ್ಕಿಗಾಗಿ ಕಾಯುತ್ತಿದ್ದವರಿಗೆ ನಿರಾಶೆಯ ಸಿಡಿಲು ಬಡಿದಂತಾಗಿದೆ. ಈ ಭೂಮಿಯನ್ನು ಉಳಿಸಿಕೊಳ್ಳುವುದಕ್ಕಾಗಿ ಅದೆಷ್ಟೋ ಹೋರಾಟಗಳನ್ನು ಮಾಡುತ್ತಾ ನೋವನ್ನು ಅನುಭವಿಸಿದ್ದಾರೆ. ಇಷ್ಟೆಲ್ಲ ಕಷ್ಟಪಟ್ಟು ಮಾಡಿಕೊಂಡು ಬಂದ ಜನರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತಿದೆ ಎಂದರು.ಸರ್ಕಾರ ಬಡವರಿಗೆ ಭೂಮಿ-ವಸತಿ ಹಕ್ಕು ಮಾನ್ಯತೆ ಮಾಡಿ ಮಂಜೂರಾತಿ ನೀಡಲು ಭೂಮಿಗಳಿಗೆ ಇರಬೇಕಾದ ಮಾನದಂಡಗಳನ್ನು ಕಾನೂನು ತೊಡಕುಗಳನ್ನು ತಿದ್ದುಪಡಿ ಮಾಡುವ ಮೂಲಕ ಜನರಿಗೆ ಭೂಮಿಯ ಹಕ್ಕು ದೊರಕಿಸಿಕೊಡಬೇಕೆಂದರು.
ಈ ಸಂದರ್ಭ ಅಲ್ಲಮಪ್ರಭು ಬೆಟದೂರು, ಕೆ.ಬಿ. ಗೋನಾಳ, ಕೆ. ದುರುಗೇಶ ಬರಗೂರು ಸೇರಿದಂತೆ ಹಲವರು ಇದ್ದರು.