ಹಳಿಯಾಳ ಕುಡಿವ ನೀರಿನ ಸಮಸ್ಯೆ ಬಗೆಹರಿಸಲು ಆಗ್ರಹ

| Published : Aug 01 2025, 12:30 AM IST

ಹಳಿಯಾಳ ಕುಡಿವ ನೀರಿನ ಸಮಸ್ಯೆ ಬಗೆಹರಿಸಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಭೀಕರವಾಗಿ ಬಾಧಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕು

ಹಳಿಯಾಳ: ಪಟ್ಟಣಕ್ಕೆ ಭೀಕರವಾಗಿ ಬಾಧಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಹಳಿಯಾಳ ಪುರಸಭೆಯ ಆಡಳಿತ, ಪ್ರತಿಪಕ್ಷ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

ಗುರುವಾರ ಪುರಸಭೆಯಲ್ಲಿ ಕರೆದ ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯೇ ಪ್ರಮುಖವಾಗಿ ಚರ್ಚೆಗೊಳಗಾಯಿತು.

ಈ ದಿಸೆಯಲ್ಲಿ ಕುಡಿಯುವ ನೀರು ಪೂರೈಸಲು ಎದುರಾಗುವ ಸಮಸ್ಯೆಗಳು, ಹಾಗೂ ಅಮೃತ್-2 ಯೋಜನೆಯಲ್ಲಿ ನಡೆದಿರುವ ಕುಡಿಯುವ ನೀರಿನ ಕಾಮಗಾರಿಯ ಸಮಗ್ರ ಚರ್ಚೆ ನಡೆಸಲು ವಿಶೇಷ ಸಭೆಯನ್ನು ಕರೆಯಬೇಕೆಂದು ಆಗ್ರಹಿಸಲಾಯಿತು.

ಆಡಳಿತ ಪಕ್ಷ ಕಾಂಗ್ರೆಸ್, ಪ್ರತಿಪಕ್ಷ ಬಿಜೆಪಿ ಸದಸ್ಯರು ಪಟ್ಟಣಕ್ಕೆ ದಿನಂಪ್ರತಿ ಎದುರಾಗುತ್ತಿರುವ ಕುಡಿಯುವ ನೀರಿನ ಸಮಸ್ಯೆ, ಸಾರ್ವಜನಿಕರ ಪರದಾಟ, ನೀರಿಗಾಗಿ ಜಾಗರಣೆ ಮಾಡುತ್ತಿರುವ ಜನರ ದುಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.

ವಿಶ್ವಾಸ ಕಳೆದುಕೊಂಡ ಪುರಸಭೆ:

ಮೊದಲಿಗೆ ನಾಮನಿರ್ದೇಶಿತ ಸದಸ್ಯ ಸತ್ಯಜಿತ ಗಿರಿ ಕುಡಿಯುವ ನೀರಿನ ಸಮಸ್ಯೆ ಪ್ರಸ್ತಾಪಿಸಿದರು. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ, ಪುರಸಭೆ ಹಾಗೂ ನಮ್ಮ ಮೇಲೆ ಸಾರ್ವಜನಿಕರು ವಿಶ್ವಾಸ ಕಳೆದುಕೊಂಡಿದ್ದಾರೆ. ಪುರಸಭೆ ಹೇಳುವ ವಿದ್ಯುತ್ ಸಮಸ್ಯೆ, ಪೈಪ್‌ ಒಡೆದಿದೆ ಎಂದು ಹೇಳುವ ಕಾರಣಗಳನ್ನು ಯಾರೂ ನಂಬುತ್ತಿಲ್ಲ. ಹಬ್ಬದ ಸಂದರ್ಭದಲ್ಲಿ ನೀರು ಪೂರೈಸದಿದ್ದರೆ ಹೇಗೆ? ಜನರು ರೊಚ್ಚಿಗೇಳುವುದು ಸಹಜ ಎಂದರು.

ಪುರಸಭೆ ನಿಕಟಪೂರ್ವ ಅಧ್ಯಕ್ಷ ಅಜರ ಬಸರಿಕಟ್ಟಿ ಮಾತನಾಡಿ, ಜನರ ಪ್ರಶ್ನೆಗಳಿಗೆ ಉತ್ತರಿಸಲು ನಮಗೆ ಆಗುತ್ತಿಲ್ಲ. ನೀರು ಪೂರೈಕೆ ವಿಭಾಗ, ಪಟ್ಟಣಕ್ಕೆ ಮಂಜೂರಾದ ಅಮೃತ-2 ಯೋಜನೆಯಲ್ಲಿ ನಡೆದಿರುವ ಕುಡಿಯುವ ನೀರಿನ ಕಾಮಗಾರಿಯ ಬಗ್ಗೆ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ತಂತ್ರಜ್ಞರ ವಿಶೇಷ ಸಭೆ ಕರೆಯಬೇಕೆಂದು ಆಗ್ರಹಿಸಿದರು. ಸದಸ್ಯರಾದ ಫಯಾಜ್ ಶೇಖ್, ಬಿಜೆಪಿ ಸದಸ್ಯ ಸಂತೋಷ ಘಟಕಾಂಬ್ಳೆ, ರಾಜೇಶ್ವರಿ ಹಿರೇಮಠ, ಶಾಂತಾ ಹಿರೇಕರ ಸೇರಿದಂತೆ ಇತರ ಸದಸ್ಯರು ಮಾತನಾಡಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಆಗ್ರಹಿಸಿದರು

ಮಲಪ್ರಭದಿಂದ ನೀರು ಬರುತ್ತಾ?:

ಸದಸ್ಯ ಸುರೇಶ ತಳವಾರ ಮಾತನಾಡಿ, ನೆರೆಯ ಅಳ್ನಾವರ ಪಟ್ಟಣಕ್ಕೆ ದಿನದ 24 ಗಂಟೆ ನೀರು ಪೂರೈಕೆಯಾಗುತ್ತಿದೆ. ಅಳ್ನಾವರಕ್ಕೆ ಮಲಪ್ರಭದಿಂದ ನೀರು ಬರುತ್ತದೆಯೇ ಎಂದು ಮುಖ್ಯಾಧಿಕಾರಿಯನ್ನು ಪ್ರಶ್ನಿಸಿದರು. ಅಳ್ನಾವರ, ಹಳಿಯಾಳಕ್ಕೂ ದಾಂಡೇಲಿ ಕಾಳಿ ನದಿಯಿಂದಲೇ ನೀರು ಬರುತ್ತದೆ. ಆದರೆ ಅಳ್ನಾವರಕ್ಕೆ 24 ಗಂಟೆ ನೀರು ಪೂರೈಕೆಯಾದರೆ, ಹಳಿಯಾಳಕ್ಕೆ ಆಗುತ್ತಿಲ್ಲ ಏಕೆ? ಅಳ್ನಾವರಕ್ಕೆ ವಿದ್ಯುತ್ ಸಮಸ್ಯೆಯಾಗಲಿ ಪೈಪ್‌ ಒಡೆಯುವ ಸಮಸ್ಯೆಯೇ ಎದುರಾಗಲ್ಲ. ಆದರೆ ಹಳಿಯಾಳಕ್ಕೆ ಏಕೆ ಎದುರಾಗುತ್ತದೆ ಎಂದು ಪ್ರಶ್ನಿಸಿದರು. ಸದಸ್ಯರ ಅಭಿಪ್ರಾಯಗಳನ್ನು ಆಲಿಸಿದ ಮುಖ್ಯಾಧಿಕಾರಿ, ನೀರಿನ ಸಮಸ್ಯೆ ಬಗ್ಗೆ ಚರ್ಚಿಸಲು ವಿಶೇಷ ಸಭೆ ಕರೆಯುವುದಾಗಿ ತಿಳಿಸಿದರು.

ಸಭಾತ್ಯಾಗ:

ಕುಡಿಯುವ ನೀರಿನ ಚರ್ಚೆ ಆರಂಭಗೊಳ್ಳುವುದಕ್ಕಿಂತ ಮೊದಲು ಎಂದಿನಂತೆ ಸಭೆ ಆರಂಭಗೊಂಡಿತು. ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸದೇ ರಾಜಕಾರಣಿಯೊಬ್ಬರ ನಿರ್ದೇಶನದಂತೆ ಬಿನ್ ಶೇತ್ಕಿ (ಎನ್.ಎ. ಬಡಾವಣೆ) ಪ್ರಕರಣವೊಂದಕ್ಕೆ ಪರವಾನಗಿ ನೀಡಿದ ವಿಷಯ ಸಭೆಯಲ್ಲಿ ಪ್ರಸ್ತಾಪವಾಗಿ ಸದಸ್ಯರನ್ನು ಕೆರಳಿಸಿತು. ಪ್ರತಿಪಕ್ಷ ಸದಸ್ಯ ಸಂತೋಷ ಘಟಕಾಂಬ್ಳೆ ಆಡಳಿತ ಪಕ್ಷದ ಕಾರ್ಯವೈಖರಿ ಖಂಡಿಸಿದರು. ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಒಪ್ಪಿಗೆ ಪಡೆಯದೇ ಅನುಮತಿ ನೀಡುವುದು ತಪ್ಪೆಂದು ವಾದಿಸಿದರು. ಆದರೆ ಅಧ್ಯಕ್ಷರು ಉತ್ತರಿಸದೇ ಮೌನಕ್ಕೆ ಶರಣಾದರೆ, ಉಪಾಧ್ಯಕ್ಷೆ ನೀಡಿದ ಅಸಮರ್ಪಕ ಸಮರ್ಥನೆ ಮಾಡಿಕೊಂಡರು. ಇದನ್ನು ಕೇಳಿ ಕೆಂಡಾಮಂಡಲರಾದ ಆಡಳಿತ ಕಾಂಗ್ರೆಸ್ ಪಕ್ಷದ ಸದಸ್ಯರು, ನಾಮನಿರ್ದೇಶಿತ ಸದಸ್ಯರು ಸಭಾ ತ್ಯಾಗ ಮಾಡಿದರು.

ಅರ್ಧಗಂಟೆಗೂ ಹೆಚ್ಚು ಸಮಯ ಸಭೆ ಸ್ಥಗಿತಗೊಂಡಿತು. ನಂತರ ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ ಸಭಾ ತ್ಯಾಗ ಮಾಡಿದವರ ಮನವೊಲಿಸಿ ಕರೆತಂದರು. ಸಭೆ ಮುಂದುವರಿಸಿದರು.