ಜೂನ್ ತಿಂಗಳಲ್ಲೇ ಮೈಷುಗರ್ ಆರಂಭಿಸಲು ಆಗ್ರಹ

| Published : May 09 2025, 12:33 AM IST

ಸಾರಾಂಶ

ಜಿಲ್ಲಾ ವ್ಯಾಪ್ತಿಯಲ್ಲಿ ೧೦ ಲಕ್ಷ ಟನ್ ಕಬ್ಬು ಲಭ್ಯವಿದೆ. ೫ ಲಕ್ಷ ಟನ್ ಕಬ್ಬು ಒಪ್ಪಿಗೆಯಾಗಿದೆ. ಕಳೆದ ಡಿಸೆಂಬರ್ ೨೪ರಂದು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ರೈತ ಮುಖಂಡರ ಸಭೆಯಲ್ಲಿ ಜೂನ್ ಮೊದಲ ವಾರದಲ್ಲಿ ಕಾರ್ಖಾನೆ ಆರಂಭಿಸಲು ತೀರ್ಮಾನಿಸಲಾಗಿತ್ತು. ಈ ಮಧ್ಯೆ ಏಪ್ರಿಲ್‌ನಲ್ಲಿ ಕಾರ್ಖಾನೆ ಅಧ್ಯಕ್ಷರು ರೈತರೊಂದಿಗೆ ಸಭೆ ನಡೆಸಿ ಜೂನ್ ಕೊನೆಯ ಭಾಗದಲ್ಲಿ ಪ್ರಾರಂಭ ಮಾಡುವುದಾಗಿ ಹೇಳುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಜೂನ್ ತಿಂಗಳಲ್ಲೇ ಪ್ರಾರಂಭಿಸುವಂತೆ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.

ಕಾರ್ಖಾನೆಯ ಆವರಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಂಚಿನ ಪ್ರತಿಮೆ ಅನಾವರಣಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತ ಮುಖಂಡರಿಂದ ಅಹವಾಲು ಸ್ವೀಕರಿಸಿದರು.

ರೈತ ಮುಖಂಡರಾದ ಸುನಂದಾ ಜಯರಾಂ ಮಾತನಾಡಿ, ಜಿಲ್ಲಾ ವ್ಯಾಪ್ತಿಯಲ್ಲಿ ೧೦ ಲಕ್ಷ ಟನ್ ಕಬ್ಬು ಲಭ್ಯವಿದೆ. ೫ ಲಕ್ಷ ಟನ್ ಕಬ್ಬು ಒಪ್ಪಿಗೆಯಾಗಿದೆ. ಕಳೆದ ಡಿಸೆಂಬರ್ ೨೪ರಂದು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ರೈತ ಮುಖಂಡರ ಸಭೆಯಲ್ಲಿ ಜೂನ್ ಮೊದಲ ವಾರದಲ್ಲಿ ಕಾರ್ಖಾನೆ ಆರಂಭಿಸಲು ತೀರ್ಮಾನಿಸಲಾಗಿತ್ತು. ಈ ಮಧ್ಯೆ ಏಪ್ರಿಲ್‌ನಲ್ಲಿ ಕಾರ್ಖಾನೆ ಅಧ್ಯಕ್ಷರು ರೈತರೊಂದಿಗೆ ಸಭೆ ನಡೆಸಿ ಜೂನ್ ಕೊನೆಯ ಭಾಗದಲ್ಲಿ ಪ್ರಾರಂಭ ಮಾಡುವುದಾಗಿ ಹೇಳುತ್ತಿದ್ದಾರೆ. ಇದು ಶೋಚನೀಯ ವಿಷಯ ಎಂದರು.

ಪ್ರಸಕ್ತ ಸಾಲಿನಲ್ಲಿ ೪ ರಿಂದ ೫ ಲಕ್ಷ ಟನ್ ಕಬ್ಬು ಅರೆಯುತ್ತೇವೆ. ನವೆಂಬರ್-ಡಿಸೆಂಬರ್‌ನಲ್ಲಿ ಕಾರ್ಖಾನೆ ನಿಲ್ಲಿಸುತ್ತೇವೆ ಎಂದು ಹೇಳಲಾಗುತ್ತಿದೆ. ಇದೂ ರೈತರಿಗೆ ಆತಂಕಕಾರಿ ವಿಷಯವಾಗಿದೆ. ಪ್ರಸ್ತುತ ಕಾರ್ಖಾನೆಯನ್ನು ಆರಂಭಿಸುವ ಯಾವುದೇ ಸೂಚನೆಯೂ ಕಂಡುಬರುತ್ತಿಲ್ಲ. ಸರ್ಕಾರಕ್ಕೆ ಸಕ್ಕರೆ ಕಾರ್ಖಾನೆಯೇ ಮೊದಲ ಆದ್ಯತೆ, ಪ್ರಮುಖ ವಿಷಯವಾಗಬೇಕು ಎಂದರು.

ಪ್ರವಾಸೋದ್ಯಮ ಅಭಿವೃದ್ಧಿ ಹೆಸರಿನಲ್ಲಿ ಕೆಆರ್‌ಎಸ್ ಅಣೆಕಟ್ಟೆಗೆ ಧಕ್ಕೆ ತರುವಂತಹ ೩ ಸಾವಿರ ಕೋಟಿ ಯೋಜನೆಯ ಅಮ್ಯೂಸ್‌ಮೆಂಟ್ ಪಾರ್ಕ್ ಯೋಜನೆ, ಹಿನ್ನೀರಿನಲ್ಲಿ ವಿಮಾನಯಾನ ಕ್ರೀಡಾ ಯೋಜನೆ, ಕಾವೇರಿ ಆರತಿ ಯೋಜನೆಯನ್ನು ಕೂಡಲೇ ಕೈಬಿಡಬೇಕು. ಕರೆದಿರುವ ಟೆಂಡರ್ ರದ್ದುಪಡಿಸಬೇಕು. ಡ್ಯಾಂ ಸುರಕ್ಷತೆ ಕಾಯ್ದೆ ಅನ್ವಯ ಅಣೆಕಟ್ಟು ಪ್ರದೇಶಗಳು ಪೂರ್ಣ ನಿಷೇಧಿತ ಪ್ರದೇಶವಾಗಿರುವ ಕಾರಣ ಜನಸಂಪಪರ್ಕ ಯೋಜನೆ ಮಾಡಬಾರದು ಎಂದು ಅಣೆಕಟ್ಟು ವ್ಯಾಪ್ತಿಯ ಗ್ರಾಪಂಗಳು ನಿರ್ಣಯ ಕೈಗೊಂಡಿರುವುದಾಗಿ ತಿಳಿಸಿದರು.

ಈ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಪ್ರವಾಸಿ ಕ್ಷೇತ್ರವಾಗಿರುವುದರಿಂದ ಅಮ್ಯೂಸ್‌ಮೆಂಟ್ ಪಾರ್ಕ್ , ಕಾವೇರಿ ಆರತಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ ಎಂದಾಗ, ಅದಕ್ಕೆ ಅಣೆಕಟ್ಟು ಇರುವ ಪ್ರದೇಶವನ್ನೇ ಆಯ್ಕೆ ಮಾಡಿಕೊಂಡಿರುವುದು ಸರಿಯಲ್ಲ. ಕಾವೇರಿ ನೀರು ಹರಿಯುವ ಬೇರೆ ಎಲ್ಲಿಯಾದರೂ ಮಾಡಿಕೊಳ್ಳುವಂತೆ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದರು.

ಕೊನೆಯಲ್ಲಿ ಮುಖ್ಯಮಂತ್ರಿಗಳು ತೆರಳುವಾಗಿ ಕಾವೇರಿ ಆರತಿ ಬೇಡವೇ ಬೇಡ, ಅಮ್ಯೂಸ್‌ಮೆಂಟ್ ಪಾರ್ಕ್ ಬೇಡವೇ ಬೇಡ. ಕೆಆರ್‌ಎಸ್ ಉಳಿಸಿ, ಮೈಷುಗರ್ ಮುನ್ನಡೆಸಿ ಎಂದು ಘೋಷಣೆ ಕೂಗಿದರು.

ಈ ವೇಳೆ ಕೆ.ಬೋರಯ್ಯ, ಮುದ್ದೇಗೌಡ, ಇಂಡುವಾಳು ಚಂದ್ರಶೇಖರ್, ಕನ್ನಡ ಸೇನೆಯ ಹೆಚ್.ಸಿ.ಮಂಜುನಾಥ, ಟಿ.ಎಲ್.ಕೃಷ್ಣೇಗೌಡ, ಸಿ.ಕುಮಾರಿ ಮತ್ತಿತರರಿದ್ದರು.