ಧರ್ಮಸ್ಥಳದ ಕುರಿತು ಅಪಪ್ರಚಾರ ಖಂಡಿಸಿ ಶಿರಸಿಯಲ್ಲಿ ಪ್ರತಿಭಟನೆ, ಪಾದಯಾತ್ರೆ

| Published : Aug 20 2025, 02:00 AM IST

ಧರ್ಮಸ್ಥಳದ ಕುರಿತು ಅಪಪ್ರಚಾರ ಖಂಡಿಸಿ ಶಿರಸಿಯಲ್ಲಿ ಪ್ರತಿಭಟನೆ, ಪಾದಯಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮಸ್ಥಳ ಕ್ಷೇತ್ರದ ಹೆಸರಿಗೆ ಮಸಿ ಬಳಿಯುವ ಕಾರ್ಯ ಮಾಡುತ್ತಿರುವವರ ವಿರುದ್ಧ ಭಕ್ತರು ಪ್ರತಿಭಟನೆ ನಡೆಸಿದರು. ಶಿರಸಿ ನಗರದ ಮಾರಿಗುಡಿಯಲ್ಲಿ ಮಂಗಳವಾರ ಪೂಜೆ ಸಲ್ಲಿಸಿ ಹೊರಟ ಮಹಿಳೆಯರು, ಮಕ್ಕಳು, ಯುವ ಸಮುದಾಯದವರನ್ನು ಒಳಗೊಂಡ ಪ್ರತಿಭಟನಾ ಮೆವಣಿಗೆಯ ಸಹಾಯಕ ಆಯುಕ್ತರ ಕಚೇರಿ ತನಕ ಬಂದು ಸಭೆಯಾಗಿ ಮಾರ್ಪಟ್ಟಿತು.

ಶಿರಸಿ: ಹಿಂದೂಗಳ ನಂಬಿಕೆಯ ಕ್ಷೇತ್ರವಾದ ಧರ್ಮಸ್ಥಳದ ಬಗ್ಗೆ ಮಸಿ ಬಳಿಯುವ ಕಾರ್ಯ ಮಾಡುತ್ತಿರುವವರ ವಿರುದ್ಧ ನಗರದಲ್ಲಿ ಧರ್ಮಸ್ಥಳದ ಭಕ್ತಾದಿಗಳು ಸಾವಿರ ಸಂಖ್ಯೆಗೂ ಮೀರಿ ಪ್ರತಿಭಟನೆ ನಡೆಸಿದರು.

ನಗರದ ಮಾರಿಗುಡಿಯಲ್ಲಿ ಮಂಗಳವಾರ ಪೂಜೆ ಸಲ್ಲಿಸಿ ಹೊರಟ ಮಹಿಳೆಯರು, ಮಕ್ಕಳು, ಯುವ ಸಮುದಾಯದವರನ್ನು ಒಳಗೊಂಡ ಪ್ರತಿಭಟನಾ ಮೆವಣಿಗೆಯ ಸಹಾಯಕ ಆಯುಕ್ತರ ಕಚೇರಿ ತನಕ ಬಂದು ಸಭೆಯಾಗಿ ಮಾರ್ಪಟ್ಟಿತು.

ಮೆರವಣಿಗೆಯಲ್ಲೂ ಪಾಲ್ಗೊಂಡ ಜೈನ ಮಠದ ಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯ ವರ್ಯ ಸ್ವಾಮೀಜಿ ಮಾತನಾಡಿ, ಜನತೆಯಲ್ಲಿ ತಪ್ಪು ಕಲ್ಪನೆ ಮೂಡಿಸಿ, ಜನರ ನಂಬಿಕೆಯನ್ನು ನಾಶಪಡಿಸುವ ಯತ್ನಕ್ಕೆ ಕೆಲವರು ಕೈ ಹಾಕಿದ್ದಾರೆ. ಈ ಕೃತ್ಯ ನಡೆಸುತ್ತಿರುವವರ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಸತ್ಯ ಹೊರ ಬರಬೇಕಿದೆ. ಧರ್ಮಸ್ಥಳ ಕೇವಲ ಒಂದು ದೇವಸ್ಥಾನ ಮಾತ್ರವಲ್ಲ. ಸರ್ಕಾರ ಮಾಡಬೇಕಾದ ಅನೇಕ ಕಾರ್ಯವನ್ನು ಧರ್ಮಸ್ಥಳ ಕ್ಷೇತ್ರವೇ ಮಾಡುತ್ತಿದೆ ಎಂದರು.

ರುದ್ರದೇವರ ಮಠದ ಶ್ರೀ ಮಲ್ಲಿಜಾರ್ಜುನ ಸ್ವಾಮೀಜಿ ಮಾತನಾಡಿ, ಧರ್ಮಸ್ಥಳದ ಮೇಲೆ ಮಾಡುತ್ತಿರುವ ಆರೋಪ ಹಿಂದೂ ಸಮಾಜದ ಶ್ರದ್ಧಾಕೇಂದ್ರಗಳನ್ನು ಅವಹೇಳನ ಮಾಡಿದಂತೆ. ಇದು ನಿಲ್ಲಬೇಕು. ಹಿಂದೂಗಳೆಲ್ಲ ಒಂದಾಗಬೇಕು ಎಂದರು.

ಉಪೇಂದ್ರ ಪೈ ಮಾತನಾಡಿ, ಹಳ್ಳಿ ಹಳ್ಳಿಗಳಲ್ಲಿ ಸಂಘ ನಿರ್ಮಿಸಿ ಬಡವರ, ಕೂಲಿ ಕಾರ್ಮಿಕರ ಆರ್ಥಿಕ ಪ್ರಗತಿಗೆ ಧರ್ಮಸ್ಥಳ ಆಡಳಿತ ಮಂಡಳಿ ಶ್ರಮಿಸುತ್ತಿದೆ. ಶಿಕ್ಷಕರಿಲ್ಲದ ಶಾಲೆಗಳಿಗೂ ಶ್ರೀ ಕ್ಷೇತ್ರ ಶಿಕ್ಷಕರನ್ನು ನೀಡಿದ ಜೊತೆಗೆ ಶಿಕ್ಷಣ ಕ್ಷೇತ್ರಕ್ಕೂ ಅಪಾರ ಕೊಡುಗೆ ನೀಡುತ್ತಿದೆ. ಇಂತಹ ಕ್ಷೇತ್ರದ ಬಗ್ಗೆ ಅವಹೇಳನ ಜಾಸ್ತಿಯಾಗುತ್ತಿದೆ. ಕ್ಷೇತ್ರದ ಬಗ್ಗೆ ಸಹಿಸದ ಕೆಲ ದುೇೇೇರುಳರು ಕ್ಷೇತ್ರದ ಧಾರ್ಮಿಕ ಭಾವನೆಯನ್ನು ಪರಿವರ್ತನೆ ಮಾಡುವ, ಡಾ. ಡಿ. ವೀರೇಂದ್ರ ಹೆಗ್ಗಡೆ ಕಾರ್ಯಕ್ಕೆ ಅಡೆ ತಡೆ ಮಾಡಿ ಆತ್ಮಸ್ಥೈರ್ಯ ಕುಗ್ಗಿಸುವ ಸಲುವಾಗಿ ಇಂತಹ ಕೃತ್ಯ ನಡೆಸಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.

ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ರಮೇಶ ದುಭಾಶಿ, ಕೀಳುಮಟ್ಟದ ಆರೋಪವನ್ನು ಶ್ರೀಕ್ಷೇತ್ರದ ಮೇಲೆ ಮಾಡಿದ್ದಾರೆ. ಹಿಂದೂಗಳ ಧಾರ್ಮಿಕ ಕೇಂದ್ರದ ಮೇಲಿನ ಭಾವನೆಗೆ ಧಕ್ಕೆ ತರುವ ಕಾರ್ಯ ಆಗುತ್ತಿದೆ ಎಂದರು.

ಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯ ಹಾಗೂ ಡಾ. ವೀರೇಂದ್ರ ಹೆಗ್ಗಡೆ ಹೆಸರಿಗೆ ಕಳಂಕ ತರುತ್ತಿರುವ ಕಿಡಿಗೇಡಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಶ್ರೀ ಧರ್ಮಸ್ಥಳ ಭಕ್ತಾಭಿಮಾನಿಗಳ ವೇದಿಕೆ ಶಿರಸಿಯಿಂದ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಸ್ವರ್ಣವಲ್ಲೀ ಮಠದ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ನಳ್ಳಿ, ಸ್ವಾದಿ ದಿಗಂಬರ ಜೈನ ಮಠದ ವ್ಯವಸ್ಥಾಪಕ ಚಂದ್ರರಾಜ ಜೈನ್, ಮಹಾವೀರ ಆಲೂರು, ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಪ್ರಮುಖರಾದ ಉಷಾ ಹೆಗಡೆ, ಸದಾನಂದ ಭಟ್, ಅನಂತಮೂರ್ತಿ ಹೆಗಡೆ, ವಿವೇಕಾನಂದ ರಾಯ್ಕರ್, ಶೋಭಾ ನಾಯ್ಕ, ಸಂಧ್ಯಾ ಕುರ್ಡೇಕರ್, ಆನಂದ ಸಾಲೇರ ಮತ್ತಿತರರು ಪಾಲ್ಗೊಂಡಿದ್ದರು.ಪ್ರತಿಕೃತಿ ದಹನ: ಪಾದಯಾತ್ರೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ನಗರದ ಝೂವೃತ್ತದಲ್ಲಿ ಗಿರೀಶ ಮಟ್ಟಣ್ಣನವರ್, ಮಹೇಶ ಶೆಟ್ಟಿ ತಿಮ್ಮರೋಡಿ, ಸಮೀರ್ ಪ್ರತಿಕೃತಿ ದಹಿಸಿ, ಆಕ್ರೋಶ ವ್ಯಕ್ತಪಡಿಸಿದರು.

ಪಾದಯಾತ್ರೆಯಲ್ಲಿ ಪಾಲ್ಗೊಂಡ ಶ್ರೀಗಳು: ನಗರದ ಮಾರಿಕಾಂಬಾ ದೇವಾಲಯದಿಂದ ಹೊರಟ ಪಾದಯಾತ್ರೆಯಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸುರಿಯುವ ಮಳೆಯನ್ನು ಲೆಕ್ಕಿಸದೇ ಜೈನ ಮಠದ ಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಹಾಗೂ ರುದ್ರದೇವರ ಮಠದ ಶ್ರೀ ಮಲ್ಲಿಜಾರ್ಜುನ ಸ್ವಾಮೀಜಿ ಪಾಲ್ಗೊಂಡಿದ್ದರು.