ಬೇಲೂರು ತಾಲೂಕು ಸಮಾಜ ಕಲ್ಯಾಣಾಧಿಕಾರಿಯ ವರ್ಗಾವಣೆ ಮಾಡಿ

| Published : Sep 03 2024, 01:39 AM IST

ಸಾರಾಂಶ

ಬಿಕ್ಕೋಡು ವಸತಿ ನಿಲಯದಲ್ಲಿ ಧೂಮಪಾನ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ ಮಾನವ ಹಕ್ಕುಗಳ ಒಕ್ಕೂಟದ ಸದಸ್ಯರು ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸರ್ಕಾರ ವಾಹನದ ಜೊತೆ ಎಲ್ಲಾ ರೀತಿಯ ಸೌಲಭ್ಯವನ್ನು ಕೊಟ್ಟಿರುವುದು ವಿದ್ಯಾರ್ಥಿಗಳಿರುವ ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಗಮನಿಸಿ ಎಂದರು.

ಕನ್ನಡಪ್ರಭ ವಾರ್ತೆ ಬೇಲೂರು ಬಿಕ್ಕೋಡು ವಸತಿ ನಿಲಯದಲ್ಲಿ ಧೂಮಪಾನ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ ಮಾನವ ಹಕ್ಕುಗಳ ಒಕ್ಕೂಟದ ಸದಸ್ಯರು ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಅಧ್ಯಕ್ಷ ಹಾಗೂ ಒಕ್ಕೂಟದ ಗೌರವ ಅಧ್ಯಕ್ಷ ಎ ಆರ್‌ ಅಶೋಕ್, ಬಡ ಮಕ್ಕಳು ಹಾಗೂ ಗ್ರಾಮೀಣ ಭಾಗದ ಮಕ್ಕಳು ವಿದ್ಯಾಭ್ಯಾಸ ಮಾಡಲು ಬರುವ ಇಂತಹ ಸ್ಥಳಗಳಲ್ಲಿ ಧೂಮಪಾನ, ಮದ್ಯಪಾನದ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳಿಗೆ ನಾಚಿಕೆ ಆಗಬೇಕು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸರ್ಕಾರ ವಾಹನದ ಜೊತೆ ಎಲ್ಲಾ ರೀತಿಯ ಸೌಲಭ್ಯವನ್ನು ಕೊಟ್ಟಿರುವುದು ವಿದ್ಯಾರ್ಥಿಗಳಿರುವ ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಗಮನಿಸಿ ಎಂದರು. ಹಗರಣಗಳು ಇಷ್ಟೆಲ್ಲಾ ಬೆಳಕಿಗೆ ಬಂದರೂ ಜಾಣಮೌನ ವಹಿಸಿರುವುದು ಏಕೆ, ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಇವರ ವಿರುದ್ಧ ಕ್ರಮ ಕೈಗೊಳ್ಳಲು ಮನವಿ ಮಾಡಲಾಗುವುದು ಎಂದರು.

ಮಾನವ ಹಕ್ಕುಗಳ ಆಯೋಗದ ಜಿಲ್ಲಾಧ್ಯಕ್ಷ ನಿಂಗರಾಜು ಮಾತನಾಡಿ, ಬಡಮಕ್ಕಳ ವಿರುದ್ಧ ಚೆಲ್ಲಾಟವಾಡುತ್ತಿರುವವರ ಮೇಲೆ‌ ಮುಲಾಜಿಲ್ಲದೆ ಅವರ ಮೇಲೆ ಶಾಸಕರು ಕ್ರಮ ಕೈಗೊಳ್ಳಬೇಕು. ಈ ಹಿಂದೆ ಕೆಡಿಪಿ ಸದಸ್ಯರು ಸಮಾಜ ಕಲ್ಯಾಣ ಇಲಾಖೆಯಲ್ಲಿ ಭಾರಿ ಭ್ರಷ್ಟಾಚಾರವಾಗುತ್ತಿರುವ ಬಗ್ಗೆ ಮಾಹಿತಿ ನೀಡಿದರೂ ಸಹ ಇದರ ಬಗ್ಗೆ ಗಮನಹರಿಸಿಲ್ಲ. ಹಾಸ್ಟೆಲ್‌ಗಳಿಗೆ ಯಾವ ರೀತಿ ಬೀಡಿ ಸಿಗರೇಟ್ ಬರುತ್ತದೆ ಎಂದು ಗಮನಹರಿಸದೆ ನಿರ್ಲಕ್ಷ್ಯ ತೋರಿದ್ದಾರೆ. ಅಲ್ಲದೆ ೩ ದಿನಗಳ ಹಿಂದೆ ಆಗಿರುವ ಪ್ರಕರಣವನ್ನು ೧ ವರ್ಷದ ಹಳೆಯದು ಎಂದು ಪ್ರಕರಣ ಮುಚ್ಚಿಹಾಕುವ ಹುನ್ನಾರ ನಡೆಯುತ್ತಿದ್ದು ಕೂಡಲೇ ವಾರ್ಡನ್ ಹಾಗೂ ಸಿಬ್ಬಂದಿಯನ್ನು ಅಮಾನತು ಮಾಡಿದ್ದು ಅದರಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದರು.

ತಾಲೂಕು ಅಧ್ಯಕ್ಷ ಅರುಣ್ ಕುಮಾರ್‌ ಮಾತನಾಡಿ, ಅಪ್ರಾಪ್ತ ಬಾಲಕರು ವಸತಿ ನಿಲಯದಲ್ಲಿ ಧೂಮಪಾನ ಮದ್ಯಪಾನ ಮಾಡುತ್ತಿರುವುದು ಖಂಡನೀಯ. ವಿದ್ಯೆ ಕಲಿಸುವ ಇಂತಹ ಸ್ಥಳಗಳಲ್ಲಿ ದುರ್ಘಟನೆ ನಡೆಯುತ್ತಿದ್ದರೂ ಇದರ ಬಗ್ಗೆ ಎಚ್ಚೆತ್ತುಕೊಳ್ಳದ ಸಮಾಜ ಕಲ್ಯಾಣ ಇಲಾಖೆ ಯಾವ ರೀತಿ ಕೆಲಸ ಮಾಡುತ್ತಿದೆ ಎಂಬುವುದು ನೋಡಿದರೆ ನಾಚಿಕೆಯಾಗುತ್ತದೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ನಡೆಯುತ್ತಿರುವ ಎಲ್ಲಾ ಹಾಸ್ಟೆಲ್‌ಗಳಿಗೂ ಅಡುಗೆಯವರ ಹಾಗೂ ಡಿ ದರ್ಜೆ ನೌಕರರ ಕಪಿಮುಷ್ಟಿಯಲ್ಲಿ ನಡೆಯುತ್ತಿದೆ. ಬಡವರ್ಗದವರು ಹಾಗೂ ಕೂಲಿಕಾರ್ಮಿಕರ ಮಕ್ಕಳೆ ಹೆಚ್ಚಾಗಿ ವಸತಿ ನಿಲಯಗಳನ್ನೇ ಅವಲಂಬಿಸಿರುತ್ತಾರೆ. ಇಂತಹ ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯದಿಂದಾಗಿ ಮಕ್ಕಳ ಭವಿಷ್ಯ ಪಾಡೇನು, ಕೆಲವರನ್ನು ಅಮಾನತು ಮಾಡಿದರೆ ಸಾಲದು. ಇಂತಹ ಅಧಿಕಾರಿಗಳ ಮೇಲೂ ಸಹ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಸದಸ್ಯರಾದ ಶಂಕರ್‌, ವೆಂಕಟೇಶ್, ರತ್ನಾಕರ್‌, ಲಕ್ಷ್ಮಿನಾರಾಯಣ್, ಖಾಸಿಂ, ಹರೀಶ್, ರವಿಂದ್ರನಾಥ್, ಧನಂಜಯ್, ಮುನಿ, ಬಿಜೆಪಿ ನಗರಾಧ್ಯಕ್ಷ ವಿನಯ್ ಸೇರಿದಂತೆ ಇತರರು ಹಾಜರಿದ್ದರು.