ರಾಜ್ಯ ಸರ್ಕಾರ ಒಂದೊಂದು ಹಬ್ಬದ ಸಂದರ್ಭದಲ್ಲಿ ಜನರಿಗೆ ಬೆಲೆ ಏರಿಕೆಯ ಉಡುಗೊರೆ ನೀಡುತ್ತಿದೆ. ಕನ್ನಡ ರಾಜ್ಯೋತ್ಸವ ವೇಳೆ ಹಾಲಿನ ದರ ಹೆಚ್ಚಿಸಿದ ಸರ್ಕಾರ, ದೀಪಾವಳಿ ವೇಳೆ ಬಸ್ ಟಿಕೆಟ್ ದರ ಏರಿಕೆ ಮಾಡಿ ಜನಸಾಮಾನ್ಯರ ಮೇಲೆ ಹೊರೆ ಹಾಕಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಆರೋಪಿಸಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ರಾಜ್ಯ ಸರ್ಕಾರ ಒಂದೊಂದು ಹಬ್ಬದ ಸಂದರ್ಭದಲ್ಲಿ ಜನರಿಗೆ ಬೆಲೆ ಏರಿಕೆಯ ಉಡುಗೊರೆ ನೀಡುತ್ತಿದೆ. ಕನ್ನಡ ರಾಜ್ಯೋತ್ಸವ ವೇಳೆ ಹಾಲಿನ ದರ ಹೆಚ್ಚಿಸಿದ ಸರ್ಕಾರ, ದೀಪಾವಳಿ ವೇಳೆ ಬಸ್ ಟಿಕೆಟ್ ದರ ಏರಿಕೆ ಮಾಡಿ ಜನಸಾಮಾನ್ಯರ ಮೇಲೆ ಹೊರೆ ಹಾಕಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಆರೋಪಿಸಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ ಪ್ರತಿ ಲೀಟರ್ ಹಾಲಿಗೆ ಹೆಚ್ಚುವರಿ ₹7 ನೀಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಸರ್ಕಾರ ತನ್ನ ಬೊಕ್ಕಸದಿಂದ ಹಣ ಭರಿಸಬೇಕು. ಜನರ ಮೇಲೆ ಹೊರೆ ಹಾಕಬಾರದು. ಹಾಲಿನ ದರ ₹12ರಿಂದ ₹15ವರೆಗೆ ಹೆಚ್ಚಿಸುವುದರ ಜೊತೆಗೆ ಬೆಣ್ಣೆ, ಮೊಸರು ಸೇರಿ ಉಪ ಉತ್ಪನ್ನಗಳ ದರವನ್ನೂ ಏರಿಸಲಾಗಿದೆ. ಬಸ್ ಪ್ರಯಾಣ ದರವನ್ನೂ ಹೆಚ್ಚಿಸಿ ಜನರಿಗೆ ತೊಂದರೆ ನೀಡಲಾಗುತ್ತಿದೆ. ಕೂಡಲೇ ಬೆಲೆ ಏರಿಕೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಬೆಲೆ ಏರಿಕೆ ಖಂಡಿಸಿ ಶನಿವಾರ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಬಸ್ ನಿಲ್ದಾಣಗಳಲ್ಲಿ ಡಿ.ಕೆ. ಶಿವಕುಮಾರ್ ಅವರ ಮುಖವಾಡ ಧರಿಸಿ ಬಿಜೆಪಿ ವಿನೂತನ ಪ್ರತಿಭಟನೆ ನಡೆಸಲಿದೆ. ಶಾಸಕರು, ಸಂಸದರು ಹಾಗೂ ಮಾಜಿ ಸಚಿವರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿ, ಪೆಟ್ರೋಲ್, ಡೀಸೆಲ್ ದರ ಏರಿಕೆ ದೇಶಾದ್ಯಂತ ಅನ್ವಯಿಸುವ ವಿಚಾರ. ಕೇಂದ್ರದ ಮೇಲೆ ಆರೋಪ ಮಾಡುವುದು ಸರಿಯಲ್ಲ. ರಾಜ್ಯ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿಲ್ಲ. ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಆರೋಪಿಸಿದರು.
ಮಹಾರಾಷ್ಟ್ರಕ್ಕೆ ಕೃಷ್ಣಾ ನದಿ ನೀರನ್ನು ಭೀಮಾ ನದಿಗೆ ಹರಿಸುವ ವಿಚಾರವಾಗಿ ರಾಜ್ಯ ಸರ್ಕಾರದ ಗಮನ ಸೆಳೆಯಲಾಗುವುದು. ಚಾಲುಕ್ಯ ಉತ್ಸವ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದ್ದರೂ ರಾಜ್ಯ ಸರ್ಕಾರ ಈವರೆಗೆ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿಲ್ಲ ಎಂದರು.ಸುದ್ದಿಗೋಷ್ಠಿಯಲ್ಲಿ ಸತ್ಯನಾರಾಯಣ ಹೇಮಾದ್ರಿ, ಶಿವು ಸುರಪುರ ಉಪಸ್ಥಿತರಿದ್ದರು.