ಸಾರಾಂಶ
ಶಶಿಕಾಂತ ಮೆಂಡೆಗಾರ
ಕನ್ನಡಪ್ರಭ ವಾರ್ತೆ ವಿಜಯಪುರರಾಜ್ಯದ ವಿವಿಧೆಡೆ ಈಗಾಗಲೇ ಧಾಂಗುಡಿ ಇಟ್ಟಿರುವ ಡೆಂಘೀ ಜ್ವರ ಇದೀಗ ಜಿಲ್ಲೆಯಲ್ಲೂ ಆರ್ಭಟಿಸುತ್ತಿದೆ. ಗ್ರಾಮೀಣ ಭಾಗದಲ್ಲಿ ಪ್ರಕರಣಗಳು ಹೆಚ್ಚಾಗಿದ್ದು, ಮಕ್ಕಳು ಮತ್ತು ಮಧ್ಯಮ ವಯಸ್ಕರಲ್ಲಿ ಹೆಚ್ಚು ಕಂಡು ಬಂದಿದೆ. ಸಾಕಷ್ಟು ಕ್ರಮ ಕೈಗೊಂಡರೂ ಹತೋಟಿಗೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ಕಳೆದ 3 ವರ್ಷಗಳಲ್ಲೇ ಈ ಬಾರಿ ಅತೀ ಹೆಚ್ಚು ಡೆಂಘೀ ಜ್ವರ ಪ್ರಕರಣಗಳು ಕಂಡು ಬರುತ್ತಿರುವುದರಿಂದ ಜನರಲ್ಲಿ ಮತ್ತಷ್ಟು ಆತಂಕ ಮೂಡಿಸುವಂತೆ ಮಾಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಾಗೃತಿ ಮೂಡಿಸುವುದು, ರೋಗ ನಿಯಂತ್ರಣಕ್ಕೆ ಪರಿಹಾರೋಪಾಯಗಳನ್ನು ತಿಳಿಸಿದರೂ ಜನರನ್ನು ಬಾಧಿಸುವುದು ನಿಂತಿಲ್ಲ. ಮಳೆಗಾಲದ ಆರಂಭದಲ್ಲೇ ಕಳೆದ ವರ್ಷಕ್ಕಿಂತ ಈ ವರ್ಷ ದುಪ್ಪಟ್ಟು ಪ್ರಮಾಣದಲ್ಲಿ ಕೇಸ್‌ಗಳು ಪತ್ತೆಯಾಗಿವೆ. 171 ಡೆಂಘೀ ಜ್ವರ ಪ್ರಕರಣಗಳು ಪತ್ತೆ:
ಕಳೆದ 3 ವರ್ಷಗಳ ಅಂಕಿಸಂಖ್ಯೆಗಳನ್ನು ಗಮನಿಸಿದಾಗ ಪ್ರಸಕ್ತ ವರ್ಷದಲ್ಲಿ ದುಪ್ಪಟ್ಟು ಪ್ರಕರಣಗಳು ಪತ್ತೆಯಾಗಿವೆ. 2022ರಲ್ಲಿ ಜನವರಿಯಿಂದ ಜೂನ್ ಅಂತ್ಯದವರೆಗೆ 111 ಪ್ರಕರಣಗಳು ಪತ್ತೆಯಾಗಿವೆ. 2023 ಜನವರಿಯಿಂದ ಜೂನ್ ಅಂತ್ಯದವರೆಗೆ ಕೇವಲ 82 ಪ್ರಕರಣಗಳು ಪತ್ತೆಯಾಗಿವೆ. ಆದರೆ, 2024 ಜನವರಿಯಿಂದ ಜೂನ್ ಅಂತ್ಯಕ್ಕೆ ಬರೋಬ್ಬರಿ 171 ಡೆಂಘೀ ಜ್ವರ ಪ್ರಕರಣಗಳು ಬೆಳಕಿಗೆ ಬಂದಿವೆ. ಅಂದರೆ ಕಳೆದ ಬಾರಿಗಿಂತ ಈ ಬಾರಿ ಎರಡರಷ್ಟು ಪ್ರಕರಣಗಳು ಹೆಚ್ಚಾಗಿವೆ. ಪಾಸಿಟಿವಿಟಿ ರೇಟ್ ಕೂಡ ಶೇ.11.79ರಷ್ಟಿರುವುದು ಆತಂಕಕ್ಕೆ ಕಾರಣವಾಗಿದೆ.ಈ ಬಾರಿ ಮಕ್ಕಳು, ಯುವಕರಲ್ಲಿ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿವೆ. 14 ವರ್ಷದೊಳಗಿನ 67 ಮಕ್ಕಳಲ್ಲಿ ಡೆಂಘೀ ಕಾಣಿಸಿಕೊಂಡಿದೆ. 15 ರಿಂದ 45 ವರ್ಷ ವಯಸ್ಸಿನವರಲ್ಲಿ 73 ಪ್ರಕರಣಗಳು ಹಾಗೂ 45 ವರ್ಷ ಮೇಲ್ಪಟ್ಟ ವಯಸ್ಸಿನವರಲ್ಲಿ 31 ಜನರಲ್ಲಿ ಕೇಸ್‌ಗಳು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ 171 ಜನರಿಗೆ ಡೆಂಘೀ ಜ್ವರ ಬಾಧಿಸಿರುವುದು ಗೊತ್ತಾಗಿದೆ.ಗ್ರಾಮೀಣ ಭಾಗದಲ್ಲಿಯೇ ಹೆಚ್ಚು:ಜಿಲ್ಲೆಯಲ್ಲಿ ಈಗಾಗಲೇ ಎಲ್ಲೆಡೆ ಡೆಂಘೀ ಹರಡಿದ್ದು, ಗ್ರಾಮೀಣ ಭಾಗದಲ್ಲಿಯೇ ಹೆಚ್ಚಾಗಿ ಕಂಡು ಬಂದಿದೆ. 171 ಪ್ರಕರಣಗಳಲ್ಲಿ 128 ಗ್ರಾಮೀಣ ಪ್ರದೇಶದಲ್ಲಿ ಕಂಡು ಬಂದಿದ್ದು, ನಗರ ಪ್ರದೇಶದಲ್ಲಿ 43 ಕೇಸ್‌ಗಳು ಪತ್ತೆಯಾಗಿವೆ. ಅದರಲ್ಲಿಯೂ ಹಳೆಯ 5 ತಾಲೂಕುಗಳಲ್ಲಿಯೂ ಡೆಂಘೀ ಕಾಲಿಟ್ಟಿದೆ. ತಾಲೂಕುವಾರು ಗಮನಿಸಿದಾಗ, ವಿಜಯಪುರ ತಾಲೂಕಿನಲ್ಲಿ 56, ಬಸವನ ಬಾಗೇವಾಡಿ 22, ಮುದ್ದೇಬಿಹಾಳ 28, ಇಂಡಿ 40 ಹಾಗೂ ಸಿಂದಗಿ 25 ಪ್ರಕರಣಗಳು ಪತ್ತೆಯಾಗಿದ್ದು, ವಿಜಯಪುರ ತಾಲೂಕಿನಲ್ಲಿಯೇ ಅತೀ ಹೆಚ್ಚು ಕೇಸ್‌ಗಳು ಕಂಡಿವೆ.ನಗರದಲ್ಲಿ ಎಲ್ಲೆಲ್ಲಿ ಡೆಂಘೀ ಹಾವಳಿ?:
ನಗರದ ಗಚ್ಚಿನಕಟ್ಟಿ ಕಾಲೋನಿ, ಬಬಲೇಶ್ವರ ನಾಕಾ, ಪುಲಕೇಶಿ ನಗರ, ರಹೀಂನಗರ, ಮದೀನಾ ನಗರ, ಶಹಾಪೇಟ, ರಾಜಾಜಿನಗರ, ಜಲನಗರ, ಬಸವನಗರ, ಖಾಜಾಅಮೀನ್ ನಗರ, ಸೋಲಾಪುರ ನಾಕಾ, ಕುಂಬಾರ ಓಣಿ, ಲತೀಫ್ ನಗರ, ಟಕ್ಕೆ, ಅಲಅಮೀನ್ ಏರಿಯಾ, ಆದರ್ಶನಗರ, ಲಕ್ಷ್ಮಿನಗರ, ಫಾರೂಕ ನಗರಗಳಲ್ಲಿ ಡೆಂಘೀ ತನ್ನ ಆರ್ಭಟ ಹೆಚ್ಚಿಸಿಕೊಂಡಿದೆ.ಇಡೀ ಜಿಲ್ಲೆಯಾದ್ಯಂತ ಎಲ್ಲ ಕಡೆಗಳಲ್ಲೂ ಡೆಂಘೀ ಸೇರಿದಂತೆ ನಾನಾ ಸಾಂಕ್ರಾಮಿಕ ರೋಗಗಳು ಆವರಿಸುತ್ತಿವೆ. ಇದರಿಂದಾಗಿ ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಆಡಳಿತಗಳು ಎಚ್ಚೆತ್ತುಕೊಂಡು ಆರಂಭದಲ್ಲಿಯೇ ಸೂಕ್ತ ಕ್ರಮಕೈಗೊಳ್ಳಬೇಕಿದೆ. ಆರೋಗ್ಯ ಇಲಾಖೆಯ ಪಿಎಚ್‌ಸಿ, ಸಿಎಚ್‌ಸಿ, ಯುಎಚ್‌ಸಿಗಳಲ್ಲಿ ಸೋಂಕು ತಪಾಸಣೆ, ಸೂಕ್ತ ಚಿಕಿತ್ಸೆ ನೀಡುವ ವ್ಯವಸ್ಥೆ ಆಗಬೇಕಿದೆ. ಇದರ ಜೊತೆಗೆ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಪಂ, ಗ್ರಾಪಂಗಳಿಂದ ಆಯಾ ವ್ಯಾಪ್ತಿಗಳಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸುವುದು, ಫಾಗಿಂಗ್ ಮಾಡುವುದು, ಗಲೀಜು ಸ್ವಚ್ಛಗೊಳಿಸುವುದು ಮುಂತಾದ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ.ತಾಲೂಕುಗಳು-ಪ್ರಕರಣಗಳ ಸಂಖ್ಯೆ
ವಿಜಯಪುರ 56ಬಸವನ ಬಾಗೇವಾಡಿ 22
ಮುದ್ದೇಬಿಹಾಳ 28ಇಂಡಿ 40
ಸಿಂದಗಿ 25ಒಟ್ಟು 171ಪ್ರತಿ ಶುಕ್ರವಾರ ನಗರದಲ್ಲಿ ಹಾಗೂ ಶನಿವಾರ ಗ್ರಾಮೀಣ ಭಾಗದಲ್ಲಿ ಲಾರ್ವಾ ಸರ್ವೆ ಮಾಡುವುದು, ಮನೆಮನೆಗೆ ತೆರಳಿ ತಿಳಿವಳಿಕೆ ಮೂಡಿಸುವ ಮೂಲಕ ಜಿಲ್ಲೆಯಲ್ಲಿ ಡೆಂಘೀ ಹೆಚ್ಚಾಗದಂತೆ ನೋಡಿಕೊಳ್ಳಲಾಗುತ್ತಿದೆ. ಸಂಶಯ ಬಂದವರ ರಕ್ತದ ಮಾದರಿ ಸಂಗ್ರಹಿಸಿ ತಪಾಸಣೆ ಮಾಡಿ ತ್ವರಿತಗತಿಯಲ್ಲಿ ಪತ್ತೆಹಚ್ಚಿ, ಹೆಚ್ಚಿಗೆ ಹರಡದಂತೆ ಕ್ರಮ ಕೈಗೊಳ್ಳಲಾಗಿದೆ.
- ಡಾ.ಬಸವರಾಜ ಹುಬ್ಬಳ್ಳಿ, ಜಿಲ್ಲಾ ಆರೋಗ್ಯಾಧಿಕಾರಿ.ವಿಜಯಪುರದ ಬಹುತೇಕ ಬಡಾವಣೆಗಳಲ್ಲಿ ಮಳೆ ನೀರು ಹರಿದುಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಕೂಡ ಇಲ್ಲವಾಗಿದೆ. ಈ ಕಾರಣದಿಂದಾಗಿ ಎಲ್ಲೆಂದರಲ್ಲಿ ನೀರು ನಿಲ್ಲುತ್ತದೆ. ಹೀಗಾಗಿ ಮಕ್ಕಳಿಗೆ ಹೆಚ್ಚಿನ ಪ್ರಮಾಣದಲ್ಲಿ ಡೆಂಘೀ ಜೊತೆಗೆ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡಿವೆ. ಡೆಂಘೀ ಜ್ವರಕ್ಕೆ ಬೇರೆ ಜಿಲ್ಲೆಗಳಲ್ಲಿ ಜನರು ಬಲಿಯಾಗಿರುವುದನ್ನು ಕೇಳಿ ನಮಗೆಲ್ಲ ಹೆದರಿಕೆಯಾಗುತ್ತಿದೆ. ತಕ್ಷಣವೇ ಆರೋಗ್ಯ ಇಲಾಖೆ ಹಾಗೂ ಮಹಾನಗರ ಪಾಲಿಕೆ ಕ್ರಮ ಕೈಗೊಂಡು, ನಮ್ಮಲ್ಲಿ ಹತೊಟಿಗೆ ತರಬೇಕಿದೆ.-ಶಿವಲಿಂಗಮ್ಮ
ನಗರವಾಸಿ.