ನೋಂದಣಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ

| Published : Jul 09 2024, 12:52 AM IST / Updated: Jul 09 2024, 12:53 AM IST

ನೋಂದಣಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ನಿಗದಿತ ಸಮಯಕ್ಕೆ ಚುನಾವಣಾ ಪ್ರಕ್ರಿಯೆ ಆರಂಭಗೊಳ್ಳದಿದ್ದಾಗ ಜೆಡಿಎಸ್ ಬೆಂಬಲಿತ ನಿರ್ದೇಶಕರು ಕಾರ್ಯನಿರ್ವಹಣಾಧಿಕಾರಿಯನ್ನು ಪ್ರಶ್ನಿಸಿದಾಗ ಚುನಾವಣಾಧಿಕಾರಿಗಳು ಚುನಾವಣೆ ರದ್ದು ಪಡಿಸಿರುವುದನ್ನು ಗಮನಕ್ಕೆ ತಂದಿದ್ದಾರೆ. ಇದರಿಂದ ಆಕ್ರೋಶಗೊಂಡ ಜೆಡಿಎಸ್ ಬೆಂಬಲಿತ ನಿರ್ದೇಶಕರು ಹಾಗೂ ಜೆಡಿಎಸ್ - ಬಿಜೆಪಿ ಮುಖಂಡರು ಸಂಘದ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಹಳ್ಳಿಮಾಳ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆಯಬೇಕಿದ್ದ ಚುನಾವಣೆ ಮುಂದೂಡಿರುವುದನ್ನು ಖಂಡಿಸಿ ಜೆಡಿಎಸ್ - ಬಿಜೆಪಿ, ರೈತ ಮುಖಂಡರು ಹಾಗೂ ಸೊಸೈಟಿ ನಿರ್ದೇಶಕರು ನಗರದ ಕಂದಾಯ ಭವನದಲ್ಲಿರುವ ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ಸಂಘಗಳ ನೋಂದಣಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಹಳ್ಳಿಮಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಎರಡನೇ ಬಾರಿ ಜುಲೈ 8ರಂದು ಚುನಾವಣೆ ನಿಗದಿಯಾಗಿತ್ತು. ಬೆಳಗ್ಗೆಯೇ ಸಂಘದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸಂಘದ ಜೆಡಿಎಸ್ ಬೆಂಬಲಿತ ನಿರ್ದೇಶಕರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ನಿಗದಿತ ಸಮಯಕ್ಕೆ ಆಗಮಿಸಿದರೆ, ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಗೈರಾಗಿದ್ದರು. ಆದರೆ, ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಚುನಾವಣಾಧಿಕಾರಿ ರಮ್ಯಾಶ್ರೀ ಅವರು ಚುನಾವಣೆ ರದ್ದು ಪಡಿಸಿರುವ ಪ್ರಕಟಣೆಯನ್ನು ಸಂಘದ ಕಾರ್ಯನಿರ್ವಹಣಾಧಿಕಾರಿಯ ವಾಟ್ಸ್ಆಪ್ ಗೆ ಕಳುಹಿಸಿ ಗೈರಾಗಿದ್ದಾರೆ. ಅಲ್ಲದೆ, ಆ ಪ್ರಕಟಣೆಯನ್ನು ಅನಾಮಧೇಯ ವ್ಯಕ್ತಿಯೊಬ್ಬರು ಸಂಘದ ನೋಟಿಸ್ ಬೋರ್ಡಿನಲ್ಲಿ ಅಂಟಿಸಿದ್ದಾರೆ.

ನಿಗದಿತ ಸಮಯಕ್ಕೆ ಚುನಾವಣಾ ಪ್ರಕ್ರಿಯೆ ಆರಂಭಗೊಳ್ಳದಿದ್ದಾಗ ಜೆಡಿಎಸ್ ಬೆಂಬಲಿತ ನಿರ್ದೇಶಕರು ಕಾರ್ಯನಿರ್ವಹಣಾಧಿಕಾರಿಯನ್ನು ಪ್ರಶ್ನಿಸಿದಾಗ ಚುನಾವಣಾಧಿಕಾರಿಗಳು ಚುನಾವಣೆ ರದ್ದು ಪಡಿಸಿರುವುದನ್ನು ಗಮನಕ್ಕೆ ತಂದಿದ್ದಾರೆ. ಇದರಿಂದ ಆಕ್ರೋಶಗೊಂಡ ಜೆಡಿಎಸ್ ಬೆಂಬಲಿತ ನಿರ್ದೇಶಕರು ಹಾಗೂ ಜೆಡಿಎಸ್ - ಬಿಜೆಪಿ ಮುಖಂಡರು ಸಂಘದ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಚುನಾವಣಾ ಪ್ರಕ್ರಿಯೆ ನಡೆಸದೆ ಕರ್ತವ್ಯ ಲೋಪ ಎಸಗಿರುವ ರಿಟರ್ನಿಂಗ್ ಅಧಿಕಾರಿ ರಮ್ಯಾಶ್ರೀ ಅವರನ್ನು ಕೂಡಲೇ ಅಮಾನತು ಮಾಡಬೇಕು. ಒಂದು ವಾರದೊಳಗೆ ಚುನಾವಣೆ ನಡೆಸಲು ಇಂದೇ ದಿನಾಂಕ ನಿಗದಿ ಮಾಡಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಬಳಿಕ ಮಾತನಾಡಿದ ಉಪನಿಬಂಧಕರು, ಕರ್ತವ್ಯ ಲೋಪ ಎಸಗಿರುವ ರಮ್ಯಾಶ್ರೀ ವಿರುದ್ಧ ಕಾನೂನು ರೀತಿಯ ಕ್ರಮ ವಹಿಸುತ್ತೇವೆ. ಮಂಜುನಾಥ್ ಅವರನ್ನು ಚುನಾವಣಾಧಿಕಾರಿಯಾಗಿ ನಿಯೋಜಿಸಲಾಗುವುದು. ಮೇಲಧಿಕಾರಿಗಳ ಸಲಹೆ ಪಡೆದು ಮುಂದಿನ ಚುನಾವಣೆ ದಿನಾಂಕ ನಿಗದಿ ಪಡಿಸುವುದಾಗಿ ಹೇಳಿದರು. ಇದನ್ನು ಒಪ್ಪದ ಪ್ರತಿಭಟನಾಕಾರರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಬಮೂಲ್ ನಿರ್ದೇಶಕ ಜಯಮುತ್ತು, ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಪಿ.ಅಶ್ವತ್ಥ್ , ಮುಖಂಡರಾದ ಉಮೇಶ್, ಮಂಜುನಾಥ್, ಸಬ್ಬಕೆರೆ ಶಿವಲಿಂಗಯ್ಯ, ದೊರೆಸ್ವಾಮಿ, ಗೂಳಿಗೌಡ, ಕೃಷ್ಣ, ಸುಗ್ಗಮನಹಳ್ಳಿ ರಾಮಕೃಷ್ಣಯ್ಯ, ಚಂದ್ರಶೇಖರ್, ಜಯಕುಮಾರ್, ವಾಸು ನಾಯಕ ಮತ್ತಿತರರು ಭಾಗವಹಿಸಿದ್ದರು.

ರಿಟರ್ನಿಂಗ್ ಅಧಿಕಾರಿ ಹೆಸರಿನ ಪತ್ರದಲ್ಲಿ ಏನಿದೆ?:

ಹಳ್ಳಿಮಾಳ ವಿವಿಧೊದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಚುನಾವಣೆ ಸಂಬಂಧ ಸಹಕಾರ ಇಲಾಖೆ ಹಾಗೂ ಪೊಲೀಸ್ ಇಲಾಖಾಧಿಕಾರಿಗಳ ನೇತೃತ್ವದಲ್ಲಿ ನಡೆದ ಶಾಂತಿಸಭೆಯಲ್ಲಿ ಚುನಾವಣೆ ನಡೆಸುವ ಕುರಿತು ಒಮ್ಮತದ ನಿರ್ಧಾರ ಪ್ರಕಟವಾಗದ ಕಾರಣ ಅಧ್ಯಕ್ಷರ ಚುನಾವಣೆ ಮುಂದೂಡಿರುವುದಾಗಿ ರಿಟರ್ನಿಂಗ್ ಅಧಿಕಾರಿ ರಮ್ಯಾಶ್ರೀ ತಿಳಿಸಿದ್ದಾರೆ ಎನ್ನಲಾಗಿದೆ.

ಸಂಘದ ಕಾರ್ಯನಿರ್ವಹಣಾಧಿಕಾರಿಗಳ ವಾಟ್ಸ್ಆಪ್ ಗೆ ರಿಟರ್ನಿಂಗ್ ಅಧಿಕಾರಿ ರಮ್ಯಾಶ್ರೀ ಅವರು ಹೊರಡಿಸಿದ್ದಾರೆ ಎನ್ನಲಾದ ಪ್ರಕಟಣೆಯಲ್ಲಿ ಶಾಂತಿಸಭೆಯಲ್ಲಿ ಚುನಾವಣೆ ನಡೆಸುವ ಬಗ್ಗೆ ಒಮ್ಮತದ ನಿರ್ಧಾರ ಪ್ರಕಟಿಸಲಿಲ್ಲ. ಸಹಕಾರ ಸಂಘಗಳ ಉಪನಿಬಂಧಕರು ಮತ್ತು ಪ್ರಾಥಮಿಕ ಸಹಕಾರ ಸಂಘಗಳ ಜಿಲ್ಲಾ ಚುನಾವಣಾಧಿಕಾರಿಗಳು ಜುಲೈ 8ರಂದು ನಿಗದಿ ಪಡಿಸಿದ್ದ ಸಂಘದ ಅಧ್ಯಕ್ಷರ ಚುನಾವಣೆಯನ್ನು ನಡೆಸುವ ಬಗ್ಗೆ ಯಾವುದೇ ಸ್ಪಷ್ಟ ನಿರ್ದೇಶನ ನೀಡಿಲ್ಲ. ಆದ್ದರಿಂದ ಸದರಿ ದಿನದಂದು ನಿಗದಿ ಪಡಿಸಲಾಗಿದ್ದ ಚುನಾವಣೆಯನ್ನು ಸ್ಪಷ್ಟ ನಿರ್ದೇಶನದ ನಂತರ ನಡೆಸಲಾಗುವುದು ಎಂದು ಉಲ್ಲೇಖಿಸಿದ್ದಾರೆ.