ಕದ್ರಾ ಜಲಾಶಯದಿಂದ ನೀರು ಹೊರಕ್ಕೆ

| Published : Jul 09 2024, 12:52 AM IST

ಸಾರಾಂಶ

ಜಲಾಶಯದ ನೀರಿನ ಮಟ್ಟ ಗರಿಷ್ಠ ಹಂತ ತಲಯಪಿರುವ ಹಿನ್ನೆಲೆ 4 ಗೇಟ್‌ನಿಂದ 10,600 ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ.

ಕಾರವಾರ: ತಾಲೂಕಿನಲ್ಲಿ ಸೋಮವಾರ ಬೆಳಗ್ಗೆಯಿಂದ ಮಳೆ ಕಡಿಮೆಯಾಗಿದ್ದು, ಕದ್ರಾ ಜಲಾಶಯದ ನಾಲ್ಕು ಗೇಟ್ ಮೂಲಕ 10,600 ಕ್ಯುಸೆಕ್ ನೀರನ್ನು ಹೊರಬಿಡಲಾಗಿದೆ.

ಕಳೆದ ಎರಡು ದಿನದ ಹಿಂದೆ ಉತ್ತಮ ಮಳೆಯಾಗಿದ್ದು, ಕೆಲವೆಡೆ ನೀರು ತುಂಬಿಕೊಂಡು ಜನರಿಗೆ ತೊಂದರೆ ಉಂಟಾಗಿತ್ತು. ಸೋಮವಾರ ಮಳೆ ತುಸು ಬಿಡುವು ನೀಡಿದೆ.

ಜಲಾನಯನ ಪ್ರದೇಶದಲ್ಲಿ ಉತ್ತಮವಾಗಿ ಸುರಿಯುತ್ತಿರುವ ಮಳೆಯಿಂದ ಕಾಳಿ ನದಿ ಭರ್ತಿಯಾಗುತ್ತಿದ್ದು, ಕಳೆದ ಎರಡು ದಿನದ ಹಿಂದೆ 6000 ಕ್ಯುಸೆಕ್ ನೀರು ಹೊರಬಿಡಲಾಗಿತ್ತು. ಜಲಾಶಯದ ನೀರಿನ ಮಟ್ಟ ಗರಿಷ್ಠ ಹಂತ ತಲಯಪಿರುವ ಹಿನ್ನೆಲೆ 4 ಗೇಟ್‌ನಿಂದ 10,600 ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ. 31,000 ಮೀ. ಹೊರಹರಿವು ಮತ್ತು 22,000 ಮೀ. ಒಳಹರಿವು ಇದೆ. 34.5 ಮೀ. ಗರಿಷ್ಠ ಮಟ್ಟವಾಗಿದ್ದು, ಜಿಲ್ಲಾಡಳಿತ 31 ಮೀ. ನಿಗದಿ ಮಾಡಿದೆ. ಜಲಾಶಯದಲ್ಲಿ 31.5 ಮೀ. ನೀರು ಸಂಗ್ರಹವಾದ ಹಿನ್ನೆಲೆಯಲ್ಲಿ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.

ಕಾಳಜಿ ಕೇಂದ್ರಕ್ಕೆ ಸಂಸದ ಕಾಗೇರಿ ಭೇಟಿ

ಹೊನ್ನಾವರ: ತಾಲೂಕಿನ ಗುಂಡಬಾಳ ನದಿಯಿಂದ ನೆರೆಪೀಡಿತ ಪ್ರದೇಶದ ಕಾಳಜಿ ಕೇಂದ್ರಗಳಿಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸೋಮವಾರ ಭೇಟಿ ನೀಡಿದರು.

ಗುಂಡಿಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ನಂ. 2 ಶಾಲೆಗೆ ಭೇಟಿ ನೀಡಿ ಕಾಳಜಿ ಕೇಂದ್ರದಲ್ಲಿರುವ ನೆರೆ ಸಂತ್ರಸ್ತರೊಂದಿಗೆ ಮಾತನಾಡಿ, ಕಾಳಜಿ ಕೇಂದ್ರದಲ್ಲಿ ಕುಂದುಕೊರತೆಗಳನ್ನು ಆಲಿಸಿದರು. ಎಷ್ಟು ಮನೆಗಳಿಗೆ ನೀರು ನುಗ್ಗುತ್ತದೆ ಎಂದು ಅಧಿಕಾರಿಗಳ ಬಳಿ ಮಾಹಿತಿ ಪಡೆದರು. 150 ಮನೆಗೆ ಪ್ರವಾಹ ಭೀತಿ ಆವರಿಸುತ್ತದೆ ಎಂದು ಪಿಡಿಒ ಅಣ್ಣಪ್ಪ ಮುಕ್ರಿ ತಿಳಿಸಿದರು.ತಾತ್ಕಾಲಿಕವಾಗಿ ಜನರೇಟರ್ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. ಕಾಳಜಿ ಕೇಂದ್ರ ಎಂದಮೇಲೆ ಸಣ್ಣಪುಟ್ಟ ಸಮಸ್ಯೆ ಇದ್ದಿದ್ದೆ. ಸ್ವಲ್ಪ ಸುಧಾರಿಸಿಕೊಳ್ಳಿ ಎಂದು ಸಲಹೆ ನೀಡಿದರು. ಗ್ರಾಮದಲ್ಲಿ ಕಂದಾಯ ಜಾಗ ಇದ್ದಲ್ಲಿ ನಿವೇಶನ ನೀಡಲಾಗುವುದು. ಈ ಬಗ್ಗೆ ನಾನು ಸರ್ಕಾರದ ಮಟ್ಟದಲ್ಲಿ ಚರ್ಚಿಸುತ್ತೇನೆ. ನಮ್ಮ ಮೇಲೆ ಭರವಸೆ ಇಡಿ ಎಂದರು.

ನಂತರ ಗುಂಡಿಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ನಂ. 1 ಶಾಲೆಗೆ ತೆರಳಿ ಅಲ್ಲಿಯು ಸಹ ನೆರೆ ಸಂತ್ರಸ್ತರೊಂದಿಗೆ ಮಾತನಾಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸುನೀಲ್ ನಾಯ್ಕ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಕರ್ಕಿ, ತಾಲೂಕಾಧ್ಯಕ್ಷ ಮಂಜುನಾಥ ನಾಯ್ಕ, ಮುಖಂಡರಾದ ಗೋವಿಂದ ನಾಯ್ಕ, ಗಣಪತಿ ನಾಯ್ಕ ಬಿ.ಟಿ., ಎಂ.ಎಸ್. ಹೆಗಡೆ ಕಣ್ಣಿ, ಎಚ್.ಆರ್. ಗಣೇಶ ಬಿಜೆಪಿ ಕಾರ್ಯಕರ್ತರು ಇದ್ದರು.