ಸಾರಾಂಶ
ಹೊನ್ನಾವರ ತಾಲೂಕಿನ ಕಡತೋಕಾ ಗ್ರಾಮದ ಗುಡ್ನಕಟ್ಟು ಮಜಿರೆಯಲ್ಲಿ ನೀರಿನ ಹರಿವು ಜಾಸ್ತಿ ಆಗಿದ್ದು, ಇಲ್ಲಿನ ನೆರೆಪೀಡಿತ ಪ್ರದೇಶದಲ್ಲಿನ 60 ಜನರನ್ನು ಎನ್‌ಡಿಆರ್‌ಎಫ್ ತಂಡ ಬೋಟ್ ಮೂಲಕ ಕರೆತಂದು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿದೆ.
ಕಾರವಾರ: ಜಿಲ್ಲೆಯಲ್ಲಿ ಸೋಮವಾರ ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗಿದ್ದು, ಹೊನ್ನಾವರದಲ್ಲಿ ಎನ್‌ಡಿಆರ್‌ಎಫ್ ತಂಡ 60 ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿದೆ. ಹೊನ್ನಾವರ ತಾಲೂಕಿನಲ್ಲಿ ತೆರೆಯಲಾದ 12 ಕಾಳಜಿ ಕೇಂದ್ರಗಳಲ್ಲಿ 437 ಮಂದಿ ಆಶ್ರಯ ಪಡೆದಿದ್ದಾರೆ.
ಹೊನ್ನಾವರ ತಾಲೂಕಿನ ಕಡತೋಕಾ ಗ್ರಾಮದ ಗುಡ್ನಕಟ್ಟು ಮಜಿರೆಯಲ್ಲಿ ನೀರಿನ ಹರಿವು ಜಾಸ್ತಿ ಆಗಿದ್ದು, ಇಲ್ಲಿನ ನೆರೆಪೀಡಿತ ಪ್ರದೇಶದಲ್ಲಿನ 60 ಜನರನ್ನು ಎನ್‌ಡಿಆರ್‌ಎಫ್ ತಂಡ ಬೋಟ್ ಮೂಲಕ ಕರೆತಂದು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿದೆ.ಕಾಳಜಿ ಕೇಂದ್ರದಲ್ಲಿ ನೆರೆ ಸಂತ್ರಸ್ತರಿಗೆ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ತೀವ್ರ ಮಳೆಯಿಂದ ತೊಂದರೆಗೊಳಗಾದ ವಿವಿಧ ಗ್ರಾಮಗಳ ಸಾರ್ವಜನಿಕರಿಗೆ ಅಗತ್ಯವಿದ್ದಲ್ಲಿ ಇನ್ನೂ ಹೆಚ್ಚಿನ ಕಾಳಜಿ ಕೇಂದ್ರಗಳನ್ನು ತೆರೆಯುವಂತೆ ಸಂಬಂಧಪಟ್ಟ ತಾಲೂಕುಗಳ ತಹಸೀಲ್ದಾರ್‌ಗಳಿಗೆ ಸೂಚನೆ ನೀಡಲಾಗಿದೆ.ಕದ್ರಾ ಜಲಾಶಯದಲ್ಲಿ ನೀರಿನ ಮಟ್ಟವು ಜಿಲ್ಲಾಡಳಿತ ನಿಗದಿಪಡಿಸಿದ ಮಟ್ಟಕ್ಕಿಂತ ಹೆಚ್ಚಾದ ಹಿನ್ನೆಲೆಯಲ್ಲಿ ಜಲಾಶಯದಿಂದ 10600 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 2 ಮನೆಗಳಿಗೆ ತೀವ್ರ ಹಾನಿ ಹಾಗೂ 13 ಮನೆಗಳಿಗೆ ಭಾಗಶಃ ಹಾನಿಯಾಗಿದೆ.
ಜಿಲ್ಲೆಯಲ್ಲಿ ಮಳೆಯಿಂದ ಯಾವುದೇ ಮಾನವ ಜೀವಹಾನಿಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.ಭಟ್ಕಳ ತಾಲೂಕಿನಲ್ಲಿ ಸೋಮವಾರ ಭಾರಿ ಮಳೆ ಸುರಿದಿದೆ. ಹಲವೆಡೆ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆಯಾಗಿತ್ತು. ಕೆಲವೆಡೆ ಮನೆಗಳು ಉರುಳಿವೆ.
ಆಕಳು ಸಾವು: ಶಿರಸಿ ತಾಲೂಕಿನಾದ್ಯಂತ ಸೋಮವಾರ ಸುರಿದ ಮಳೆಗೆ ಕೊಟ್ಟಿಗೆ ಮೇಲೆ ಮರ ಮುರಿದು ಬಿದ್ದು ಆಕಳೊಂದು ಮೃತಪಟ್ಟಿದೆ. ಮೆಣಸಿ ಗ್ರಾಮದ ಬೈಲ್‌ಗದ್ದೆಯ ಅನಂತ್ ದೇವು ಮರಾಠಿ ಎಂಬವರ ಕೊಟ್ಟಿಗೆ ಮೇಲೆ ಮರ ಮುರಿದು ಬಿದ್ದು ಅಂದಾಜು ₹೨೦ ಸಾವಿರ ಮೌಲ್ಯದ ಆಕಳು ಮೃತಪಟ್ಟಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಪಂ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದ್ದಾರೆ.