ಸೊಳ್ಳೆ ಉತ್ಪತ್ತಿಯಾಗದಂತೆ ಪರಿಸರ ಸ್ವಚ್ಛವಿದ್ದರೆ ಡೆಂಘೀ ನಿಯಂತ್ರಣ

| Published : Jul 28 2024, 02:05 AM IST

ಸೊಳ್ಳೆ ಉತ್ಪತ್ತಿಯಾಗದಂತೆ ಪರಿಸರ ಸ್ವಚ್ಛವಿದ್ದರೆ ಡೆಂಘೀ ನಿಯಂತ್ರಣ
Share this Article
  • FB
  • TW
  • Linkdin
  • Email

ಸಾರಾಂಶ

ಸೊಳ್ಳೆಗಳ ಉತ್ಪತ್ತಿಯಾಗದಂತೆ ಪರಿಸರ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ತ್ಯಾಜ್ಯ ವಸ್ತು ಶೇಖರಣೆ ಮಾಡದಂತೆ ಹಾಗೂ ತೆಂಗಿನ ಚಿಪ್ಪು ಟೈಯರ್‌ಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ.

ಕನ್ನಡಪ್ರಭ ವಾರ್ತೆ ಸಿರಿಗೆರೆ

ಮಳೆಗಾಲದಲ್ಲಿ ಎಲ್ಲರಿಗೂ ಕಾಟ ಕೊಡುವ ಡೆಂಘೀ ನಿಯಂತ್ರಿಸದಿದ್ದರೆ ಸಮಸ್ಯೆಗಳನ್ನು ಎದುರಿಸಬೇಕಾದಂತ ಪರಿಸ್ಥಿತಿ ನಿರ್ಮಾಣಗೊಳ್ಳುತ್ತದೆ ಎಂದು ಶಿಕ್ಷಕ ಮಲ್ಲಿಕಾರ್ಜುನ ಸ್ವಾಮಿ ತಿಳಿಸಿದರು.

ಸಿರಿಗೆರೆ ಸಮೀಪದ ಅಳಗವಾಡಿ ಗ್ರಾಮದಲ್ಲಿ ಶನಿವಾರ ಮಡಿಲು ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹಾಯದೊಂದಿಗೆ ಡೆಂಘೀ ನಿಯಂತ್ರಣ ಕುರಿತು ಸಾರ್ವಜನಿಕರಲ್ಲಿ ಅರಿವು ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಮಳೆಗಾಲದಲ್ಲಿ ಮನೆ ಸುತ್ತಮುತ್ತ ಸೊಳ್ಳೆಗಳ ಉತ್ಪತ್ತಿಯಾಗದಂತೆ ಪರಿಸರ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ತ್ಯಾಜ್ಯ ವಸ್ತು ಶೇಖರಣೆ ಮಾಡದಂತೆ ಹಾಗೂ ತೆಂಗಿನ ಚಿಪ್ಪು ಟೈಯರ್‌ಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಡೆಂಘೀ ಒಮ್ಮೆ ಬಂದರೆ ಆರೋಗ್ಯದಲ್ಲಿ ಚೇತರಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಡಬೇಕಾಗುತ್ತದೆ. ಹಾಗಾಗೀ ಪ್ರತಿಯೊಬ್ಬ ವಿದ್ಯಾರ್ಥಿಯು ಇದರ ಬಗ್ಗೆ ಪೋಷಕರಲ್ಲಿ ಜಾಗೃತಿ ಮೂಡಿಸಿ ಡೆಂಘೀ ನಿಯಂತ್ರಿಸಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮಡಿಲ ಸಂಸ್ಥೆ ಅಧ್ಯಕ್ಷ ಕುಮಾರಸ್ವಾಮಿ ಎಚ್. ಮಾತನಾಡಿ, ಡೆಂಘೀ ನಿಯಂತ್ರಿಸಲು ನಮ್ಮ ಮನೆಯಲ್ಲಿ ನಾವು ಕೆಲವೊಂದಿಷ್ಟು ಉಪಯೋಗ ಕಂಡು ಕೊಳ್ಳಬಹುದು ಅದೇ ರೀತಿ ಬೇವಿನ ಸೊಪ್ಪಿನ ಹೊಗೆ ಹಾಕಬೇಕು ಜೊತೆಗೆ ರಾತ್ರಿ ವೇಳೆ ಮಲಗುವ ಸಂದರ್ಭದಲ್ಲಿ ಸೊಳ್ಳೆ ಪರದೆ ಬಳಸಿದಾಗ ಮಾತ್ರ ಡೆಂಘೀಯಿಂದ ರಕ್ಷಿಸಿಕೊಳ್ಳಬಹುದು ಎಂದರು.

ಹಿಂದಿನ ಕಾಲದಲ್ಲಿ ಸೊಳ್ಳೆ ನಾಶಕ್ಕೆ ಹೊಂಗೆ ಸೊಪ್ಪು, ಚೆಂಡು ಹೂ ಸಗಣಿ ಬೆರಣಿಗಳಿಂದ ಸಂಜೆ ವೇಳೆ ಮನೆ ಅಂಗಳದಲ್ಲಿ ಅವುಗಳನ್ನು ಹಚ್ಚಿ ಇಡುತ್ತಿದ್ದರು. ಆಗ ಸೊಳ್ಳೆಗಳು ಸತ್ತು ಹೋಗುತ್ತಿದ್ದವು. ಇಂತಹ ಮನೆ ಮದ್ದುಗಳನ್ನು ನಾವು ಉಪಯೋಗಿಸಿದರೆ ಸೊಳ್ಳೆಗಳ ನಿಯಂತ್ರಣ ಮಾಡಬಹುದಾಗಿದೆ ಎಂದರು.

ಶಾಲೆ ಹಳೆಯ ವಿದ್ಯಾರ್ಥಿ ಅನಿಲ್ ಜಂಬೆ ಮಾತನಾಡಿ, ಮಡಿಲು ಸಂಸ್ಥೆಯಿಂದ ಸಾಕಷ್ಟು ಸಾಮಾಜಿಕ ಸೇವೆಗಳನ್ನು ಜಿಲ್ಲಾದ್ಯಂತ ಮಾಡುತ್ತಲೇ ಬರುತ್ತಿದ್ದಾರೆ. ಪರಿಸರ ಜಾಗೃತಿ,ಆರೋಗ್ಯ ತಪಾಸಣೆ, ಸ್ವಚ್ಛತೆ ಅರಿವು, ಕಾನೂನು ಅರಿವು-ನೆರವು ಇದೇ ರೀತಿ ವಿಶೇಷ ಕಾರ್ಯಕ್ರಮಗಳನ್ನು ಮಾಡುತ್ತಾ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಾ ಬರುತ್ತಿದ್ದಾರೆ. ಅಳಗವಾಡಿ ಗ್ರಾಮದಲ್ಲಿ ಡೆಂಘೀ ತಡೆಗಟ್ಟುವ ನಿಟ್ಟಿನಲ್ಲಿ ಜಾಗೃತಿ ಜಾಥಾ ಮಾಡುತ್ತಿರುವುದು ಸಂತಸದ ವಿಚಾರ ಎಂದರು.

ಶಾಲೆ ಆವರಣದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳು ಡೆಂಘೀ ನಿಯಂತ್ರಿಸುವ ಬಿತ್ತಿ ಚಿತ್ರ ಪ್ರದರ್ಶಿಸುವುದರ ಮೂಲಕ ಜಾಥಾ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರು. ಕಾರ್ಯಕ್ರಮದಲ್ಲಿ ಸಹಿಪ್ರಾ ಶಾಲಾ ಮುಖ್ಯ ಶಿಕ್ಷಕ ನಾರಪ್ಪ, ಸಹ ಶಿಕ್ಷಕರಾದ ಶಿವಮೂರ್ತಿ, ಹೈದರಾಲಿ, ಸಂಧ್ಯಾ, ಮಡಿಲ ಸಂಸ್ಥೆ ಕಾರ್ಯದರ್ಶಿ ಆನಂದಪ್ಪ.ಡಿ ಸದಸ್ಯರಾದ ಪ್ರದೀಪ್, ಪ್ರವೀಣ್, ಸುಮನ್, ರಾಘವೇಂದ್ರ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದ್ದರು.