ವಿಜಯನಗರದಲ್ಲಿ ಡೆಂಘೀ ಹಾವಳಿ

| Published : Oct 06 2023, 01:17 AM IST

ಸಾರಾಂಶ

ಜಿಲ್ಲೆಯಲ್ಲಿ ಹೆಚ್ಚಿನ ಶಂಕಿತ ಪ್ರಕರಣಗಳು ವರದಿಯಾಗುತ್ತಿದ್ದು, ಈವರೆಗೆ ಒಟ್ಟು 61 ಖಚಿತ ಡೆಂಘೀ ಪ್ರಕರಣಗಳು ವರದಿಯಾಗಿವೆ.
ಕೃಷ್ಣ ಎನ್‌. ಲಮಾಣಿ ಕನ್ನಡಪ್ರಭ ವಾರ್ತೆ ಹೊಸಪೇಟೆ ವಿಜಯನಗರ ಜಿಲ್ಲೆಯಲ್ಲಿ ಡೆಂಘೀ ಜ್ವರದ ಹಾವಳಿ ಜೋರಾಗಿದ್ದು, ಈಗಾಗಲೇ 61 ಖಚಿತ ಪ್ರಕರಣಗಳು ಹಾಗೂ 587 ಶಂಕಿತ ಡೆಂಘೀ ಜ್ವರದ ಪ್ರಕರಣಗಳು ದಾಖಲಾಗಿವೆ. ಹಾಗಾಗಿ ಜಿಲ್ಲಾ ಆರೋಗ್ಯ ಇಲಾಖೆ ಕೂಡ ಡೆಂಘೀ ಜ್ವರದ ಸಮೀಕ್ಷೆಗೆ ಇಳಿದಿದೆ. ಕಳೆದ ಎರಡು ತಿಂಗಳಲ್ಲಿ ಡೆಂಘೀ ಜ್ವರ ಜಿಲ್ಲೆಯಲ್ಲಿ ಹೆಚ್ಚು ಕಾಣಿಸುತ್ತಿದೆ. ಜಿಲ್ಲೆ ಜನರು ಬರಗಾಲದ ಹಿನ್ನೆಲೆಯಲ್ಲಿ ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು, ಮೈಸೂರು ಕಡೆಗೆ ವಲಸೆ ಹೋಗುತ್ತಿದ್ದಾರೆ. ಜ್ವರ ಕಂಡುಬರುತ್ತಲೇ ವಾಪಸ್‌ ಕೂಡ ಆಗುತ್ತಿದ್ದಾರೆ. ಹಾಗಾಗಿ ಡೆಂಘೀ ಜ್ವರದ ಪ್ರಕರಣಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿದ್ದಂತಯೇ ಜಿಲ್ಲಾ ಆರೋಗ್ಯ ಇಲಾಖೆ ಲಾರ್ವಾ ಸರ್ವೇಗೆ ಇಳಿದಿದೆ. ಸೊಳ್ಳೆಯಿಂದ ಹರಡುವ ಈ ಜ್ವರದ ನಿಯಂತ್ರಣಕ್ಕೆ ಶುಚಿತ್ವ ಹಾಗೂ ರೋಗ ಹತೋಟಿ ಕ್ರಮಗಳೇ ಪ್ರಮುಖ ಅಂಶಗಳು ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಈಗ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. 61 ಖಚಿತ, 587 ಶಂಕಿತ ಪ್ರಕರಣ: ಜಿಲ್ಲೆಯಲ್ಲಿ ಹೆಚ್ಚಿನ ಶಂಕಿತ ಪ್ರಕರಣಗಳು ವರದಿಯಾಗುತ್ತಿದ್ದು, ಈವರೆಗೆ ಒಟ್ಟು 61 ಖಚಿತ ಡೆಂಘೀ ಪ್ರಕರಣಗಳು ವರದಿಯಾಗಿವೆ. ಪ್ರತಿದಿನವೂ ಶಂಕಿತ ಪ್ರಕರಣಗಳು ವರದಿಯಾಗುತ್ತಿದ್ದು, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಮಕ್ಕಳನ್ನು ಇನ್ನಿಲ್ಲದಂತೆ ಕಾಡುತ್ತಿರುವ ಜ್ವರ ಪೋಷಕರಲ್ಲಿ ಡೆಂಘೀ ಆತಂಕವನ್ನುಂಟು ಮಾಡಿದೆ. ಆರೋಗ್ಯ ಇಲಾಖೆಯಿಂದ ಡೆಂಘೀ ನಿಯಂತ್ರಣಕ್ಕೆ ಲಾರ್ವಾ ಸರ್ವೇ ನಡೆಸಲಾಗುತ್ತಿದೆ. ಜತೆಗೆ ಡೆಂಘೀ ರಥಕ್ಕೆ ಚಾಲನೆ ನೀಡಲಾಗಿದ್ದು, ಜಿಲ್ಲಾದ್ಯಂತ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲೆಯ ಆರು ತಾಲೂಕುಗಳಲ್ಲಿ ಈವರೆಗೆ 61 ಡೆಂಘೀ ಪ್ರಕರಣಗಳು ವರದಿಯಾಗಿವೆ. ಹೊಸಪೇಟೆಯಲ್ಲಿ 31, ಕೂಡ್ಲಿಗಿಯಲ್ಲಿ 10, ಹೂವಿನಹಡಗಲಿ 5, ಕೊಟ್ಟೂರು 4, ಹರಪನಹಳ್ಳಿ 6, ಮತ್ತು ಹಗರಿಬೊಮ್ಮನಹಳ್ಳಿ 5 ಖಚಿತ ಡೆಂಘೀ ಪ್ರಕರಣಗಳು ವರದಿಯಾಗಿವೆ. ಶಂಕಿತ ಪ್ರಕರಣಗಳು ಹೆಚ್ಚಾಗಿವೆ. ಹಾಗಾಗಿ ಶುಚಿತ್ವಕ್ಕೆ ಸ್ಥಳೀಯಾಡಳಿತಗಳು ಕ್ರಮವಹಿಸಬೇಕಿದೆ. ಸ್ಥಳೀಯ ಸಂಸ್ಥೆಗಳ ನಿರ್ಲಕ್ಷ್ಯ: ಜಿಲ್ಲೆಯಲ್ಲಿ ಡೆಂಘೀ ಉಲ್ಬಣವಾಗಿದ್ದರೂ ಸ್ಥಳೀಯ ಸಂಸ್ಥೆಗಳು ನಿರ್ಲಕ್ಷ್ಯ ವಹಿಸುತ್ತಿವೆ. ಗ್ರಾಮ ಪಂಚಾಯಿತಿ ಸೇರಿದಂತೆ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಗಳಲ್ಲಿ ಕನಿಷ್ಠ ಫಾಗಿಂಗ್‌ ಕೂಡ ಮಾಡಲಾಗುತ್ತಿಲ್ಲ. ಚರಂಡಿಗಳಲ್ಲಿ ಮಲಿನ ನೀರು ನಿಲ್ಲುತ್ತಿದ್ದರೂ ಸ್ವಚ್ಛಗೊಳಿಸಲಾಗುತ್ತಿಲ್ಲ. ಜನರಲ್ಲಿ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿಲ್ಲ. ಡೆಂಘೀ ಜ್ವರದ ಹಾವಳಿ ಜಾಸ್ತಿಯಾಗಿದ್ದರೂ ಸ್ಥಳೀಯ ಸಂಸ್ಥೆಗಳು ತಮ್ಮ ಹೊಣೆಗಾರಿಕೆ ಮರೆತಿರುವುದರಿಂದ ಜನರು ಡೆಂಘೀ ಜ್ವರ ಸೇರಿದಂತೆ ಮೈ, ಕೈ, ನೋವು, ಜ್ವರದಿಂದ ಬಳಲುವಂತಾಗಿದೆ. ಜಿಲ್ಲೆಯಲ್ಲಿ ಡೆಂಘೀ ಜ್ವರ ತಡೆಗಟ್ಟಲು ಕ್ರಮವಹಿಸಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಲಾರ್ವಾ ಸರ್ವೇ ಕೂಡ ನಡೆಸಲಾಗಿದೆ. ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಜತೆಗೆ ಆರೋಗ್ಯ ಇಲಾಖೆಯಿಂದ ಅಗತ್ಯ ಚಿಕಿತ್ಸೆ ಕೂಡ ನೀಡಲಾಗುತ್ತಿದೆ. ಡಾ. ಎಲ್.ಆರ್. ಶಂಕರ ನಾಯ್ಕ, ಡಿಎಚ್‌ಒ, ವಿಜಯನಗರ