ಸಾರಾಂಶ
ನರಸಿಂಹರಾಜಪುರ, ಜಿಲ್ಲೆಯ ಎಲ್ಲಾ ಕಡೆ ಈ ವರ್ಷ ಡೆಂಘೀ ಜ್ವರ ಕಾಣಿಸಿಕೊಳ್ಳುತ್ತಿದ್ದು ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳನ್ನು ಸುರಕ್ಷಿತ ವಾಗಿ ನೋಡಿಕೊಳ್ಳಬೇಕು ಎಂದು ನಾಗಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೀನಾ ಬೆನ್ನಿ ಸಲಹೆ ನೀಡಿದರು.
ನಾಗಲಾಪುರ ಗ್ರಾಮ ಪಂಚಾಯಿತಿಯಲ್ಲಿ 8 ಅಂಗನವಾಡಿಗಳಿಗೆ ಬೆಡ್‌ಶೀಟು, ಚಾಪೆ ವಿತರಣೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಜಿಲ್ಲೆಯ ಎಲ್ಲಾ ಕಡೆ ಈ ವರ್ಷ ಡೆಂಘೀ ಜ್ವರ ಕಾಣಿಸಿಕೊಳ್ಳುತ್ತಿದ್ದು ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳನ್ನು ಸುರಕ್ಷಿತ ವಾಗಿ ನೋಡಿಕೊಳ್ಳಬೇಕು ಎಂದು ನಾಗಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೀನಾ ಬೆನ್ನಿ ಸಲಹೆ ನೀಡಿದರು.
ಇತ್ತೀಚೆಗೆ ನಾಗಲಾಪುರ ಗ್ರಾಮ ಪಂಚಾಯಿತಿಯಲ್ಲಿ ನಡೆದ ನಿಧಿ-1 ರ ಅನುದಾನದಲ್ಲಿ 8 ಅಂಗನವಾಡಿಗಳಿಗೆ ಚಾಪೆ, ಬೆಡ್‌ಶೀಟು ವಿತರಣೆ ಹಾಗೂ ನಿವೃತ್ತಿಗೊಂಡ ಅಂಗನವಾಡಿ ಕಾರ್ಯಕರ್ತೆಗೆ ಬೀಳ್ಕೊಡಿಗೆ, ನೂತನ ಕಾರ್ಯದರ್ಶಿಗೆ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು. ಅಂಗನವಾಡಿ, ಮನೆಯ ಸುತ್ತ ನೀರು ನಿಲ್ಲದಂತೆ ಜಾಗ್ರತೆ ವಹಿಸಬೇಕು. ಸ್ವಚ್ಛತೆ ಬಗ್ಗೆ ಗಮನ ನೀಡಬೇಕು. ಅಂಗನವಾಡಿ ಕಾರ್ಯಕರ್ತೆಯರು ಗ್ರಾಮ ಪಂಚಾಯಿತಿ ನೀಡಿದ ಬೆಡ್‌ಶೀಟು, ಚಾಪೆ ಯನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.ಮುಂಡೊಳ್ಳಿ ಅಂಗನವಾಡಿಯಲ್ಲಿ 32 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಶ್ಯಾಮಲ ಅದೇ ಅಂಗನವಾಡಿಯಲ್ಲಿ ತಮ್ಮ ವೃತ್ತಿ ಪ್ರಾರಂಭಿಸಿ ಇಲ್ಲೇ ನಿವೃತ್ತರಾಗಿದ್ದಾರೆ. ಸರ್ಕಾರಿ ನೌಕರಿಗೆ ನಿವೃತ್ತಿ ಎಂಬುದು ಸಹಜ ಪ್ರಕ್ರಿಯೆ. ವೃತ್ತಿಯಿಂದ ನಿವೃತ್ತಿಯಾದರೂ ಜೀವನದಲ್ಲಿ ನಿವೃತ್ತಿ ಎಂಬುದು ಇಲ್ಲ. ನಿಮ್ಮ ಸೇವೆಯನ್ನು ಬೇರೆ ಕ್ಷೇತ್ರದಲ್ಲೂ ತೊಡಗಿಸಿಕೊಳ್ಳಿ ಎಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ 8 ಅಂಗನವಾಡಿ ಕಾರ್ಯಕರ್ತೆಯರಿಗೆ ಚಾಪೆ, ಬೆಡ್‌ಶೀಟು ವಿತರಿಸಲಾಯಿತು. ನಿವೃತ್ತಗೊಂಡ ಅಂಗನವಾಡಿ ಕಾರ್ಯಕರ್ತೆ ಶ್ಯಾಮಲ ಅವರನ್ನು ಸನ್ಮಾನಿಸಲಾಯಿತು. ನೂತನ ಕಾರ್ಯದರ್ಶಿ ಪ್ರಕಾಶ್ ಅವರನ್ನು ಸ್ವಾಗತಿಸಲಾಯಿತು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಆಶಾ, ಪಿಡಿಓ ಪ್ರೇಂ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರು, ಅಂಗನವಾಡಿ ಶಿಕ್ಷಕಿಯರು, ಗ್ರಾಮ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.